×
Ad

ದಾವಣಗೆರೆ ದಕ್ಷಿಣ ಕ್ಷೇತ್ರ | ಶಾಮನೂರು ಮಾತು ಕೊಟ್ಟಿದ್ದರಿಂದ ಅಲ್ಪಸಂಖ್ಯಾತ ಸಮುದಾಯದವರು ಟಿಕೆಟ್ ಕೇಳುತ್ತಿದ್ದಾರೆ : ಝಮೀರ್ ಅಹ್ಮದ್

Update: 2026-03-09 19:14 IST

ಬೆಂಗಳೂರು : ಶಾಮನೂರು ಶಿವಶಂಕರಪ್ಪನವರು 2023ರ ವಿಧಾನಸಭಾ ಚುನಾವಣೆಯಲ್ಲಿ ಇದೇ ನನ್ನ ಕೊನೆಯ ಚುನಾವಣೆ, ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತರನ್ನು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನಿಲ್ಲಿಸಿ ಗೆಲ್ಲಿಸಿಕೊಂಡು ಬರುವುದಾಗಿ ಮಾತುಕೊಟ್ಟಿದ್ದರಂತೆ, ಆದುದರಿಂದಲೆ, ಈ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಟಿಕೆಟ್ ಕೇಳುತ್ತಿದ್ದಾರೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ‘ಅವನ್ಯಾರು ಇಲ್ಲಿ ಬಂದು ಮಾತನಾಡಲು’ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನೀಡಿರುವ ಹೇಳಿಕೆ ಕುರಿತು ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಅಲ್ಪಸಂಖ್ಯಾತರ ಸಮುದಾಯದ ಮುಖಂಡರು ನನ್ನ ಬಳಿ ಬಂದು, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸುಮಾರು 80 ಸಾವಿರ ಅಲ್ಪಸಂಖ್ಯಾತ ಸಮುದಾಯದ ಮತದಾರರಿದ್ದಾರೆ. ಈ ಉಪ ಚುನಾವಣೆಯಲ್ಲಿ ನಮಗೆ ಟಿಕೆಟ್ ಕೊಡಿಸಬೇಕು ಎಂದು ಕೇಳಿದ್ದಾರೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ನಾನು ಆ ಸಮುದಾಯದ ನಾಯಕ. ಆದುದರಿಂದ, ನನ್ನ ಬಳಿ ಬಂದು ಕೇಳದೆ, ಬೇರೆಯವರ ಬಳಿ ಹೋಗಿ ಕೇಳಲು ಆಗುತ್ತದೆಯೇ? ನಾನು ನನ್ನ ವರದಿಯನ್ನು ಹೈಕಮಾಂಡ್‍ಗೆ ಕೊಡುತ್ತೇನೆ. ಅವರು ಯಾರಿಗೆ ಟಿಕೆಟ್ ಕೊಡಬೇಕು ಎಂದು ತೀರ್ಮಾನ ಮಾಡುತ್ತಾರೆ. ಇಲ್ಲಿ ನನ್ನ ಕ್ಷೇತ್ರ, ಅವರ ಕ್ಷೇತ್ರ ಅಂತ ಏನು ಇಲ್ಲ. 224 ಕ್ಷೇತ್ರಗಳು ಕಾಂಗ್ರೆಸ್ ಕ್ಷೇತ್ರಗಳು, ಹೈಕಮಾಂಡ್ ಕ್ಷೇತ್ರಗಳು ಎಂದು ಅವರು ಹೇಳಿದರು.

ಯಾರಿಗೆ ಟಿಕೆಟ್ ಕೊಡಬೇಕು ಎಂದು ನಾನಾಗಲಿ, ಮಲ್ಲಿಕಾರ್ಜುನ್ ಅವರಾಗಲಿ ತೀರ್ಮಾನ ಮಾಡಲು ಆಗುವುದಿಲ್ಲ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಹೈಕಮಾಂಡ್. ನಾವು ಟಿಕೆಟ್ ಅನ್ನು ಕೇಳಲೇಬಾರದೆ, ನಮ್ಮ ಹಕ್ಕು ನಮಗೆ ಕೊಡಿ ಎಂದು ಕೇಳುವುದರಲ್ಲಿ ತಪ್ಪೇನಿದೆ? ನನ್ನ ಸಮಾಜ ನನ್ನ ಬಳಿ ಮಾಡಿರುವ ಆಗ್ರಹವನ್ನು ನಾನು ಹೈಕಮಾಂಡ್ ಮುಂದೆ ಇಡುತ್ತೇನೆ. ದಾವಣಗೆರೆ ದಕ್ಷಿಣ ಕಾಂಗ್ರೆಸ್ ಭದ್ರ ಕೋಟೆ, ಅಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲುತ್ತಾರೆ ಎಂದು ಝಮೀರ್ ಅಹ್ಮದ್ ತಿಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News