ಸಾಂದರ್ಭಿಕ ಚಿತ್ರ | Photo credit : PTI

ಬೆಂಗಳೂರು : ರಾಜ್ಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್)ಯ ಕರಡು ಮತದಾರರ ಪಟ್ಟಿ ವೆಬ್‌ಸೈಟ್‌ನಲ್ಲಿ ಇಂದು(ಆ.24) ಪ್ರಕಟವಾಗಿದೆ.

ಎಲ್ಲಾ ನಾಗರೀಕರು ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ವಿವರಗಳನ್ನು ಪರಿಶೀಲಿಸಿ, ಮಾಹಿತಿಯ ನಿಖರತೆಯನ್ನು ಖಚಿತಪಡಿಸಿಕೊಳ್ಳುವಂತೆ ಚುನಾವಣಾ ಆಯೋಗ ಮನವಿ ಮಾಡಿದೆ. ಕರಡು ಮತದಾರರ ಪಟ್ಟಿಯು https://www.ceo.karnataka.gov.in ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಕರಡು ಪಟ್ಟಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ, ವಿಶೇಷವಾಗಿ ‘ನೋ ಮ್ಯಾಪಿಂಗ್’ ಹಾಗೂ ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ (ತಾರ್ಕಿಕ ವ್ಯತ್ಯಾಸ) ವಿಭಾಗದಲ್ಲಿ ಗುರುತಿಸಲಾದ ಮತದಾರರಿಗೆ ಚುನಾವಣಾ ಆಯೋಗ ಮುಂದಿನ ಹಂತದಲ್ಲಿ ನೊಟೀಸ್ ನೀಡಲಿದೆ. ಹಾಗಾಗಿ ಎಸ್‍ಐಆರ್‌ ನಲ್ಲಿ ತಮ್ಮ ದಾಖಲೆಗಳಿಗೆ ಸಂಬಂಧಿಸಿದಂತೆ ಸಮಸ್ಯೆ ಎದುರಿಸಬಹುದಾದ ಮತದಾರರು ಕೂಡಲೇ, ಆಯೋಗ ಕೇಳಿರುವ 11 ದಾಖಲೆಗಳಲ್ಲಿ ಕನಿಷ್ಠ 3 ದಾಖಲೆಗಳನ್ನಾದರೂ ಸಿದ್ಧವಾಗಿಟ್ಟುಕೊಳ್ಳುವುದು ಅಗತ್ಯ.

ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ: ಕರಡು ಪಟ್ಟಿ ಪ್ರಕಟವಾದ ನಂತರ ‘ನೋ ಮ್ಯಾಪಿಂಗ್’ ಹಾಗೂ ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ಯಲ್ಲಿ ಬಂದಿರುವ ಮತದಾರರು ಆತಂಕಪಡುವ ಬದಲಿಗೆ ತಮ್ಮ ಮತದಾರರ ಗುರುತು ಮತ್ತು ಅರ್ಹತೆಯನ್ನು ದೃಢಪಡಿಸುವ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಸೂಕ್ತ. ನೊಟೀಸ್ ಪಡೆದ ಮತದಾರರು ನಿಗದಿತ ಅವಧಿಯಲ್ಲಿ ಸಂಬಂಧಪಟ್ಟ ಚುನಾವಣಾಧಿಕಾರಿಗಳ ಮುಂದೆ ದಾಖಲೆಗಳನ್ನು ಸಲ್ಲಿಸಿ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಮುಂದುವರಿಸುವಂತೆ ಮನವಿ ಸಲ್ಲಿಸಬೇಕು. ದಾಖಲೆ ಪರಿಶೀಲನೆಯ ಸಂದರ್ಭದಲ್ಲಿ ಮತದಾರರು ನಿಗದಿತ ದಿನಾಂಕ ಮತ್ತು ಸ್ಥಳದಲ್ಲಿ ಹಾಜರಾಗಬೇಕಾಗುತ್ತದೆ.

ಸೆ.23ರ ವರೆಗೆ ಹಕ್ಕು-ಆಕ್ಷೇಪಣೆ ಸಲ್ಲಿಸಲು ಅವಕಾಶ: ಕರಡು ಮತದಾರರ ಪಟ್ಟಿ ಪ್ರಕಟವಾದ ದಿನದಿಂದ ಸೆ.23ರ ವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ. ಈ ಅವಧಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಪಟ್ಟಿಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಹಕ್ಕು-ಆಕ್ಷೇಪಣೆಗಳ ವಿಲೇವಾರಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅ.27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.

ಕರಡು ಪಟ್ಟಿ ಕೇವಲ ಚುನಾವಣಾ ಪಟ್ಟಿಯ ಪ್ರಕಟಣೆಯಲ್ಲ, ತಮ್ಮ ಮತದಾನದ ಹಕ್ಕು ಮುಂದುವರಿದಿದೆಯೇ? ಎಂಬುದನ್ನು ಪ್ರತಿಯೊಬ್ಬ ಮತದಾರರೂ ಪರಿಶೀಲಿಸಿಕೊಳ್ಳಬೇಕಾದ ನಿರ್ಣಾಯಕ ಹಂತವಾಗಿದೆ. ಮತದಾರರ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದರೆ, ನಿಗದಿತ ಅವಧಿಯೊಳಗೆ ಹಕ್ಕು ಅಥವಾ ಆಕ್ಷೇಪಣೆ ಸಲ್ಲಿಸುವ ಮೂಲಕ ತಮ್ಮ ಹಕ್ಕನ್ನು ರಕ್ಷಿಸಿಕೊಳ್ಳಬೇಕಾಗಿದೆ.

ಹಕ್ಕು-ಆಕ್ಷೇಪಣೆ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:

1. ಯಾವುದೇ ಕೇಂದ್ರ ಸರಕಾರ/ರಾಜ್ಯ ಸರಕಾರ/ಸಾರ್ವಜನಿಕ ವಲಯ ಉದ್ಯಮದ ಖಾಯಂ ಉದ್ಯೋಗಿ/ಪಿಂಚಣಿದಾರರಿಗೆ ನೀಡಿರುವ ಯಾವುದೇ ಗುರುತಿನ ಚೀಟಿ/ ಪಿಂಚಣಿ ಸಂದಾಯ ಆದೇಶ.

2. ಭಾರತದಲ್ಲಿ 01/07/1987ಕ್ಕೂ ಮುಂಚೆ ಸರಕಾರ/ ಸ್ಥಳೀಯ ಪ್ರಾಧಿಕಾರಗಳು/ ಬ್ಯಾಂಕುಗಳು/ ಅಂಚೆ ಕಚೇರಿ/ ಜೀವ ವಿಮಾ ನಿಗಮ/ ಸಾರ್ವಜನಿಕ ವಲಯ ಉದ್ಯಮಗಳು ನೀಡಿರುವ ಯಾವುದೇ ಗುರುತಿನ ಚೀಟಿ/ ಪ್ರಮಾಣಪತ್ರ/ ದಸ್ತಾವೇಜು.

3. ಸಕ್ಷಮ ಪ್ರಾಧಿಕಾರವು ನೀಡಿರುವ ಜನನ ಪ್ರಮಾಣಪತ್ರ.

4. ಪಾಸ್‍ಪೋರ್ಟ್.

5. ಮಾನ್ಯತೆ ಪಡೆದ ಮಂಡಳಿಗಳು/ ವಿಶ್ವವಿದ್ಯಾಲಯಗಳು ನೀಡಿರುವ ಮೆಟ್ರಿಕ್ಯೂಲೇಷನ್/ ಶೈಕ್ಷಣಿಕ ಪ್ರಮಾಣಪತ್ರ.

6. ರಾಜ್ಯದ ಸಕ್ಷಮ ಪ್ರಾಧಿಕಾರವು ನೀಡಿರುವ ಖಾಯಂ ನಿವಾಸ ಪ್ರಮಾಣಪತ್ರ.

7. ಅರಣ್ಯ ಹಕ್ಕು ಪ್ರಮಾಣಪತ್ರ.

8. ಸಕ್ಷಮ ಪ್ರಾಧಿಕಾರವು ನೀಡಿರುವ ಒಬಿಸಿ/ ಪ.ಜಾ/ಪ.ಪಂ ಅಥವಾ ಯಾವುದೇ ಜಾತಿ ಪ್ರಮಾಣಪತ್ರ.

9. ರಾಷ್ಟ್ರೀಯ ಪೌರತ್ವ ರಿಜಿಸ್ಟರ್(ಅದು ಎಲ್ಲಾದರೂ ಅಸ್ತಿತ್ವದಲ್ಲಿರಲಿ)

10. ರಾಜ್ಯ/ಸ್ಥಳೀಯ ಪ್ರಾಧಿಕಾರಗಳು ಸಿದ್ದಪಡಿಸಿದ ಕುಟುಂಬ ರಿಜಿಸ್ಟರ್.

11. ಸರಕಾರವು ನೀಡಿದ ಯಾವುದೇ ಜಮೀನು/ ಮನೆ ಹಂಚಿಕೆ ಪ್ರಮಾಣಪತ್ರ.

12. ಸುಪ್ರೀಂಕೋರ್ಟ್‍ನ ಆದೇಶದ ಅನುಸಾರವಾಗಿ ಆಧಾರ್ ಅನ್ನು ನಾಗರಿಕತೆಯ ಪ್ರಮಾಣವಾಗಿ ಅಲ್ಲದೆ, ಗುರುತನ್ನು ಸಾಬೀತುಪಡಿಸುವ ದಾಖಲೆಯಾಗಿ ಮಾತ್ರ ಪರಿಗಣಿಸಲಾಗುವುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor