×
Ad

ಕನ್ನಡ, ಕರ್ನಾಟಕ ಬಗ್ಗೆ ಕೇಂದ್ರ ಸರಕಾರಕ್ಕೆ ತಾತ್ಸಾರವೇ: ಪ್ರಿಯಾಂಕ್ ಖರ್ಗೆ

Update: 2025-07-16 22:59 IST

ಬೆಂಗಳೂರು: ಕನ್ನಡ, ಕರ್ನಾಟಕ ಬಗ್ಗೆ ಕೇಂದ್ರ ಸರಕಾರಕ್ಕಿರುವುದು ತಾತ್ಸಾರವೇ ಅಥವಾ ದ್ವೇಷವೇ? ಒಂದು ದೇಶ ಒಂದು ಭಾಷೆ ಎಂಬ ಅಜೆಂಡಾ ಇದೆಯೇ? ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್‍ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಕರ್ನಾಟಕದಿಂದ ಆಯ್ಕೆಯಾದ ಬಿಜೆಪಿ ಸಂಸದರು ಸ್ಪಷ್ಟಪಡಿಸಬೇಕು. ಬದುಕಿಗೆ, ಉದ್ಯೋಗಕ್ಕೆ, ಜ್ಞಾನಾರ್ಜನೆಗೆ ಬೇಕಿರುವ ಮತ್ತು ವ್ಯಾಪಕ ಬಳಕೆಯಲ್ಲಿರುವ ಶಾಸ್ತ್ರೀಯ ಭಾಷೆ ಹಾಗೂ ಪುರಾತನ ಭಾಷೆಯಾದ ಕನ್ನಡಕ್ಕೆ ಚಿಲ್ಲರೆ ಹಣವನ್ನು ನೀಡುವ ಮೂಲಕ ಕನ್ನಡವನ್ನು ಕೇಂದ್ರ ಸರಕಾರ ಕಡೆಗಣಿಸಿದೆ ಎಂದು ಕಿಡಿಕಾರಿದ್ದಾರೆ.

11 ವರ್ಷಗಳಲ್ಲಿ, ಕೇಂದ್ರ ಸರಕಾರವು ಸಂಸ್ಕೃ ತವನ್ನು ಉತ್ತೇಜಿಸಲು 2,532 ಕೋಟಿ ರೂ. ಖರ್ಚು ಮಾಡಿದೆ. ಹಾಗೆಯೇ, ಹಿಂದಿಗೆ 427 ಕೋಟಿ ರೂ, ತಮಿಳಿಗೆ 113 ಕೋಟಿ ರೂ, ಕನ್ನಡಕ್ಕೆ 12 ಕೋಟಿ ರೂ., ತೆಲುಗಿಗೆ 12 ಕೋಟಿ ರೂ., ಒಡಿಯಾ ಮತ್ತು ಮಲಯಾಳಂಗೆ ತಲಾ 4.5 ಕೋಟಿ ರೂ., ಜನರ ದೈನಂದಿನ ಬದುಕಿನಲ್ಲಿ ಬಳಕೆಯಲ್ಲಿ ಇಲ್ಲದ, ಬದುಕು ರೂಪಿಸಿಕೊಳ್ಳಲು ಸಾಧ್ಯವಾಗದ ಸಂಸ್ಕೃತ ಭಾಷೆಗೆ ಕೊಟ್ಟಷ್ಟು ಮನ್ನಣೆ ಕನ್ನಡಕ್ಕೆ ಏಕಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.

ಎನ್‍ಡಿಎ ಸರಕಾರವು ಕರ್ನಾಟಕದಿಂದ 19 ಲೋಕಸಭಾ ಸದಸ್ಯರನ್ನು ಮತ್ತು 7 ರಾಜ್ಯಸಭಾ ಸದಸ್ಯರನ್ನು ಹೊಂದಿದ್ದರೂ, ಕನ್ನಡಕ್ಕೆ ಇಂತಹ ತಿರಸ್ಕಾರ ತೋರಿದ್ದೇಕೆ? ಕರ್ನಾಟಕದ ಸಂಸದರು ಈ ಬಗ್ಗೆ ಪ್ರತಿರೋಧ ತೋರದಿರುವುದೇಕೆ? ಕನ್ನಡ, ಕರ್ನಾಟಕ, ಕನ್ನಡಿಗರ ಬಗೆಗಿನ ಕಾಳಜಿಗಿಂತ ತಮ್ಮ ರಾಜಕೀಯ ಹಿತಾಸಕ್ತಿಯೇ ಮುಖ್ಯವಾಯಿತೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನುಪಯುಕ್ತ ಭಾಷೆಯಾದ ಸಂಸ್ಕೃತಕ್ಕೆ ಇಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡಿದ ಕೇಂದ್ರ ಸರಕಾರವು ಉದ್ಯೋಗ ಸೃಷ್ಟಿಸಬಲ್ಲ, ಆರ್ಥಿಕತೆಗೆ ಕೊಡುಗೆ ನೀಡಬಲ್ಲ ಸ್ಟಾರ್ಟ್‍ಅಪ್‍ಗಳಿಗೆ ಸ್ಟಾರ್ಟ್ ಅಪ್ ಇಂಡಿಯಾದಡಿಯಲ್ಲಿ ನೀಡಿದ ಅನುದಾನ ಕೇವಲ 454 ಕೋಟಿ ರೂ. ಮಾತ್ರ. ಯುವ ಸಮುದಾಯದ ಭವಿಷ್ಯ ಕೇಂದ್ರ ಸರಕಾರದ ಆದ್ಯತೆಯಾಗದಿರುವುದು ದೇಶದ ದುರಂತ ಎಂದು ಹೇಳಿದ್ದಾರೆ.

ಸಂಸ್ಕೃತದ ಉತ್ತೇಜನಕ್ಕೆ ನೀಡಿದ ಬಜೆಟ್‍ನಲ್ಲಿ ಅರ್ಧದಷ್ಟಾದರೂ ನಮ್ಮ ಯುವಕರನ್ನು ಕೌಶಲ್ಯಭರಿತರನ್ನಾಗಿಸಲು, ಉದ್ಯೋಗಸ್ಥರನ್ನಾಗಿಸಲು ಹಾಗೂ ನವೋದ್ಯಮಗಳನ್ನು ಪ್ರೋತ್ಸಾಹಿಸಲು ವಿನಿಯೋಗಿಸಿದ್ದರೆ ಭಾರತದ ಭವಿಷ್ಯ ಬೆಳಗುತ್ತಿತ್ತು. ಆದರೆ ಬಿಜೆಪಿಗೆ ಯುವಜನರ ಹಿತ ಬೇಕಿಲ್ಲ. ರಾಜ್ಯದ ಬಿಜೆಪಿ ನಾಯಕರಿಗೆ ಕನ್ನಡದ ಹಿತ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News