×
Ad

S I R ; ಸುಪ್ರೀಂ ಕೋರ್ಟ್‌ ಹೇಳಿದ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸಿ : ಚುನಾವಣಾ ಆಯೋಗಕ್ಕೆ ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟ ಮನವಿ

Update: 2026-06-30 20:10 IST

ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ | Photo: x/@ceo_karnataka

ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (S I R) ಪ್ರಕ್ರಿಯೆಯಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶಿಸಿರುವ ಎಲ್ಲಾ ಕಾರ್ಯವಿಧಾನದ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಹಾಗೂ ಮತದಾರರ ಹಕ್ಕುಗಳಿಗೆ ಧಕ್ಕೆಯಾಗದಂತೆ ಪ್ರಕ್ರಿಯೆಯನ್ನು ಪಾರದರ್ಶಕ ಮತ್ತು ನ್ಯಾಯಸಮ್ಮತವಾಗಿ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟ(KRMO) ಕರ್ನಾಟಕ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರಿಗೆ ವಿಸ್ತೃತ ಮನವಿ ಸಲ್ಲಿಸಿದೆ.

ಕರ್ನಾಟಕದ ವಿವಿಧ ಮುಸ್ಲಿಮ್ ಸಾಮಾಜಿಕ, ಶೈಕ್ಷಣಿಕ ಮತ್ತು ಸಮುದಾಯ ಸಂಘಟನೆಗಳನ್ನು ಪ್ರತಿನಿಧಿಸುವ ರಾಜ್ಯಮಟ್ಟದ ವೇದಿಕೆಯಾದ KRMO, ಭಾರತೀಯ ಚುನಾವಣಾ ಆಯೋಗವು ಕರ್ನಾಟಕ ಸೇರಿದಂತೆ ಹದಿನೈದು ರಾಜ್ಯಗಳಲ್ಲಿ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (S I R) ಪ್ರಕ್ರಿಯೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹಲವು ಸಾಂವಿಧಾನಿಕ ಮತ್ತು ಆಡಳಿತಾತ್ಮಕ ಕಳವಳಗಳನ್ನು ಮನವಿಯಲ್ಲಿ ಪ್ರಸ್ತಾಪಿಸಿದೆ.

ಮತದಾರರ ಪಟ್ಟಿಯ ಸಮಗ್ರತೆ, ನಿಖರತೆ ಮತ್ತು ಶುದ್ಧತೆಯನ್ನು ಕಾಯ್ದುಕೊಳ್ಳುವುದು ಚುನಾವಣಾ ಆಯೋಗದ ಸಾಂವಿಧಾನಿಕ ಕರ್ತವ್ಯವಾಗಿದ್ದು, ಅದು ಸಂವಿಧಾನದ 324ನೇ ವಿಧಿ ಹಾಗೂ ಜನತಾ ಪ್ರತಿನಿಧಿತ್ವ ಕಾಯ್ದೆ, 1950ರ ಸೆಕ್ಷನ್‌ 21ರಿಂದ ಉದ್ಭವಿಸಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಬಿಹಾರ S I R ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಅಭಿಪ್ರಾಯವನ್ನು ಉಲ್ಲೇಖಿಸಿರುವ KRMO, ಮತದಾರರ ಪಟ್ಟಿ ಕೇವಲ ಆಡಳಿತಾತ್ಮಕ ದಾಖಲೆಯಲ್ಲ; ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿರುವ ಮತದಾರರನ್ನು ನಿರ್ಧರಿಸುವ ಮಹತ್ವದ ದಾಖಲೆಯಾಗಿದೆ ಎಂದು ಹೇಳಿದೆ.

►ಸುಪ್ರೀಂ ಕೋರ್ಟ್‌ ತೀರ್ಪಿನ ಉಲ್ಲೇಖ

'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಅಂಡ್ ಅದರ್ಸ್ Vs ಎಲೆಕ್ಷನ್ ಕಮಿಷನ್ ಆಫ್ ಇಂಡಿಯಾ ಅಂಡ್ ಅದರ್ಸ್' (2026 INSC 564) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು KRMO ಉಲ್ಲೇಖಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೋಯ್ಮಲ ಬಾಗ್ಚಿ ಮತ್ತು ವಿಪುಲ್ ಪಂಚೋಲಿ ಅವರನ್ನೊಳಗೊಂಡ ಪೀಠವು S I R ಪ್ರಕ್ರಿಯೆಯ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದಿದ್ದರೂ, ಅದರ ಅನುಷ್ಠಾನಕ್ಕೆ ಹಲವು ಮಹತ್ವದ ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸಿದೆ ಎಂದು ಒಕ್ಕೂಟ ಹೇಳಿದೆ.

ಸಂವಿಧಾನದ 324ನೇ ವಿಧಿ ಹಾಗೂ ಜನತಾ ಪ್ರತಿನಿಧಿತ್ವ ಕಾಯ್ದೆಯ ಸೆಕ್ಷನ್‌ 21(3) ಅಡಿಯಲ್ಲಿ S I R ನಡೆಸುವ ಅಧಿಕಾರ ಚುನಾವಣಾ ಆಯೋಗಕ್ಕಿದೆ. ಆದರೆ, ಆ ಅಧಿಕಾರವನ್ನು ಕಾನೂನು ಮತ್ತು ಸಾಂವಿಧಾನಿಕ ಮಿತಿಗಳೊಳಗೆ ಮಾತ್ರ ಬಳಸಬೇಕು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ ಎಂದು KRMO ಹೇಳಿದೆ.

ಮತದಾರರ ಪಟ್ಟಿಯ ನಿಖರತೆ ಮತ್ತು ಸಮಗ್ರತೆಯನ್ನು ಖಚಿತಪಡಿಸಲು S I R ಪ್ರಕ್ರಿಯೆ ಅಗತ್ಯವಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ, ಈ ಪ್ರಕ್ರಿಯೆಯನ್ನು ಜಾರಿಗೊಳಿಸುವಾಗ ಸೂಕ್ತ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

►ಕಡ್ಡಾಯ ಸುರಕ್ಷತಾ ಕ್ರಮಗಳ ಅನುಷ್ಠಾನಕ್ಕೆ ಆಗ್ರಹ

ಸುಪ್ರೀಂ ಕೋರ್ಟ್‌ ನಿರ್ದೇಶಿಸಿರುವ ಸುರಕ್ಷತಾ ಕ್ರಮಗಳಲ್ಲಿ, ಮತದಾರರ ಹೆಸರನ್ನು ಅಳಿಸುವ ಮೊದಲು ವೈಯಕ್ತಿಕ ನೋಟಿಸ್‌ ನೀಡುವುದು, ಅಳಿಸುವಿಕೆಗೆ ಕಾರಣಗಳನ್ನು ಲಿಖಿತವಾಗಿ ತಿಳಿಸುವುದು, ಎರಡು ಹಂತದ ಮೇಲ್ಮನವಿ ಅವಕಾಶ ಕಲ್ಪಿಸುವುದು, ಆಧಾರ್‌ ಸೇರಿದಂತೆ ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯನ್ನು ವಿಸ್ತರಿಸುವುದು ಮತ್ತು ಅಳಿಸಲಾದ ಹೆಸರುಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ಸೇರಿವೆ ಎಂದು KRMO ತಿಳಿಸಿದೆ.

ಈಗಾಗಲೇ ಮತದಾರರ ಪಟ್ಟಿಯಲ್ಲಿರುವವರನ್ನು ಸೂಕ್ತ ಕಾರಣಗಳಿಲ್ಲದೆ ಪಟ್ಟಿಯಿಂದ ಕೈಬಿಡಬಾರದು ಎಂದೂ ಸುಪ್ರೀಂ ಕೋರ್ಟ್‌ ಸೂಚಿಸಿದೆ ಎಂದು ಒಕ್ಕೂಟವು ಉಲ್ಲೇಖಿಸಿದೆ. ಮತದಾರರ ಹೆಸರನ್ನು ಅಳಿಸುವ ಮೊದಲು ಸಂಬಂಧಪಟ್ಟವರಿಗೆ ವೈಯಕ್ತಿಕ ನೋಟಿಸ್‌ ನೀಡಲಾಗುತ್ತದೆಯೇ, ಅಳಿಸುವಿಕೆಗೆ ಕಾರಣಗಳನ್ನು ಲಿಖಿತವಾಗಿ ತಿಳಿಸಲಾಗುತ್ತದೆಯೇ, ಅಳಿಸಲಾದ ಹೆಸರುಗಳನ್ನು ಮುಖ್ಯ ಚುನಾವಣಾ ಅಧಿಕಾರಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆಯೇ ಹಾಗೂ ಮೇಲ್ಮನವಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆಯೂ ಆಗ್ರಹಿಸಿದೆ.

►ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಅಧಿಕಾರವಿಲ್ಲ

ಪೌರತ್ವಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಅಧಿಕಾರ ವ್ಯಾಪ್ತಿಯನ್ನು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ ಎಂದು KRMO ತಿಳಿಸಿದೆ. ವ್ಯಕ್ತಿಯ ಪೌರತ್ವದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಚುನಾವಣಾ ಆಯೋಗಕ್ಕಿಲ್ಲ ಮತ್ತು ಆ ಅಧಿಕಾರವು ಪೌರತ್ವ ಕಾಯ್ದೆಯಡಿ ನಿಗದಿಪಡಿಸಲಾದ ಪ್ರಾಧಿಕಾರಕ್ಕೆ ಸೇರಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ ಎಂದು ಒಕ್ಕೂಟ ಉಲ್ಲೇಖಿಸಿದೆ.

ಪೌರತ್ವದ ಆಧಾರದ ಮೇಲೆ ಯಾವುದೇ ಮತದಾರರ ಹೆಸರನ್ನು ಅಳಿಸುವ ಮೊದಲು ಸುಪ್ರೀಂ ಕೋರ್ಟ್‌ ಸೂಚಿಸಿರುವ ಪ್ರಕ್ರಿಯೆಯನ್ನು ಅನುಸರಿಸಬೇಕು. ಅಲ್ಲದೆ, ಕ್ಷೇತ್ರಮಟ್ಟದ ಅಧಿಕಾರಿಗಳು ಸ್ವತಂತ್ರವಾಗಿ ಯಾರ ಪೌರತ್ವದ ಬಗ್ಗೆಯೂ ನಿರ್ಧಾರ ಕೈಗೊಳ್ಳಬಾರದು ಎಂದು ಸ್ಪಷ್ಟ ಸೂಚನೆ ನೀಡಬೇಕು ಎಂದು KRMO ಒತ್ತಾಯಿಸಿದೆ.

►ಪಶ್ಚಿಮ ಬಂಗಾಳದ ಉಲ್ಲೇಖ

ಪಶ್ಚಿಮ ಬಂಗಾಳದಲ್ಲಿ ನಡೆದ S I R ಪ್ರಕ್ರಿಯೆಯಲ್ಲಿ ಸುಮಾರು 91 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗಿತ್ತು. ಇವರಲ್ಲಿ ಸುಮಾರು 27 ಲಕ್ಷ ಮಂದಿ ತಮ್ಮ ಮೇಲ್ಮನವಿಗಳ ವಿಚಾರಣೆ ಪೂರ್ಣಗೊಳ್ಳದ ಕಾರಣ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗಲಿಲ್ಲ ಎಂದು KRMO ಉಲ್ಲೇಖಿಸಿದೆ.

ಪಶ್ಚಿಮ ಬಂಗಾಳದಲ್ಲಿ ಸಲ್ಲಿಕೆಯಾಗಿದ್ದ ಸುಮಾರು 6,000 ಮೇಲ್ಮನವಿಗಳಲ್ಲಿ 4,000ಕ್ಕೂ ಹೆಚ್ಚು ಮೇಲ್ಮನವಿಗಳನ್ನು ಅಂಗೀಕರಿಸಿರುವುದು, ಮತದಾರರ ಹೆಸರುಗಳನ್ನು ಅಳಿಸುವ ಪ್ರಕ್ರಿಯೆಯಲ್ಲಿ ಗಮನಾರ್ಹ ಪ್ರಮಾಣದ ತಪ್ಪುಗಳು ನಡೆದಿದ್ದುದನ್ನು ಸೂಚಿಸುತ್ತದೆ ಎಂದು ಒಕ್ಕೂಟ ಹೇಳಿದೆ. ಕರ್ನಾಟಕದಲ್ಲಿ ಇಂತಹ ಪರಿಸ್ಥಿತಿ ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಒತ್ತಾಯಿಸಿದೆ.

►ಭಾಷೆ ಮತ್ತು ಹೆಸರು ಹೊಂದಾಣಿಕೆ ಕುರಿತು ಕಳವಳ

ಬಿಹಾರ ಮತ್ತು ಪಶ್ಚಿಮ ಬಂಗಾಳದ ಅನುಭವಗಳನ್ನು ಉಲ್ಲೇಖಿಸಿರುವ KRMO, ಹೆಸರುಗಳ ಭಾಷಾಂತರ, ಲಿಪ್ಯಂತರ ಮತ್ತು ಡಿಜಿಟಲ್ ದಾಖಲೀಕರಣದಲ್ಲಿನ ದೋಷಗಳಿಂದ ಮತದಾರರ ಹೆಸರುಗಳು ತಪ್ಪಾಗಿ ಅಳಿಸುವ ಅಪಾಯವಿದೆ ಎಂದು ಎಚ್ಚರಿಸಿದೆ.

ಮೊಹಮ್ಮದ್‌, ಮುಹಮ್ಮದ್‌, ಎಂಡಿ, ಸೈಯದ್‌ ಮತ್ತು ಸಯ್ಯದ್‌ ಸೇರಿದಂತೆ ಒಂದೇ ಹೆಸರಿನ ವಿವಿಧ ಕಾಗುಣಿತಗಳು, ಮೊದಲಕ್ಷರಗಳ ಬಳಕೆ, ವಿವಾಹದ ನಂತರ ಮಹಿಳೆಯರ ಹೆಸರುಗಳಲ್ಲಿ ಆಗುವ ಬದಲಾವಣೆಗಳು ಹಾಗೂ ಧರ್ಮಾಂತರಗೊಂಡವರ ಹೆಸರುಗಳ ಬದಲಾವಣೆಗಳನ್ನು ಪರಿಗಣಿಸಿ ಪರಿಶೀಲನೆ ನಡೆಸಬೇಕು ಎಂದು KRMO ಕೋರಿದೆ.

ಚುನಾವಣಾ ಮಾಹಿತಿಯನ್ನು ಯಾವ ಭಾಷೆಗಳಲ್ಲಿ ಸಂಗ್ರಹಿಸಲಾಗುತ್ತದೆ, ಕನ್ನಡ ಮತ್ತು ಇಂಗ್ಲಿಷ್‌ ನಡುವೆ ಹೆಸರುಗಳ ಲಿಪ್ಯಂತರ ನಡೆಯುತ್ತದೆಯೇ, ಹೆಸರುಗಳನ್ನು ಹೊಂದಾಣಿಕೆ ಮಾಡಲು ಯಾವ ವಿಧಾನವನ್ನು ಬಳಸಲಾಗುತ್ತದೆ ಹಾಗೂ ಸಂದೇಹ ಉಂಟಾದ ಸಂದರ್ಭಗಳಲ್ಲಿ ಅಧಿಕಾರಿಗಳಿಂದ ಮರುಪರಿಶೀಲನೆ ನಡೆಸಲಾಗುತ್ತದೆಯೇ ಎಂಬ ಮಾಹಿತಿಯನ್ನು ಬಹಿರಂಗಪಡಿಸುವಂತೆ KRMO ಮನವಿ ಮಾಡಿದೆ.

►ಮನೆ ಮ್ಯಾಪಿಂಗ್‌, ನಗರ ಮತದಾರರು ಮತ್ತು ವಲಸಿಗರಿಗೆ ರಕ್ಷಣೆ

ಮನೆವಾರು ಮತದಾರರ ವಿವರಗಳನ್ನು ದಾಖಲಿಸುವ ಪ್ರಕ್ರಿಯೆಯಲ್ಲಿ ಕುಟುಂಬ ಸದಸ್ಯರ ಹೆಸರುಗಳು ಕೈತಪ್ಪುವ ಸಾಧ್ಯತೆ, ಮತದಾರರನ್ನು ತಪ್ಪಾದ ಮನೆಗಳಿಗೆ ಸೇರಿಸುವ ಸಾಧ್ಯತೆ ಹಾಗೂ ಕರಡು ಮತದಾರರ ಪಟ್ಟಿ ಪ್ರಕಟವಾಗುವ ಮೊದಲು ಇಂತಹ ದೋಷಗಳನ್ನು ಸರಿಪಡಿಸಲು ಸಮರ್ಪಕ ವ್ಯವಸ್ಥೆ ಇಲ್ಲದಿರುವ ಬಗ್ಗೆ KRMO ಕಳವಳ ವ್ಯಕ್ತಪಡಿಸಿದೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರ ಪ್ರದೇಶಗಳಲ್ಲಿ ಕನ್ನಡದ ಜೊತೆಗೆ ಇತರ ಭಾಷೆಗಳನ್ನು ಮಾತನಾಡುವವರ ಸಂಖ್ಯೆಯೂ ಹೆಚ್ಚಿರುವುದರಿಂದ, ಅರ್ಜಿಗಳು, ಸೂಚನೆಗಳು, SMS ಸಂದೇಶಗಳು ಮತ್ತು ಸಹಾಯವಾಣಿ ಸೇವೆಗಳನ್ನು ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ಒದಗಿಸಬೇಕು ಎಂದು KRMO ಒತ್ತಾಯಿಸಿದೆ.

ಬಾಡಿಗೆದಾರರು, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಉದ್ಯೋಗ ಅಥವಾ ಇತರ ಕಾರಣಗಳಿಂದ ಆಗಾಗ್ಗೆ ಸ್ಥಳ ಬದಲಾಯಿಸುವ ಮತದಾರರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಬೇಕು ಎಂದು ಒಕ್ಕೂಟವು ಕೋರಿದೆ. ಪರಿಶೀಲನೆ ವೇಳೆ ಮನೆಯಲ್ಲಿ ಇಲ್ಲದ ಮತದಾರರಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಮತ್ತು ತಮ್ಮ ಹೆಸರುಗಳನ್ನು ಉಳಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದೂ ಒತ್ತಾಯಿಸಿದೆ.

►ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಒತ್ತು

ಪ್ರತಿ ಅರ್ಜಿ ಮತ್ತು ದಾಖಲೆ ಸಲ್ಲಿಕೆಗೆ ಪ್ರತ್ಯೇಕ ಸ್ವೀಕೃತಿ ಸಂಖ್ಯೆ ನೀಡಬೇಕು. ಅರ್ಜಿ ಸ್ವೀಕರಿಸಿರುವ ಬಗ್ಗೆ SMS ಮೂಲಕ ಮಾಹಿತಿ ನೀಡುವುದರ ಜೊತೆಗೆ, ಅರ್ಜಿಯ ಸ್ಥಿತಿಯನ್ನು ಪರಿಶೀಲಿಸುವ ವ್ಯವಸ್ಥೆ ಮತ್ತು ಅಳಿಸಲಾದ ಹೆಸರುಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು KRMO ಆಗ್ರಹಿಸಿದೆ.

ಬೂತ್‌ ಮಟ್ಟದ ಅಧಿಕಾರಿ(BLO)ಗಳು ಮತ್ತು ರಾಜಕೀಯ ಪಕ್ಷಗಳ ಮಾನ್ಯತೆ ಪಡೆದ ಪ್ರತಿನಿಧಿ(BLA)ಗಳಿಗೆ ಜಿಲ್ಲಾ ಮಟ್ಟದಲ್ಲಿ ಜಂಟಿ ತರಬೇತಿ ನೀಡಬೇಕು ಹಾಗೂ ತರಬೇತಿಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು KRMO ಒತ್ತಾಯಿಸಿದೆ.

ಮತದಾರರ ದೂರುಗಳನ್ನು ಸ್ವೀಕರಿಸಿ ಶೀಘ್ರವಾಗಿ ಪರಿಹರಿಸುವ ವ್ಯವಸ್ಥೆ ರೂಪಿಸಬೇಕು. ದೂರುಗಳು, ಆಕ್ಷೇಪಣೆಗಳು ಮತ್ತು ತಿದ್ದುಪಡಿಗಳ ವಿವರಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು ಎಂದೂ ಒಕ್ಕೂಟ ಮನವಿ ಮಾಡಿದೆ.

►ECINet ಕಾಲ್‌ಬ್ಯಾಕ್‌ ವ್ಯವಸ್ಥೆ ಕುರಿತು ತನಿಖೆಗೆ ಒತ್ತಾಯ

ಇಸಿಐನೆಟ್‌ (ECINet) ಆ್ಯಪ್‌ನಲ್ಲಿನ ಕಾಲ್‌ಬ್ಯಾಕ್‌ ಸೌಲಭ್ಯದ ಬಗ್ಗೆ KRMO ಕಳವಳ ವ್ಯಕ್ತಪಡಿಸಿದೆ. ಮತದಾರರು ಕಾಲ್‌ಬ್ಯಾಕ್‌ ಗಾಗಿ ಮನವಿ ಸಲ್ಲಿಸಿದ ಬಳಿಕ ಯಾವುದೇ ಕರೆ ಬಂದಿಲ್ಲದಿದ್ದರೂ, ಸಮಸ್ಯೆ ಪರಿಹರಿಸಲಾಗಿದೆ ಎಂಬ ಸಂದೇಶಗಳು ಬರುತ್ತಿವೆ ಎಂಬ ದೂರುಗಳು ಬಂದಿವೆ ಎಂದು ಒಕ್ಕೂಟ ತಿಳಿಸಿದೆ.

ECINet ಕಾಲ್‌ಬ್ಯಾಕ್‌ ವ್ಯವಸ್ಥೆಯಲ್ಲಿ ಉಂಟಾಗಿರುವ ಲೋಪಗಳ ಬಗ್ಗೆ ತನಿಖೆ ನಡೆಸಬೇಕು. ಮತದಾರರಿಗೆ ಕರೆ ಮಾಡದೆ ಸಮಸ್ಯೆ ಪರಿಹರಿಸಲಾಗಿದೆ ಎಂದು ದಾಖಲಿಸಿರುವ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು KRMO ಒತ್ತಾಯಿಸಿದೆ.

ಆಗಸ್ಟ್‌ 5ರಂದು ಕರಡು ಮತದಾರರ ಪಟ್ಟಿಗಳನ್ನು ಪ್ರಕಟಿಸುವ ಮೊದಲು ಅಗತ್ಯವಿರುವ ಎಲ್ಲಾ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು KRMO ಮನವಿ ಮಾಡಿದೆ. ಅಲ್ಲದೆ, ಈ ವಿಷಯಗಳ ಕುರಿತು ಚರ್ಚಿಸಲು ಒಕ್ಕೂಟದ ಪ್ರತಿನಿಧಿಗಳಿಗೆ ಮುಖ್ಯ ಚುನಾವಣಾ ಅಧಿಕಾರಿಯೊಂದಿಗೆ ಸಭೆ ನಡೆಸಲು ಅವಕಾಶ ನೀಡಬೇಕು ಎಂದೂ ಕೋರಿದೆ.

ಮನವಿ ಸಲ್ಲಿಸಿದ ನಿಯೋಗದಲ್ಲಿ KRMO ಸಂಚಾಲಕರಾದ ಯಹ್ಯಾ ದಾಮೂದಿ, ಹಾರಿಸ್‌ ಸಿದ್ದೀಕಿ, ಸುಹೇಲ್‌ ಅಹ್ಮದ್‌ ಮರೂರ್‌ ಮತ್ತು ತನ್ವೀರ್‌ ಅಹ್ಮದ್‌ ಹಾಗು ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News