×
Ad

ಮಾ.16ರೊಳಗೆ ಗ್ರಾಮ-ಉಪಗ್ರಾಮ ರಚನೆಗೆ ಗಡುವು : ಕೃಷ್ಣಭೈರೇಗೌಡ

Update: 2026-03-09 18:05 IST

ಬೆಂಗಳೂರು : ನೂತನ ಕಂದಾಯ ಗ್ರಾಮ-ಉಪಗ್ರಾಮ ರಚನೆಗೆ ಪ್ರಸ್ತಾವನೆ ನೀಡಲು ಅಧಿಕಾರಿಗಳಿಗೆ 2026ರ ಮಾ.16ರ ವರೆಗೆ ಗಡುವು ನಿಗದಿಪಡಿಸಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ವಿಧಾನಸಭೆ ಪ್ರಶ್ನೋತ್ತರ ವೇಳೆ ಜೆಡಿಎಸ್ ಸದಸ್ಯ ಎಚ್.ಟಿ.ಮಂಜು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಕೆಲವು ಅಧಿಕಾರಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ದಾಖಲೆ ರಹಿತ ವಸತಿ ಪ್ರದೇಶಗಳನ್ನು ಗುರುತಿಸಿ ಲಕ್ಷಾಂತರ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಸಹಕರಿಸಿದ್ದಾರೆ. ಆದರೆ, ಕೆಲವು ಅಧಿಕಾರಿಗಳ ಅಸಡ್ಡೆಯಿಂದ ಅರ್ಹತೆ ಇದ್ದರೂ ಹಲವು ವಸತಿ ಪ್ರದೇಶಗಳಿಗೆ ದಾಖಲೆ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಮಾ.16ರೊಳಗೆ ಎಲ್ಲ ಅರ್ಹ ಕಂದಾಯ ಗ್ರಾಮ-ಉಪಗ್ರಾಮ ರಚನೆಗೆ ಪ್ರಸ್ತಾವನೆ ನೀಡುವಂತೆ ಅಧಿಕಾರಿಗಳಿಗೆ ಗಡುವು ನೀಡಲಾಗಿದೆ ಎಂದು ವಿವರಿಸಿದರು.

ಕೃಷ್ಣರಾಜಪೇಟೆ ತಾಲೂಕಿನಲ್ಲಿ 7 ದಾಖಲೆ ರಹಿತ ವಸತಿ ಪ್ರದೇಶಗಳನ್ನು ಗುರುತಿಸಲಾಗಿದೆ. ಪ್ರಸ್ತುತ ಜನಗಣತಿ ಪ್ರಗತಿಯಲ್ಲಿದೆ. ಜನಗಣತಿ ಸಂದರ್ಭದಲ್ಲಿ ಕಂದಾಯ ಗ್ರಾಮ ಘೋಷಿಸುವಂತಿಲ್ಲ. ಹೀಗಾಗಿ ಜನಗಣತಿ ಮುಗಿದ ಕೂಡಲೇ ಆ ಭಾಗದ ಅರ್ಹ ಫಲಾನುಭವಿಗಳಿಗೆ ದಾಖಲೆ ಮಾಡಿಕೊಡುತ್ತೇವೆ. ಪ್ರಸ್ತುತ ಎಲ್ಲವೂ ಆನ್‍ಲೈನ್ ಡಿಜಿಟಲೀಕರಣವಾಗಿದೆ. ನಾಳೆ ಯಾರು ಇರಲಿ ಇಲ್ಲದಿರಲಿ ದಾಖಲೆ ಆಗೇ ಆಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಸರಕಾರ ಕಳೆದ ಎರಡೂವರೆ ವರ್ಷದಲ್ಲಿ 2.17 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಿದೆ. ಇನ್ನೂ 1.50 ರಿಂದ 2 ಲಕ್ಷ ಮನೆಗಳಿಗೆ ಹಕ್ಕುಪತ್ರ ನೀಡಲು ಪ್ರಸ್ತಾವನೆ ಬಂದಿವೆ. ಈ ಜವಾಬ್ದಾರಿಯನ್ನು ಸಂಪೂರ್ಣ ಅಧಿಕಾರಿಗಳಿಗೆ ವಹಿಸದೆ, ಜನ ಪ್ರತಿನಿಧಿಗಳೂ ಈ ಬಗ್ಗೆ ಆಸಕ್ತಿ ತೆಗೆದುಕೊಂಡರೆ ಮತ್ತಷ್ಟು ಜನರಿಗೆ ಅನುಕೂಲವಾಗಲಿದೆ ಎಂದೂ ಅವರು ಅಭಿಪ್ರಾಯಪಟ್ಟರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News