ಪ್ರತಿ ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿಗೆ 3,000 ರೂ. ವೆಚ್ಚ: ಈಶ್ವರ ಖಂಡ್ರೆ
17,208 ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯಾಚರಣೆ
Photo: screengrab/youtube
ಬೆಂಗಳೂರು, ಆ.24: ಶುದ್ಧ ಕುಡಿಯುವ ನೀರು ಪೂರೈಸಲು ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಪ್ರತಿ ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿಗೆ 3 ಸಾವಿರ ರೂ. ನೀಡಲಾಗಿದ್ದು, ಕಾರ್ಯಯೋಗ್ಯಗೊಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ವಿಧಾನಸಭೆಗೆ ಸೋಮವಾರ ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಉತ್ತರ ನೀಡಿದ ಅವರು, ರಾಜ್ಯದಲ್ಲಿ ಒಟ್ಟು 20,340 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 17,208 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 602 ಘಟಕಗಳು ಕಾರ್ಯ ಸ್ಥಗಿತಗೊಳಿಸಿವೆ. 2,530 ಘಟಕಗಳು ದುರಸ್ತಿಯಾಗಬೇಕಿದೆ ಎಂದು ಮಾಹಿತಿ ನೀಡಿದರು.
ಕಾರ್ಯನಿರ್ವಹಿಸದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗ್ರಾಮ ಪಂಚಾಯಿತಿ ಅನುದಾನದಿಂದ ದುರಸ್ತಿ ಮಾಡಲು, ಪಂಚಾಯಿತಿಯಲ್ಲಿ ಅನುದಾನ ಲಭ್ಯವಿಲ್ಲದಿದ್ದಲ್ಲಿ ಇಲಾಖೆಯ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ 29.50 ಕೋಟಿ ರೂ. ಹಂಚಿಕೆ ಮಾಡಿದ್ದು, 13 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 228 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಆ ಪೈಕಿ 219 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 9 ಘಟಕಗಳು ಸ್ಥಗಿತವಾಗಿವೆ ಎಂದೂ ತಿಳಿಸಿದರು.