ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಸಹಾಯಕ ಪ್ರಾಧ್ಯಾಪಕನ ರಕ್ಷಣೆ ಆರೋಪ: IAS ಅಧಿಕಾರಿ, SIMS ನಿರ್ದೇಶಕರ ವಿರುದ್ಧ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ಆದೇಶ

ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಯನ್ನು ʼಬಿಳಿ ಕೋಟ್ ಧರಿಸಿದ ತೋಳʼ ಎಂದ ನ್ಯಾಯಾಲಯ

Update: 2026-08-07 15:47 IST

Photo credit: PTI

ಬೆಂಗಳೂರು: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸಹಾಯಕ ಪ್ರಾಧ್ಯಾಪಕನನ್ನು ರಕ್ಷಿಸಿದ ಆರೋಪದ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್ ಮತ್ತು ಶಿವಮೊಗ್ಗ ಇನ್ಸ್ಟಿಟ್ಯೂಟ್ ಆಫ್‌ ಮೆಡಿಕಲ್‌ ಸೈನ್ಸಸ್(SIMS) ನಿರ್ದೇಶಕ ಡಾ. ವಿರೂಪಾಕ್ಷಪ್ಪ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.

ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಡಾ.ಅಶ್ವಿನ್ ಹೆಬ್ಬಾರ್‌ಗೆ ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ವರ್ಗಾವಣೆ ಕುರಿತ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.

“ಡಾ.ಅಶ್ವಿನ್ ಹೆಬ್ಬಾರ್ SIMS ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮುಹಮ್ಮದ್ ಮೊಹ್ಸಿನ್ ಮತ್ತು ಡಾ. ವಿರೂಪಾಕ್ಷಪ್ಪ ಅವರು ಆರೋಪಿಯನ್ನು ರಕ್ಷಿಸುವ ಮೂಲಕ ಸರಕಾರಿ ಹುದ್ದೆಗೆ ತಕ್ಕುದಲ್ಲದ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂಬ ಅಭಿಪ್ರಾಯಕ್ಕೆ ನಾವು ಬಂದಿದ್ದೇವೆ” ಎಂದು ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಟಿ.ಎಂ. ನದಾಫ್ ಅವರ ವಿಭಾಗೀಯ ಪೀಠ ಹೇಳಿದೆ.

ಡಾ.ಅಶ್ವಿನ್ ಹೆಬ್ಬಾರ್ ವಿರುದ್ಧ 2022ರ ಆಗಸ್ಟ್‌ನಲ್ಲಿ ಮೊದಲ ದೂರು ದಾಖಲಾಗಿತ್ತು. ಸ್ಥಳೀಯ ಸಮಿತಿ ಲೈಂಗಿಕ ಕಿರುಕುಳ ಆರೋಪ ಮೇಲ್ನೋಟಕ್ಕೆ ಸಾಬೀತಾಗಿವೆ ಎಂದು ಅಭಿಪ್ರಾಯಪಟ್ಟಿದ್ದರೂ, ಅವರ ವಿರುದ್ಧ ಯಾವುದೇ ಇಲಾಖಾ ವಿಚಾರಣೆ ನಡೆಸಿರಲಿಲ್ಲ. ನಂತರ 2024ರಲ್ಲಿ ಹೈಕೋರ್ಟ್ ಡಾ. ಹೆಬ್ಬಾರ್ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿತ್ತು.

2025ರಲ್ಲಿ ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬರು ಡಾ. ಅಶ್ವಿನ್ ಹೆಬ್ಬಾರ್ ವಿರುದ್ಧ ಮತ್ತೊಂದು ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ಆಂತರಿಕ ದೂರು ಸಮಿತಿ ಆರೋಪ ಮೇಲ್ನೋಟಕ್ಕೆ ಸತ್ಯವೆಂದು ಕಂಡುಹಿಡಿದಿತ್ತು. ಬಳಿಕ ಅವರನ್ನು ಬಂಧಿಸಲಾಗಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

2025ರ ಜುಲೈ 3ರಂದು ಡಾ. ಹೆಬ್ಬಾರ್ ಅವರನ್ನು ಅಮಾನತುಗೊಳಿಸಲಾಗಿತ್ತು. ಆದರೆ 2025ರ ನವೆಂಬರ್ 17ರಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್ ಅವರು ಡಾ. ಹೆಬ್ಬಾರ್ ಅವರನ್ನು ಮರುಸೇವೆಗೆ ನೇಮಿಸಿದ್ದರು ಮತ್ತು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (HIMS)ಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು.

ಆ ಬಳಿಕ ಡಾ. ಅಶ್ವಿನ್ ಹೆಬ್ಬಾರ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಏಕಸದಸ್ಯ ಪೀಠವು ಅವರ ವರ್ಗಾವಣೆ ಆದೇಶಕ್ಕೆ ತಡೆ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ವಿಭಾಗೀಯ ಪೀಠ, ವರ್ಗಾವಣೆ ಆದೇಶಕ್ಕೆ ತಡೆ ನೀಡಿರುವುದು ಈಗಾಗಲೇ ನೋವು ಅನುಭವಿಸಿರುವ ಸಂತ್ರಸ್ತೆಯ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಏಕೆಂದರೆ SIMS ನಲ್ಲಿ ಪ್ರತಿದಿನವೂ ಆಕೆ ಆರೋಪಿಯನ್ನು ಎದುರಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.

ಡಾ. ಅಶ್ವಿನ್ ಹೆಬ್ಬಾರ್ ಬಿಳಿ ಕೋಟ್ ಧರಿಸಿದ ತೋಳ. ಅವರ ವಿರುದ್ಧ ಬಾಕಿ ಇರುವ ಇಲಾಖಾ ಶಿಸ್ತು ಕ್ರಮವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅವರು ತಪ್ಪಿತಸ್ಥರೆಂದು ಸಾಬೀತಾದರೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಕೂಡ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರ ವೈದ್ಯಕೀಯ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಹೈಕೋರ್ಟ್ ಹೇಳಿದೆ.

ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ಮುಹಮ್ಮದ್ ಮೊಹ್ಸಿನ್ ಅವರು ಪ್ರಮುಖ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ ಎಂದು ಪೀಠವು ಗಮನಿಸಿದೆ. ಮೊಹ್ಸಿನ್ ಅವರ ನಿರ್ದೇಶನದಂತೆ SIMS ನಿರ್ದೇಶಕರು ಡಾ. ಹೆಬ್ಬಾರ್ ಅವರನ್ನು ಮರುಸೇವೆಗೆ ನೇಮಿಸಿದ್ದರು. ರೋಗಿಗಳ ಚಿಕಿತ್ಸೆಯ ಹಿತದೃಷ್ಟಿ ಹಾಗೂ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಬೋಧನೆಗೆ ಅದು ಪ್ರಯೋಜನಕಾರಿಯಾಗಲಿದೆ ಎಂದು ಶಿಫಾರಸಿನಲ್ಲಿ ಉಲ್ಲೇಖಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News