ಮುಸ್ಲಿಂ ಸಚಿವರು-ಶಾಸಕರೊಂದಿಗೆ ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ ಸಭೆ
2 ಬಿ ಮೀಸಲಾತಿ ಮರು ಸ್ಥಾಪನೆ, ಜಾನುವಾರು ಪ್ರತಿಬಂಧಕ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ಆಗ್ರಹ
ಬೆಂಗಳೂರು : ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟ(ಕೆಆರ್ ಎಂಒ)ದ ಸಭೆಗೆ ಭೇಟಿ ನೀಡಿದ ಆರೋಗ್ಯ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ.ಖಾದರ್ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಝ್ವಾನ್ ಅರ್ಶದ್ ಅವರು ಕೆಆರ್ ಎಂಒ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.
ಬುಧವಾರ ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಕೆಆರ್ ಎಂಒ ಸಭೆಯಲ್ಲಿ ಕೆಆರ್‌ಎಂಒ ಸಮಿತಿ 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಪ್ರಮುಖ ಭರವಸೆಗಳನ್ನು ಇನಷ್ಟು ತಡ ಮಾಡದೇ ಈಡೇರಿಸುವಂತೆ ಆಗ್ರಹಿಸಿತು. ಅಲ್ಲದೇ, ಕೆಆರ್‌ಎಂಒ ವತಿಯಿಂದ ಪ್ರಕಟಿಸಲಾಗಿರುವ ‘ಕಾಂಗ್ರೆಸ್ ಸರಕಾರ ಹೇಳಿದ್ದೇನು? ಮಾಡಿದ್ದೇನು? ಮುಂದೇನು?’ ವರದಿ ಹಾಗೂ ಆಗ್ರಹಗಳ ಪಟ್ಟಿಯನ್ನು ಒಳಗೊಂಡ ಪುಸ್ತಕವನ್ನು ಅವರಿಗೆ ನೀಡಲಾಯಿತು.
ಭರವಸೆಗಳು :
ಬಿಜೆಪಿ ಸರಕಾರವು ರದ್ದುಪಡಿಸಿದ 2ಬಿ ಮೀಸಲಾತಿಯನ್ನು ಮರುಸ್ಥಾಪಿಸುವುದು, ಮತಾಂತರ ನಿಷೇಧ ಕಾನೂನು ಹಿಂಪಡೆಯಬೇಕು, ಕರ್ನಾಟಕ ಜಾನುವಾರು ವಧೆ ತಡೆ ಮತ್ತು ಸಂರಕ್ಷಣಾ ಕಾಯ್ದೆ-2020 ಅನ್ನು ರದ್ದುಪಡಿಸಬೇಕು ಅಥವಾ ತಿದ್ದುಪಡಿ ಮಾಡಬೇಕು, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವರ್ಷಕ್ಕೆ 10 ಸಾವಿರ ಕೋಟಿ ರೂ. ಮೀಸಲಿರಿಸುವುದಾಗಿ ನೀಡಿದ್ದ ಭರವಸೆ ಈಡೇರಿಸಬೇಕು, ರಾಜ್ಯದಲ್ಲಿನ ವಕ್ಫ್ ಆಸ್ತಿಗಳನ್ನು ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಅಗತ್ಯ ಯೋಜನೆಗಳನ್ನು ರೂಪಿಸಬೇಕು, ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ವರದಿಯಲ್ಲಿನ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು, ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದ್ವೇಷ ಭಾಷಣ, ದ್ವೇಷ ಅಪರಾಧ, ದ್ವೇಷ ಪ್ರಚಾರಕ್ಕೆ ಕಡಿವಾಣ ಹಾಕಬೇಕು, ಶಾಸನ ಸಭೆಗಳಲ್ಲಿ ಮತ್ತು ಸರಕಾರದ ವಿವಿಧ ಸಂಸ್ಥೆಗಳ ಮುಖ್ಯಸ್ಥರ ಹುದ್ದೆಗಳಲ್ಲಿ ಮುಸ್ಲಿಮರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ಪ್ರಾತಿನಿಧ್ಯ ನೀಡಬೇಕು ಹಾಗೂ ಎಸ್‌ಐಆರ್ ಬಗ್ಗೆ ಸೂಕ್ತ ರಾಜಕೀಯ ತಂತ್ರ ರೂಪಿಸಬೇಕು ಎಂದು ಕೆಆರ್‌ಎಂಒ ಆಗ್ರಹಿಸಿತು.
ಬಳಿಕ ಮಾತನಾಡಿದ ಸಚಿವ ಯು.ಟಿ.ಖಾದರ್, ನಾವು ಜೊತೆ ಜೊತೆಯಾಗಿ ಮುಂದೆ ಹೋಗಬೇಕು. ನಿಮ್ಮೆಲ್ಲರ ಹಾರೈಕೆಯಿಂದಾಗಿ ನನಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹೆಚ್ಚುವರಿ ಜವಾಬ್ದಾರಿ ಸಿಕ್ಕಿದೆ. ನೀವು ನಮ್ಮ ಮುಂದಿಟ್ಟಿರುವ ಎಲ್ಲ ಆಗ್ರಹಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನವನ್ನು ಸಮುದಾಯವನ್ನು ಪ್ರತಿನಿಧಿಸುವ ಸಚಿವರು ಹಾಗೂ ಶಾಸಕರು ಮಾಡುತ್ತೇವೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಅಲ್ಪಸಂಖ್ಯಾತ ಸಮುದಾಯಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿದೆ. ಅದಕ್ಕಾಗಿ ನೀವು ಕೃತಜ್ಞತೆ ಸಲ್ಲಿಸಬೇಕು. ಸಮುದಾಯದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ನಮ್ಮ ಇಲಾಖೆಯಿಂದ ಜಾಗೃತಿ ಮೂಡಿಸಲಾಗುವುದು. ಸಮಾಜದಲ್ಲಿ ಸೌಹಾರ್ದತೆಯ ವಾತಾವರಣ ನಿರ್ಮಿಸುವುದು ನಮ್ಮ ಸರಕಾರದ ಮೊದಲ ಆದ್ಯತೆಯಾಗಿದೆ ಎಂದು ಅವರು ಹೇಳಿದರು.
ರಾಜಕೀಯ ಹಾಗೂ ಓಟಿನ ವಿಷಯ ಬದಿಗೊತ್ತಿ ಇಂದು ರಾಜ್ಯದಲ್ಲಿರುವ ಉತ್ತಮ ವಾತಾವರಣದಿಂದ ಲಾಭ ಪಡೆಯಬೇಕು. ನಕಾರಾತ್ಮಕ ಚಿಂತನೆಗಳಿಂದ ದೂರವಿರಬೇಕು. 2ಬಿ ಮೀಸಲಾತಿ ಹಾಗೂ ಜಾನುವಾರು ಪ್ರತಿಬಂಧಕ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ನಾವು ಬದ್ಧರಾಗಿದ್ದೇವೆ ಎಂದು ಖಾದರ್ ತಿಳಿಸಿದರು.
ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ನಾವು ಕೂತು ಪರಸ್ಪರ ಚರ್ಚೆ ಮಾಡಿ ಬಗೆಹರಿಸಿಕೊಳ್ಳೋಣ. ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ನಿಮ್ಮ ಆಗ್ರಹಗಳ ಕುರಿತು ಚರ್ಚಿಸಲು ಸಭೆ ಆಯೋಜಿಸಲು ಪ್ರಯತ್ನ ಮಾಡುತ್ತೇನೆ ಎಂದು ಖಾದರ್ ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಝ್ವಾನ್ ಅರ್ಶದ್ ಮಾತನಾಡಿ, ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ ಎಂದು ಹೇಳಿ ನೀವು ಸಮಾವೇಶ ಮಾಡಿದ್ರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ತಮ್ಮ ಮಾತನ್ನು ಆಳುವ ಸರಕಾರಗಳ ಮುಂದೆ ಇರಿಸಲು ಅವಕಾಶವಿದೆ. ಆದರೆ, ಈಗಿರುವ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಸೂಕ್ತವಾದ ಮಾರ್ಗದಲ್ಲಿ ತಮ್ಮ ಆಗ್ರಹವನ್ನು ಮುಂದಿರಿಸಬೇಕಿತ್ತು. ಏಕೆಂದರೆ ನಮ್ಮ ನಡೆಯನ್ನು ಬೇರೆಯವರು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬಾರದು ಎಂದರು.
ಈಗಾಗಲೇ ಹಿಜಾಬ್ ವಿಚಾರವನ್ನು ಬಗೆಹರಿಸಲಾಗಿದೆ. 2ಬಿ ಮೀಸಲಾತಿಯನ್ನು ಮರು ಸ್ಥಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಹಾಗೂ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ನಮಗೆ ವಿಧಾನಪರಿಷತ್ತಿನಲ್ಲಿ ಬಹುಮತ ಇರಲಿಲ್ಲ. ಈಗ ನಮಗೆ ಬಹುಮತ ಸಿಕ್ಕಿದೆ. ನಾವು ಮುಸ್ಲಿಮ್ ಶಾಸಕರ ವೇದಿಕೆಯಲ್ಲಿ ಈ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ರಿಝ್ವಾನ್ ಅರ್ಶದ್ ಹೇಳಿದರು.
ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವ ವಿಧೇಯಕವನ್ನು ಈಗಾಗಲೆ ಅಂಗೀಕರಿಸಲಾಗಿದೆ. ಆದರೆ, ರಾಜ್ಯಪಾಲರ ಬಳಿ ಅಂಕಿತಕ್ಕೆ ಬಾಕಿಯಿದೆ. ಕಾಂಗ್ರೆಸ್ ಸರಕಾರ ಮಾಡಿರುವ ಒಳ್ಳೆಯ ಕೆಲಸಗಳ ಬಗ್ಗೆಯೂ ನೀವು ಮಾತನಾಡಬೇಕು ಎಂದು ಹೇಳಿದರು.
ಶೀಘ್ರದಲ್ಲೆ 56 ಸಾವಿರ ಸರಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ಅದರಲ್ಲಿ ಮುಸ್ಲಿಮರಿಗೆ ಮೀಸಲಾತಿ ಅನ್ವಯ ನ್ಯಾಯ ಸಮ್ಮತ ಪಾಲು ದೊರೆಯುವಂತೆ ಮಾಡುತ್ತೇವೆ. ಎಸ್‌ಐಆರ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಷ್ಟು ಸಕ್ರಿಯವಾಗಿ ಬೇರೆ ಯಾವುದೇ ಪಕ್ಷ ಕೆಲಸ ಮಾಡಿಲ್ಲ. ಇದು ಮೊದಲ ಸಭೆ ಆಗಬಾರದು, ನಾವು ಆಗಿಂದಾಗ್ಗೆ ಈ ರೀತಿ ಸಭೆಗಳನ್ನು ಸೇರಿ ಸಮುದಾಯದ ವಿಚಾರಗಳನ್ನು ಚರ್ಚೆ ಮಾಡಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಬಲ್ಕೀಸ್ ಬಾನು, ಕೆ.ಅಬ್ದುಲ್ ಜಬ್ಬಾರ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ ಸಂಚಾಲಕರಾದ ಮುಹಮ್ಮದ್ ಯಾಸೀನ್ ಮಲ್ಪೆ, ಸುಹೇಲ್ ಅಹ್ಮದ್ ಮರೂರು, ಯಹ್ಯಾ ದಾಮೂದಿ, ಹಾರಿಸ್ ಸಿದ್ದೀಕಿ, ತನ್ವೀರ್ ಅಹ್ಮದ್, ಮೌಲಾನಾ ಸೈಯದ್ ಶಬ್ಬೀರ್ ಅಹ್ಮದ್ ನದ್ವಿ, ನ್ಯಾಯವಾದಿ ಅಕ್ಮಲ್ ರಿಝ್ವಿ ಸೇರಿದಂತೆ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.