×
Ad

ಮರಣ ಮೃದಂಗ ಬಾರಿಸುತ್ತಿರುವ ಉತ್ತರ ಕನ್ನಡದ ಹೆದ್ದಾರಿಗಳು: ಮೂರು ವರ್ಷಗಳಲ್ಲಿ 726 ಮಂದಿ ಮೃತ್ಯು

Update: 2026-02-01 10:41 IST

ಭಟ್ಕಳ: ಸೌಂದರ್ಯದ ಗಣಿ ಎನಿಸಿಕೊಂಡಿರುವ ಪ್ರವಾಸಿ ಜಿಲ್ಲೆ ಉತ್ತರ ಕನ್ನಡದ ರಾಷ್ಟ್ರೀಯ ಹೆದ್ದಾರಿಗಳು ಇದೀಗ ಮರಣ ಮೃದಂಗ ಬಾರಿಸುತ್ತಿವೆ. ಹದಗೆಟ್ಟ ರಸ್ತೆಗಳು, ಅವೈಜ್ಞಾನಿಕ ಕಾಮಗಾರಿ ಮತ್ತು ನಿಯಂತ್ರಣವಿಲ್ಲದ ವಾಹನ ಸಂಚಾರದಿಂದಾಗಿ ಜಿಲ್ಲೆಯ ಹೆದ್ದಾರಿಗಳು ರಕ್ತಸಿಕ್ತವಾಗುತ್ತಿವೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲಾದ್ಯಂತ ಸಂಭವಿಸಿರುವ ರಸ್ತೆ ಅಪಘಾತಗಳಲ್ಲಿ 726 ಮಂದಿ ಪ್ರಾಣ ಕಳೆದುಕೊಂಡಿದ್ದು, 5,124 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬುದು ಆತಂಕಕಾರಿ ಸಂಗತಿ.

 ಅಧಿಕೃತ ಅಂಕಿಅಂಶಗಳೇ ಎಚ್ಚರಿಕೆಯ ಗಂಟೆ

ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕೃತ ಅಂಕಿಅಂಶಗಳ ಪ್ರಕಾರ, 2023ರಿಂದ 2025ರ ವರೆಗೆ ರಸ್ತೆ ಅಪಘಾತಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಬಂದಿದೆ.

2023ರಲ್ಲಿ 233 ಅಪಘಾತಗಳು ಸಂಭವಿಸಿದ್ದು, 248 ಮಂದಿ ಸಾವನ್ನಪ್ಪಿದ್ದರೆ, 2024ರಲ್ಲಿ ಅಪಘಾತಗಳ ಸಂಖ್ಯೆ 264ಕ್ಕೆ ಏರಿಕೆಯಾಗಿದೆ. 2025ರಲ್ಲಿ ಇದುವರೆಗೆ 192 ಅಪಘಾತಗಳು ಸಂಭವಿಸಿದ್ದು, 214 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೆಚ್ಚಿನ ಅಪಘಾತಗಳು ರಾಷ್ಟ್ರೀಯ ಹೆದ್ದಾರಿಗಳಲ್ಲೇ ಸಂಭವಿಸುತ್ತಿದ್ದು, ಮಳೆಗಾಲದಲ್ಲಿ ಉಂಟಾಗುವ ದೊಡ್ಡ ಗುಂಡಿಗಳು ಮತ್ತು ಅಪೂರ್ಣ ಕಾಮಗಾರಿ ಈ ದುರಂತಗಳಿಗೆ ಪ್ರಮುಖ ಕಾರಣವಾಗಿವೆ.

ಅಪಘಾತಗಳ ಹಾಟ್ ಸ್ಪಾಟ್ ಆಗಿರುವ ಭಟ್ಕಳ

ರಾಷ್ಟ್ರೀಯ ಹೆದ್ದಾರಿ–66 ಹಾದುಹೋಗುವ ಭಟ್ಕಳ ವ್ಯಾಪ್ತಿಯಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿರುವುದು ಸಾರ್ವಜನಿಕರಲ್ಲಿ ಭಾರೀ ಆತಂಕ ಮತ್ತು ಆಕ್ರೋಶ ಮೂಡಿಸಿದೆ. ಕೇವಲ 600 ಮೀಟರ್ ವ್ಯಾಪ್ತಿಯಲ್ಲೇ ಒಂದೇ ತಿಂಗಳಲ್ಲಿ ವಿದ್ಯಾರ್ಥಿಗಳು, ಯುವಕರು ಸೇರಿದಂತೆ ಆರು ಮಂದಿ ಜೀವ ಕಳೆದುಕೊಂಡಿರುವುದು ಹೆದ್ದಾರಿ ಯೋಜನೆಯ ಅವೈಜ್ಞಾನಿಕತೆಗೆ ಕನ್ನಡಿ ಹಿಡಿದಂತಿದೆ.

ನವಾಯತ್ ಕಾಲನಿ, ಮುರ್ಡೇಶ್ವರ–ಬಸ್ತಿಮಕ್ಕಿ, ವೆಂಕಟಾಪುರ ಹಳೆಯ ಸೇತುವೆ ಸುತ್ತಮುತ್ತ ಸಂಭವಿಸುತ್ತಿರುವ ರಸ್ತೆ ಅಪಘಾತಗಳು ಸ್ಥಳೀಯರ ನಿದ್ದೆಗೆಡಿಸಿವೆ. ಹಳೆಯ ಸೇತುವೆ ಮುಚ್ಚಿ ಹೊಸ ಸೇತುವೆಯಲ್ಲಿ ದ್ವಿಮುಖ ಸಂಚಾರ ಆರಂಭಿಸಿದ ಬಳಿಕ ಅಪಘಾತಗ ಸಂಭವಿಸುವ ಅಪಾಯ ಇನ್ನಷ್ಟು ಹೆಚ್ಚಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ವಿಳಂಬಗೊಂಡ ಕಾಮಗಾರಿ, ಮರೀಚಿಕೆಯಾದ ಸರ್ವಿಸ್ ರಸ್ತೆ, ಹೆದ್ದಾರಿ ಅಗಲೀಕರಣ ಕಾಮಗಾರಿ ವರ್ಷಗಳಿಂದಲೂ ಮಂದಗತಿಯಲ್ಲಿ ಸಾಗುತ್ತಿರುವುದೇ ಅಪಘಾತಗಳಿಗೆ ಮೂಲ ಕಾರಣ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ. ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಬೇಕಿದ್ದ ಚತುಷ್ಪಥ ಹೆದ್ದಾರಿ ಯೋಜನೆಗೆ ದಶಕಕ್ಕೂ ಹೆಚ್ಚು ಕಾಲ ಕಳೆದರೂ ಕೆಲಸ ಮುಗಿದಿಲ್ಲ.

ನಗರದ ಮಧ್ಯಭಾಗದಿಂದ ಹೆದ್ದಾರಿ ಹಾದುಹೋಗುವಂತಾಗಿರುವುದರಿಂದ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಮತ್ತು ಸ್ಥಳೀಯರು ಪ್ರತಿನಿತ್ಯ ಜೀವಭಯದಲ್ಲಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅನೇಕ ಕಡೆಗಳಲ್ಲಿ ಸರ್ವಿಸ್ ರಸ್ತೆ ಇಲ್ಲ, ಸೂಚನಾ ಫಲಕಗಳ ಕೊರತೆ ಇದೆ. ಮಳೆಗಾಲದಲ್ಲಿ ಹೆದ್ದಾರಿ ಕೆರೆಯಂತಾಗಿ ಪರಿವರ್ತನೆಯಾಗುವುದು ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ.

ತ್ವರಿತ ಕ್ರಮಕ್ಕೆ ಸಾರ್ವಜನಿಕರ ಆಗ್ರಹ

ಅಪಘಾತಗಳ ಪ್ರಮಾಣ ತಗ್ಗಿಸಲು ಹೆದ್ದಾರಿಯ ಅಪಾಯಕಾರಿ ತಿರುವುಗಳಲ್ಲಿ ಎಚ್ಚರಿಕೆ ಫಲಕಗಳು, ಬೀದಿದೀಪಗಳು ಮತ್ತು ಪಾದಚಾರಿಗಳಿಗೆ ಪ್ರತ್ಯೇಕ ಮಾರ್ಗಗಳನ್ನು ಕಲ್ಪಿಸುವುದು ತುರ್ತು ಅಗತ್ಯವಾಗಿದೆ. ಹೆದ್ದಾರಿ ಅಧಿಕಾರಿಗಳು ಕೇವಲ ಕಾಮಗಾರಿ ಮುಗಿಸುವುದಷ್ಟೇ ಅಲ್ಲದೆ, ಸಾರ್ವಜನಿಕರ ಜೀವ ರಕ್ಷಣೆಗೂ ಆದ್ಯತೆ ನೀಡಬೇಕೆಂದು ಜಿಲ್ಲೆಯ ಜನತೆ ಆಗ್ರಹಿಸುತ್ತಿದ್ದಾರೆ.

ಶಿರೂರು ಟೋಲ್ ಗೇಟ್ ನಲ್ಲಿ ಸುಂಕ ವಸೂಲಿ ನಡೆಯುತ್ತಿದ್ದರೂ ಕಾಮಗಾರಿ ಅಪೂರ್ಣವಾಗಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈಗಲಾದರೂ ಎಚ್ಚೆತ್ತುಕೊಂಡು ರಸ್ತೆ ಸುರಕ್ಷತೆಗೆ ವೈಜ್ಞಾನಿಕ ಕ್ರಮ ಕೈಗೊಳ್ಳದಿದ್ದರೆ, ಹೆದ್ದಾರಿಗಳು ಮತ್ತಷ್ಟು ರಕ್ತವನ್ನು ಹರಿಸಲಿವೆ.


ಇವು ಅಪಘಾತಗಳಲ್ಲ, ನಿರ್ಲಕ್ಷ್ಯದ ಕೊಲೆಗಳು: ಸತೀಶ್ ಕುಮಾರ್ ನಾಯ್ಕ

 “ರಾಷ್ಟ್ರೀಯ ಹೆದ್ದಾರಿ–66ರ ಅಗಲೀಕರಣ ಕಾಮಗಾರಿ ವಿಳಂಬದಿಂದ ಭಟ್ಕಳದಲ್ಲಿ ಜೀವಗಳೇ ಹೋಗುತ್ತಿವೆ. ಐಆರ್ ಬಿ ಕಂಪೆನಿ ಕಳೆದ 13 ವರ್ಷಗಳಿಂದ ನಾಗರಿಕರನ್ನು ಸತಾಯಿಸುತ್ತಲೇ ಬಂದಿದೆ. ಜಿಲ್ಲೆಯ ಇತರ ಭಾಗಗಳಿಗಿಂತ ಭಟ್ಕಳದಲ್ಲಿ ಕಾಮಗಾರಿಗೆ ಯಾವುದೇ ವೇಗ ಇಲ್ಲ. ಎರಡು ತಿಂಗಳ ಹಿಂದೆ ಯೋಜನಾ ನಿರ್ದೇಶಕರೊಂದಿಗೆ ನಡೆದ ಸಭೆಯಲ್ಲಿ ಒಂದು ವಾರದೊಳಗೆ ಕಾಮಗಾರಿ ಆರಂಭಿಸುವ ಭರವಸೆ ನೀಡಲಾಗಿತ್ತು. ಆದರೆ ಅದು ಕೇವಲ ಕಣ್ಣೊರೆಸುವ ಮಾತಾಗಿ ಉಳಿದಿದೆ'' ಎಂದು ನಾಗರಿಕ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ನಾಯ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

''ಅಪೂರ್ಣ ಮತ್ತು ಅವ್ಯವಸ್ಥಿತ ಕಾಮಗಾರಿಯೇ ಇಂದು ಅಪಘಾತಗಳಿಗೆ ನೇರ ಕಾರಣವಾಗಿದೆ. ರಸ್ತೆ ವಿನ್ಯಾಸ ಸ್ಪಷ್ಟವಿಲ್ಲದೆ ಹೊರಗಿನ ಚಾಲಕರು ನುಗ್ಗುತ್ತಿದ್ದು, ಅದರ ಬೆಲೆ ಸ್ಥಳೀಯರು ತಮ್ಮ ಪ್ರಾಣಗಳಿಂದ ಕಟ್ಟಬೇಕಾಗಿದೆ. ಭಟ್ಕಳದಲ್ಲಿ ಇತ್ತೀಚೆಗೆ ಸಂಭವಿಸಿರುವ ಹಲವು ಅಪಘಾತಗಳು ಅಪಘಾತಗಳಲ್ಲ, ಐಆರ್ ಬಿ ಕಂಪೆನಿಯ ನಿರ್ಲಕ್ಷ್ಯದಿಂದ ನಡೆದ ಪ್ರಾಯೋಜಿತ ಕೊಲೆಗಳು”ಎಂದು ಹೇಳಿದ್ದಾರೆ.

ಭಟ್ಕಳದಲ್ಲಿ ಬೈಪಾಸ್ ಬೇಡಿಕೆ ಕಡಗಣನೆಯಿಂದಲೇ ಸಮಸ್ಯೆ

ಚತುಷ್ಪಥ ಹೆದ್ದಾರಿ ಯೋಜನೆ ಪ್ರಾರಂಭದ ಹಂತದಲ್ಲೇ ಸಂಚಾರ ದಟ್ಟಣೆ ಹಾಗೂ ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ ಭಟ್ಕಳ ಪಟ್ಟಣದ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಿಸುವಂತೆ ತಜ್ಞರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಸಲಹೆ ನೀಡಿದ್ದರು. ಶಂಸುದ್ದೀನ್ ವೃತ್ತದಿಂದ ಸರ್ಪನಕಟ್ಟೆ ಮೂಲಕ ಶಿರಾಲಿಗೆ ಸಂಪರ್ಕಿಸುವ ಸಮಾನಾಂತರ ಬೈಪಾಸ್ ಮಾರ್ಗದ ಯೋಜನೆಯೂ ರೂಪುಗೊಂಡಿತ್ತು. ಆದರೆ ಕೆಲವು ಪ್ರಭಾವಿ ವ್ಯಕ್ತಿಗಳ ಸ್ವಾರ್ಥ ಮತ್ತು ಭೂ ಹಿತಾಸಕ್ತಿಗಳ ಕಾರಣದಿಂದ ಈ ಯೋಜನೆ ಸ್ಥಗಿತಗೊಂಡು ಇಂದಿಗೂ ಜಾರಿಗೆ ಬಂದಿಲ್ಲ.

ಬೈಪಾಸ್ ರಸ್ತೆ ನಿರ್ಮಾಣವಾಗಿದ್ದರೆ ನಗರದ ಮಧ್ಯಭಾಗ ಅಪಘಾತಗಳಿಂದ ಸುರಕ್ಷಿತವಾಗುತ್ತಿತ್ತು ಮತ್ತು ನಗರ ವಿಸ್ತರಣೆ ಸಹಜವಾಗಿ ಹೊರವಲಯದ ಕಡೆಗೆ ಸಾಗುತ್ತಿತ್ತು. ಆದರೆ ಭೂ ಮಾಫಿಯಾ ಹಾಗೂ ಶ್ರೀಮಂತ ಹೂಡಿಕೆದಾರರ ಒತ್ತಡಕ್ಕೆ ಮಣಿದ ಪುರಸಭೆ ಆಡಳಿತವು ಬೈಪಾಸ್ ಯೋಜನೆಯನ್ನು ಕೈಬಿಟ್ಟು ಅಸ್ತಿತ್ವದಲ್ಲಿರುವ ಹೆದ್ದಾರಿಯ ಅಗಲೀಕರಣಕ್ಕೆ ಮುಂದಾದುದು, ಇಂದಿನ ಅಪಾಯಕಾರಿ ಪರಿಸ್ಥಿತಿಗೆ ಕಾರಣವಾಗಿದೆ.

-ಹಿರಿಯ ಪತ್ರಕರ್ತರು

ಅಪಘಾತ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯಿಂದ ಕಠಿಣ ಕ್ರಮ

ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಬಿಗಿಯಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. 2025ರ ಅವಧಿಯಲ್ಲಿ ಮೋಟರ್ ವಾಹನ ಕಾಯ್ದೆಯಡಿ ಒಟ್ಟು 1,41,870 ಪ್ರಕರಣಗಳನ್ನು ದಾಖಲಿಸಲಾಗಿದೆ. ಅತಿ ವೇಗವಾಗಿ ಚಾಲನೆ ಮಾಡುತ್ತಿದ್ದ 1,139 ಚಾಲಕರ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, ಒಟ್ಟು 2.84 ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಸಂಚಾರ ನಿಯಮ ಉಲ್ಲಂಘಿಸಿದ 810 ಚಾಲನಾ ಪರವಾನಿಗೆಗಳನ್ನು (DL) ಅಮಾನತುಗೊಳಿಸಲಾಗಿದೆ. ಆದರೆ ರಸ್ತೆ ಮೂಲಸೌಕರ್ಯವೇ ಸುರಕ್ಷಿತವಾಗಿಲ್ಲದ ಸಂದರ್ಭದಲ್ಲಿ ಕೇವಲ ದಂಡ ಮತ್ತು ಪ್ರಕರಣಗಳಿಂದ ಸಮಸ್ಯೆಗೆ ಪರಿಹಾರ ಸಿಗುವುದೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Tags:    

Writer - ವರದಿ: ಎಂ.ಆರ್.ಮಾನ್ವಿ

contributor

Editor - ವರದಿ: ಎಂ.ಆರ್.ಮಾನ್ವಿ

contributor

Byline - ಮುಹಮ್ಮದ್ ರಝಾ ಮಾನ್ವಿ

contributor

Similar News