ರೇಣುಕಾಸ್ವಾಮಿ ತಾಯಿ ಪಾಟಿ ಸವಾಲಿಗೆ ಅನುಮತಿ ಕೋರಿದ ಅರ್ಜಿಯ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Update: 2026-08-12 23:08 IST

ದರ್ಶನ್‌/ರೇಣುಕಾಸ್ವಾಮಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ಸಾಕ್ಷಿಯೂ ಆಗಿರುವ ಮೃತನ ತಾಯಿ ರತ್ನಪ್ರಭಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌ ಆದೇಶ ಕಾಯ್ದಿರಿಸಿದೆ.

ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ವಾದ ಮಂಡಿಸಿ, ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 161ರ ಅನುಸಾರ ತನಿಖಾಧಿಕಾರಿ ಮುಂದೆ ರತ್ನಪ್ರಭಾ ನೀಡಿರುವ ಹೇಳಿಕೆ ತನಿಖೆಯ ವೇಳೆ ಸಂಗ್ರಹಿಸಲಾದ ಸಾಕ್ಷ್ಯಗಳು ಹಾಗೂ ತಾಂತ್ರಿಕ ದಾಖಲೆಗಳಿಗೆ ಸಂಪೂರ್ಣ ತದ್ವಿರುದ್ಧಾಗಿವೆ. ಇದು ತಾಂತ್ರಿಕ ಮತ್ತು ಮೌಖಿಕ ಹೇಳಿಕೆಗಳ ನಡುವಿನ ವಿರೋಧಾಭಾಸಕ್ಕೆ ಎಡೆಮಾಡಿಕೊಟ್ಟಿದೆ. ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್‌ 154ರ ಅನುಸಾರ ಪ್ರಾಸಿಕ್ಯೂಷನ್‌ ಸಾಕ್ಷಿ ತನ್ನ ಹೇಳಿಕೆಯಿಂದ ಹಿಂದೆ ಸರಿದಾಗ, ನಮ್ಮ ಮನವಿಯ ಮೇರೆಗೆ ನ್ಯಾಯಾಲಯ ತನ್ನ ವಿವೇಚನೆಯನ್ನು ಬಳಸಿ ಪಾಟಿ ಸವಾಲು ನಡೆಸಲು ಅನುಮತಿ ನೀಡಬೇಕಿತ್ತು. ಆದರೆ, ಸೆಷನ್ಸ್ ನ್ಯಾಯಾಲಯ ತಳ್ಳಿ ಹಾಕಿದೆ ಎಂದರು.

ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ಪರ ಹಿರಿಯ ವಕೀಲ ಹಷ್ಮತ್‌ ಪಾಷಾ ಅವರು, ಮೂಗಿನ ನೇರಕ್ಕೆ ಸಾಕ್ಷಿಯ ಹೇಳಿಕೆಯನ್ನು ಪಡೆಯುವಂತೆ ಮಾಡುವ ಪ್ರಾಸಿಕ್ಯೂಷನ್‌ ಒತ್ತಾಯ ಸಲ್ಲದು. ಈ ತಕರಾರಿನ ಕೇಂದ್ರಬಿಂದು ಸಾಕ್ಷಿಯು ಮೃತ ವ್ಯಕ್ತಿಯ ತಾಯಿಯಾಗಿದ್ದು ನೋವುಂಡಿರುವ ಅವರ ಹೇಳಿಕೆಯ ಸತ್ಯಾಸತ್ಯತೆಯನ್ನು ನ್ಯಾಯಪೀಠ ಉದಾರವಾಗಿ ಪರಿಗಣಿಸಬೇಕು ಎಂದು ಕೋರಿದರು. ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ‌ ನ್ಯಾಯಪೀಠ ಆದೇಶ ಕಾಯ್ದಿರಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News