ಕನ್ನಡಿಗರ ಸುರಕ್ಷತೆ, ಅಕ್ರಮ ವಲಸೆ, ಉದ್ಯೋಗ ಹಕ್ಕು ರಕ್ಷಣೆಗೆ ರಾಜ್ಯವ್ಯಾಪಿ ಹೋರಾಟ : ಟಿ.ಎ.ನಾರಾಯಣಗೌಡ
ಟಿ.ಎ.ನಾರಾಯಣಗೌಡ
ಬೆಂಗಳೂರು: ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಹೊರರಾಜ್ಯಗಳಿಂದ ಬಂದ ಕೆಲವರಿಂದ ಕನ್ನಡಿಗರ ಮೇಲೆ ಹಲ್ಲೆ, ಬೆದರಿಕೆ ಹಾಗೂ ದೌರ್ಜನ್ಯ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.
ಕನ್ನಡಿಗರ ಸುರಕ್ಷತೆ, ಸ್ವಾಭಿಮಾನ, ಉದ್ಯೋಗ ಹಾಗೂ ಸ್ಥಳೀಯರ ಹಕ್ಕುಗಳ ರಕ್ಷಣೆಗಾಗಿ ರಾಜ್ಯಾದ್ಯಂತ ಜನಜಾಗೃತಿ ಮತ್ತು ಹೋರಾಟದ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಉದ್ಯೋಗ, ವ್ಯಾಪಾರ ಹಾಗೂ ಉತ್ತಮ ಬದುಕಿನ ಉದ್ದೇಶದಿಂದ ಕರ್ನಾಟಕಕ್ಕೆ ಬರುವವರನ್ನು ಕನ್ನಡಿಗರು ಸದಾ ಸ್ವಾಗತಿಸಿದ್ದಾರೆ. ಆದರೆ ಇಲ್ಲಿನ ಕಾನೂನು ಉಲ್ಲಂಘಿಸುವುದು, ಸ್ಥಳೀಯರನ್ನು ಬೆದರಿಸುವುದು, ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಅಗೌರವ ತೋರುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದರು.
ಹೊರರಾಜ್ಯಗಳಿಂದ ಹೆಚ್ಚುತ್ತಿರುವ ವಲಸೆಯಿಂದ ಬೆಂಗಳೂರಿನಂತಹ ನಗರಗಳಲ್ಲಿ ಉದ್ಯೋಗದ ಸ್ಪರ್ಧೆ, ವಸತಿ ಹಾಗೂ ಬಾಡಿಗೆ ದರಗಳ ಏರಿಕೆ, ಸಂಚಾರ ದಟ್ಟಣೆ ಮತ್ತು ಮೂಲಸೌಕರ್ಯದ ಮೇಲಿನ ಒತ್ತಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಮಗ್ರ ವಲಸೆ ನೀತಿ ರೂಪಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಯಾದಾಗ ಸ್ಥಳೀಯ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಖಾಸಗಿ ಕ್ಷೇತ್ರದಲ್ಲಿಯೂ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಪರಿಣಾಮಕಾರಿ ಕಾನೂನು ಹಾಗೂ ಅನುಷ್ಠಾನ ವ್ಯವಸ್ಥೆ ಜಾರಿಗೊಳಿಸಬೇಕು. ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸೇವೆಗಳು ಹಾಗೂ ವ್ಯಾಪಾರ–ವಹಿವಾಟುಗಳಲ್ಲಿ ಕನ್ನಡ ಭಾಷೆಯ ಬಳಕೆಯನ್ನು ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕಕ್ಕೆ ಬರುವ ಪ್ರತಿಯೊಬ್ಬರೂ ಇಲ್ಲಿನ ಕಾನೂನು, ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವವರು ಯಾರೇ ಆಗಿರಲಿ, ಯಾವುದೇ ಒತ್ತಡಕ್ಕೆ ಮಣಿಯದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಅಭಿಯಾನ ಯಾವುದೇ ಭಾಷೆ, ರಾಜ್ಯ ಅಥವಾ ಸಮುದಾಯದ ವಿರುದ್ಧದ ದ್ವೇಷದ ಅಭಿಯಾನವಲ್ಲ. ಕನ್ನಡಿಗರ ಸುರಕ್ಷತೆ, ಸ್ಥಳೀಯರ ಉದ್ಯೋಗ ಹಕ್ಕು, ಕನ್ನಡ ಭಾಷೆಯ ಗೌರವ, ಕಾನೂನು ಸುವ್ಯವಸ್ಥೆ ಹಾಗೂ ಕರ್ನಾಟಕದ ಸಾಮಾಜಿಕ–ಆರ್ಥಿಕ ಹಿತಾಸಕ್ತಿಗಳ ರಕ್ಷಣೆಯ ಉದ್ದೇಶ ಹೊಂದಿದೆ ಎಂದು ನಾರಾಯಣಗೌಡ ಸ್ಪಷ್ಟಪಡಿಸಿದರು.
ಈ ಎಲ್ಲ ವಿಚಾರಗಳ ಕುರಿತು ರಾಜ್ಯಾದ್ಯಂತ ಜನಜಾಗೃತಿ ಮೂಡಿಸುವುದರ ಜೊತೆಗೆ, ಸರ್ಕಾರದ ಮುಂದೆ ಸಮಗ್ರ ಬೇಡಿಕೆಗಳನ್ನು ಮಂಡಿಸಲಾಗುವುದು. ಅಗತ್ಯವಿದ್ದಲ್ಲಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದರು.