×
Ad

ಗ್ರಾಮೀಣ ಸೇವೆಗೆ ನಿಯೋಜನೆಗೊಂಡ ವೈದ್ಯರ ಮಾಸಿಕ ವೇತನ ಕಡಿತ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Update: 2026-01-22 18:18 IST

Photo credit: PTI

ಬೆಂಗಳೂರು: ಸರ್ಕಾರಿ ಕೋಟಾದಡಿ ಎಂಬಿಬಿಎಎಸ್ ಪ್ರವೇಶ ಪಡೆದು 2024 ಮತ್ತು 2025ನೇ ಸಾಲಿನಲ್ಲಿ ಕೋರ್ಸ್ ಪೂರ್ಣಗೊಳಿಸಿ ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ವರ್ಷದ ಕಡ್ಡಾಯ ಸೇವೆಗೆ ನಿಯೋಜನೆಗೊಂಡ ವೈದ್ಯರ ಮಾಸಿಕ ವೇತನ ಕಡಿತಗೊಳಿಸಿರುವುದನ್ನು ಪ್ರಶ್ನಿಸಿದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಉತ್ತರಕನ್ನಡ ಜಿಲ್ಲೆ ಮುಂಡಗೋಡ ತಾಲೂಕು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಲಬುರಗಿ ನಿವಾಸಿ ಡಾ. ಶಶಿಕುಮಾರ್ ಸೇರಿ ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಲ್ಲಿ ಕಿರಿಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ 38 ಮಂದಿ ಎಂಬಿಬಿಎಸ್ ಪದವೀಧರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿಗೆ ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿತು. ಇದೇ ವಿಷಯವಾಗಿ ಸಲ್ಲಿಕೆಯಾಗಿರುವ ಇತರ ಅರ್ಜಿಗಳನ್ನೂ ಸಹ ಈ ಅರ್ಜಿಯೊಂದಿಗೆ ವಿಚಾರಣೆಗೆ ನಿಗದಿಪಡಿಸಲು ರಿಜಿಸ್ಟ್ರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

ಅರ್ಜಿದಾರರ ಮನವಿ ಏನು?

ರಾಜ್ಯದ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಮುಗಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಒಂದು ವರ್ಷದ ಕಡ್ಡಾಯ ಸರ್ಕಾರಿ ಸೇವೆಗೆ ನಿಯೋಜನೆಗೊಂಡ ವೈದ್ಯರಿಗೆ ಮಾಸಿಕ 62 ಸಾವಿರ ರೂ. ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ನಿಯೋಜನೆಗೊಂಡ ವೈದ್ಯರಿಗೆ ಮಾಸಿಕ ವೇತನ 75 ಸಾವಿರ ರೂ. ನಿಗದಿಪಡಿಸಿ 2025ರ ಆಗಸ್ಟ್ 18ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಏಕಾಏಕಿ 2025ರ ಅಕ್ಟೋಬರ್ 28ರಂದು ಪರಿಷ್ಕೃತ ಅಧಿಸೂಚನೆ ಹೊರಡಿಸಿ, ವೇತನವನ್ನು ಮಾಸಿಕ 60 ಸಾವಿರ ರೂ. ಕಡಿತಗೊಳಿಸಲಾಗಿದೆ. ಇದು ಕಾನೂನುಬಾಹಿರವಾಗಿದೆ. ಹಳೇ ಅಧಿಸೂಚನೆಯಂತೆ ಮಾಸಿಕ ವೇತನ ನೀಡಬೇಕು. ಅದರಂತೆಯೇ ಕಳೆದ ವರ್ಷ ಆಗಸ್ಟ್ ತಿಂಗಳಿನಿಂದ ಇಲ್ಲಿಯವರೆಗೆ ವೇತನದ ಹಿಂಬಾಕಿ ಪಾವತಿಸುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News