×
Ad

ಮುಸ್ಲಿಮರ ಮುನಿಸಿಗೆ ‘ಹಿಜಾಬ್’ ಮುಲಾಮು: ಆರ್. ಅಶೋಕ್ ಟೀಕೆ

Update: 2026-05-13 22:34 IST

ಆರ್. ಅಶೋಕ್ 

ಬೆಂಗಳೂರು: ದಾವಣಗೆರೆ ಉಪಚುನಾವಣೆ ಹಿನ್ನಲೆಯಲ್ಲಿ ಅಲ್ಪಸಂಖ್ಯಾತರ ಆಕ್ರೋಶಕ್ಕೆ ಬೆದರಿರುವ ಕಾಂಗ್ರೆಸ್, ಈಗ ತನ್ನ ಮತಬ್ಯಾಂಕ್ ಉಳಿಸಿಕೊಳ್ಳಲು ‘ಹಿಜಾಬ್' ಅಸ್ತ್ರವನ್ನು ಕೈಗೆತ್ತಿಕೊಂಡಿದೆ. ಬೆಲೆ ಏರಿಕೆ, ಭ್ರಷ್ಟಾಚಾರ, ರೈತರ ಸಂಕಷ್ಟ, ಕಾನೂನು ಸುವ್ಯವಸ್ಥೆಯ ವೈಫಲ್ಯಗಳ ಬಗ್ಗೆ ಮೌನವಾಗಿರುವ ರಾಜ್ಯ ಸರಕಾರ, ಮುನಿಸಿಕೊಂಡಿರುವ ಮುಸ್ಲಿಮ್ ಮತ ಬ್ಯಾಂಕ್‍ಗೆ ‘ಹಿಜಾಬ್’ ಮೂಲಕ ಮುಲಾಮು ಹಚ್ಚಲು ಹೊರಟಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟಿಕಿಸಿದ್ದಾರೆ.

ಬುಧವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ 2022ರಲ್ಲಿ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ವಸ್ತ್ರಸಂಹಿತೆಯನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ಮುಖ್ಯ ಎಂದು ತೀರ್ಪು ನೀಡಿತ್ತು. ಇದೀಗ ಕೋರ್ಟ್ ಆದೇಶವನ್ನೇ ಗಾಳಿಗೆ ತೂರಿ ಒಂದು ಸಮುದಾಯದ ಓಲೈಕೆಗೆ ಮುಂದಾಗಿರುವುದು ಯಾವ ಸೀಮೆ ಜಾತ್ಯತೀತತೆ?’ ಎಂದು ಪ್ರಶ್ನಿಸಿದ್ದಾರೆ.

‘ಒಂದು ಸಮುದಾಯದ ಹಿಜಾಬ್‍ಗೆ ಹಸಿರು ನಿಶಾನೆ ತೋರಿರುವ ಕಾಂಗ್ರೆಸ್ ಸರಕಾರ, ಕೇಸರಿ ಶಾಲುವಿಗೆ ಮಾತ್ರ ನಿಷೇಧ ಹೇರಿದೆ. ನಿಮ್ಮ ಈ ಓಲೈಕೆ ರಾಜಕಾರಣ ಹಿಂದೂಗಳಿಗೆ ಅರ್ಥವಾಗುವುದಿಲ್ಲ ಎಂದು ಭಾವಿಸಿದ್ದೀರಾ ಮುಖ್ಯಮಂತ್ರಿಗಳೇ?. ಶಾಲಾ-ಕಾಲೇಜುಗಳನ್ನು ಸಮಾನತೆಯ ಕೇಂದ್ರಗಳನ್ನಾಗಿ ನೋಡುವ ಬದಲು, ಧರ್ಮದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ವಿಭಜಿಸುತ್ತಿರುವ ನಿಮ್ಮ ನಡೆಯೇ ನಾಚಿಕೆಗೇಡು’ ಎಂದು ಅಶೋಕ್ ಟೀಕಿಸಿದ್ದಾರೆ.

‘ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರಕಾರ ಅತಿಯಾದ ಓಲೈಕೆ ರಾಜಕಾರಣ ಮಾಡಿ ಯಾವ ದುಸ್ಥಿತಿಗೆ ತಲುಪಿದೆಯೋ, ಕರ್ನಾಟಕ ಸರಕಾರಕ್ಕೂ ಅದೇ ಗತಿ ಕಾದಿದೆ. ಕರ್ನಾಟಕದಲ್ಲಿ ತುಷ್ಟೀಕರಣದ ಪರಾಕಾಷ್ಟೆ ತಲುಪಿರುವ ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರು ತಕ್ಕ ಪಾಠ ಕಲಿಸುವುದು ಗ್ಯಾರಂಟಿ. ಮತಬ್ಯಾಂಕ್ ರಾಜಕಾರಣಕ್ಕಾಗಿ ಸಂವಿಧಾನ ಮತ್ತು ನ್ಯಾಯಾಂಗದ ಆಶಯಗಳನ್ನು ಬಲಿಕೊಡುತ್ತಿರುವ ಈ ಸರಕಾರಕ್ಕೆ ಜನರೇ ಅಂತ್ಯ ಹಾಡಲಿದ್ದಾರೆ’ ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News