ಕರ್ನಾಟಕಕ್ಕೆ ಮತ್ತೆ ಚೊಂಬು: ಕೇಂದ್ರ ಬಜೆಟ್ ಬಗ್ಗೆ ಸಿಎಂ ಸಿದ್ದರಾಮಯ್ಯ ಟೀಕೆ
ಕಲಬುರಗಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ನಿರಾಶಾದಾಯಕವಾಗಿದ್ದು, ಕರ್ನಾಟಕಕ್ಕೆ ಮತ್ತೆ ಚೊಂಬು ನೀಡುವ ಮೂಲಕ ಮಲತಾಯಿ ಧೋರಣೆ ಮುಂದುವರಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ರವಿವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕ ರಾಜ್ಯ ತೆರಿಗೆ, ಜಿಎಸ್ಟಿ ಸಂಗ್ರಹ, ವಿದೇಶ ಹೋಡಿಕೆಯಲ್ಲಿ ಮೊದಲ ಸ್ಥಾನ ಮತ್ತು ಸೆಸ್ ಸಂಗ್ರಹ ಮಾಡುವ 2ನೇ ರಾಜ್ಯವಾಗಿದೆ. ನಮಗೆ ಸಿಗಬೇಕಾದ ಪಾಲು ಸಿಗುತ್ತಿಲ್ಲ. 1 ರೂ. ಪಡೆದು 14 ಪೈಸೆ ಮಾತ್ರ ನಮಗೆ ವಾಪಸ್ ನೀಡುವ ಮೂಲಕ ಕೇಂದ್ರ ಸರಕಾರ ನಮಗೆ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿದರು.
ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರಕಾರದ 13ನೇ ಬಜೆಟ್ ಮೋದಿ ಸರಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತವಾಗಿದೆ. 2025-26 ಸಾಲಿನ ಬಜೆಟ್ ಗಾತ್ರ 50,65,345 ಕೋಟಿ ರೂ.ಗಳಷ್ಟಿತ್ತು. ಆದರೆ ಪರಿಷ್ಕೃತ ಅಂದಾಜು 49,64,842 ಕೋಟಿ ರೂ. ಆಗಿದೆ. ಸುಮಾರು 1 ಲಕ್ಷ ಕೋಟಿಗೂ ಕಡಿಮೆ ಗಾತ್ರಕ್ಕೆ ಪರಿಷ್ಕರಿಸಿದ್ದಾರೆ. ಯಾವುದೇ ದೂರದೃಷ್ಟಿ ಇಲ್ಲದ ಬರಿ ಹೇಳಿಕೆಗಳ ಬಜೆಟ್ ಆಗಿದೆ ಎಂದು ಟೀಕಿಸಿದರು.
ವಿಕಸಿತ ಭಾರತದ ಸಂಕಲ್ಪ ಎನ್ನುವುದು ನಾಲಿಗೆ ಮೇಲಿನ ಮಾತಾಗಿದೆಯೇ ಹೊರತು ಕೃತಿಗಿಳಿಸಲು ಬೇಕಾದ ಯಾವುದೇ ಯೋಜನೆಗಳು ಬಜೆಟ್ ನಲ್ಲಿ ಇಲ್ಲ. ಕರ್ನಾಟಕ್ಕೆ ನೀರಾವರಿ ಯೋಜನೆ, ಮೆಟ್ರೋ ರೈಲು, ಮಹಾದಾಯಿ ಸಮಸ್ಯೆ, ಕೃಷ್ಣಮೇಲ್ದಂಡೆ ಯೋಜನೆ, ಕಬ್ಬು, ತೊಗರಿ ಬೆಳೆಗಳಿಗೆ ಸಹಾಯ ಸಿಗುವ ನಿರೀಕ್ಷೆ ಇತ್ತು. ಅದು ಸಿಕ್ಕಿಲ್ಲ. ಕೇವಲ ನಮಗೆ ಮತ್ತೆ ಚೊಂಬು ಸಿಕ್ಕಿದೆ ಎಂದು ಹೇಳಿದರು.
ಬೆಂಗಳೂರು- ಮುಂಬೈ, ಬೆಂಗಳೂರು- ಮಂಗಳೂರು, ಬೆಂಗಳೂರು ಪುಣೆ ಹೈ ಸ್ಪೀಡ್ ರೈಲುಗಳನ್ನು ಘೋಷಣೆ ಮಾಡಿದರೆ ಅನುಕೂಲ ಆಗುತ್ತಿತ್ತು. ಆದರೆ ಬೆಂಗಳೂರು- ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಎರಡು ಹೈ ಸ್ಪೀಡ್ ರೈಲುಗಳನ್ನು ಕೊಡುವುದಾಗಿ ಘೋಷಿಸಿದ್ದಾರೆ. ಆ ಎರಡರಿಂದ ಕರ್ನಾಟಕಕ್ಕೆ ಹೆಚ್ಚಿನ ಲಾಭವಿಲ್ಲ. ಅತಿ ಹೆಚ್ಚಿನ ಕಿ.ಮೀ ನಮಗೆ ಸಂಚರಿಸುವುದು ಕರ್ನಾಟಕದಲ್ಲಲ್ಲ. ಕೇಂದ್ರದ ಬಜೆಟ್ ದೊಡ್ಡ ನಗರಗಳ ಕಾರ್ಪೊರೇಷನ್ ಬಜೆಟ್‌ಗಳಿಗಿಂತ ಮೇಲೆ ಹೋಗಲಿಲ್ಲ. ಕರ್ನಾಟಕಕ್ಕೆ ಏನೂ ಸಿಗಲಿಲ್ಲ. ಯಥಾ ಪ್ರಕಾರ ಚೊಂಬು ಕೊಟ್ಟರು. ಕರ್ನಾಟಕ ಅಷ್ಟೇ ಅಲ್ಲ ಇಡೀ ದಕ್ಷಿಣ ಭಾರತಕ್ಕೂ ಏನೂ ಸಿಗಲಿಲ್ಲ. ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್ ಎಂದರು.
14 ನೇ ಹಣಕಾಸು ಆಯೋಗದ ವರದಿಯಲ್ಲಿ ರಾಜ್ಯಕ್ಕೆ ಶೇ. 4.71 ರಷ್ಟು ತೆರಿಗೆ ಪಾಲು ಸಿಕ್ಕಿತ್ತು. ಆದರೆ 14ನೇ ಹಣಕಾಸು ಆಯೋಗದಲ್ಲಿ ಅದು ಶೇ. 3.64 ಕ್ಕೆ ಇಳಿದ ಕಾರಣ ನಮಗೆ ಶೇ.23 ರಷ್ಟು ನಷ್ಟವಾಗಿತ್ತು. ಈ ಕಾರಣದಿಂದ ರಾಜ್ಯಕ್ಕೆ ಕನಿಷ್ಟ 14ನೇ ಹಣಕಾಸು ಆಯೋಗ ಕೊಟ್ಟ ತೆರಿಗೆ ಪಾಲಿಗಿಂತ ಹೆಚ್ಚಿನ ಪಾಲು ಕೊಟ್ಟರೆ ಮಾತ್ರ ನ್ಯಾಯ ಸಿಗುತ್ತದೆ ಎಂದು ಹೇಳಿದ್ದೆವು. ಹಲವು ಬಾರಿ ಮನವಿ ಸಲ್ಲಿಸಿದರೂ ಕ್ಯಾರೆ ಎಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಹಾರಾಷ್ಟ್ರಕ್ಕೆ 31,597 ಕೋಟಿ ರೂ., ಮಧ್ಯಪ್ರದೇಶಕ್ಕೆ 12,847 ಕೋಟಿ ರೂ., ಉತ್ತರ ಪ್ರದೇಶಕ್ಕೆ 16,342 ಕೋಟಿ ರೂ. ಕೊಟ್ಟಿದ್ದಾರೆ. SDMF ನಿಧಿಯಲ್ಲಿ ಕರ್ನಾಟಕಕ್ಕೆ 5 ವರ್ಷಗಳಲ್ಲಿ 1,712 ಕೋಟಿ ರೂ., ಮಹಾರಾಷ್ಟ್ರಕ್ಕೆ 7,895 ಕೋಟಿ ರೂ. ಕೊಟ್ಟಿದ್ದಾರೆ. ಮಹಾರಾಷ್ಟ್ರಕ್ಕೆ 23,697 ಕೋಟಿ ರೂ., ಗುಜರಾತ್‌ಗೆ 6766 ಕೋಟಿ ರೂ., ಮಧ್ಯ ಪ್ರದೇಶಕ್ಕೆ 9,357 ಕೋಟಿ ರೂ., ಹಾಗೂ ಉತ್ತರ ಪ್ರದೇಶಕ್ಕೆ 12,256 ಕೋಟಿ ರೂ. ಕೊಟ್ಟಿದ್ದಾರೆ. ಹಣಕಾಸು ಆಯೋಗದ ವರದಿಯ ಶಿಫಾರಸ್ಸಿನ ಆಧಾರದ ಮೇಲೆ 2025-26 ರಲ್ಲಿ ದೇಶದ ಎಲ್ಲಾ ರಾಜ್ಯಗಳಿಗೆ SDRF ನಲ್ಲಿ 24,257 ಕೋಟಿ ಕೊಟ್ಟಿದ್ದರು. 2026-27ರ ಬಜೆಟ್‌ನಲ್ಲಿ 22,574 ಕೋಟಿ ರೂ. ಮೀಸಲಿರಿಸಿದ್ದಾರೆ. SDMF ನಲ್ಲಿ 9,250 ಕೋಟಿ ರೂ. ಕಳೆದ ವರ್ಷ ಇಟ್ಟಿದ್ದರೆ, ಈ ವರ್ಷ 5,641 ಕೋಟಿ ರೂ.ಗೆ ಇಳಿಸಿದ್ದಾರೆ ಎಂದು ವಿವರಿಸಿದರು.
ನಾವು ನೀರಾವರಿ ಯೋಜನೆಗಳಿಗೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ, ಬೆಂಗಳೂರು ಅಭಿವೃದ್ಧಿಗೆ, ಮಲೆನಾಡು-ಕರಾವಳಿ ಅಭಿವೃದ್ಧಿಗೆ ವಿಶೇಷ ನೆರವು ಕೋರಿದ್ದೆವು. ಬೆಂಗಳೂರು ಮೆಟ್ರೋ, ಸಬ್ ಅರ್ಬನ್ ರೈಲುಗಳ ಕುರಿತು ಯಾವುದೇ ಉಲ್ಲೇಖಗಳಿಲ್ಲ. ತೆರಿಗೆ ಹಂಚಿಕೆಯ ಪ್ರಮಾಣವನ್ನು ಶೇ.41 ರಿಂದ ಶೇ.50 ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿದ್ದೆವು. ಬೆಂಗಳೂರಿಗೆ ರೂ. 27093 ಕೋಟಿ ಹಾಗೂ ಉಳಿದ ಭಾಗಗಳಿಗೆ ಅನುದಾನ ಘೋಷಿಸುವಂತೆ ಕೇಳಿದ್ದೆವು. ಸೆಸ್ ಅನ್ನು ಶೇ.5ಕ್ಕೆ ಮಿತಿಗೊಳಿಸುವಂತೆ ಕೇಳಿದ್ದೆವು. ಈ ಒತ್ತಾಯಗಳನ್ನು ಹಣಕಾಸು ಆಯೋಗವು ಪರಿಗಣಿಸದಿರುವುದು ದುರದೃಷ್ಟಕರ ಎಂದರು.
ಸುದ್ದಿಗೋಷ್ಠಿಯಲ್ಲಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್, ಶಿವರಾಜ್ ತಂಗಡಗಿ, ಬೋಸರಾಜು, ಶಾಸಕಿ ಕನೀಜ್ ಫಾತೀಮಾ, ಶಾಸಕ ಎಂ.ವೈ.ಪಾಟೀಲ್, ಎಂಎಲ್‌ಸಿ ಜಗದೇವ ಗುತ್ತೇದಾರ್, ಪಾಲಿಕೆ ಮಹಾಪೌರ ವರ್ಷಾ ಜಾನೆ, ಮತ್ತಿತ್ತರರು ಉಪಸ್ಥಿತರಿದ್ದರು.