×
Ad

ಎಸ್‍ಐಆರ್ | ಚುನಾವಣಾ ಆಯೋಗವು ಸಂಪುಟದ ನಿರ್ಣಯಗಳಿಗೆ ಪ್ರತಿಕ್ರಿಯಿಸಲಿ: ಪ್ರಿಯಾಂಕ್ ಖರ್ಗೆ

Update: 2026-06-30 20:02 IST

ಬೆಂಗಳೂರು : ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ಎಸ್‍ಐಆರ್‌ ನ ಪಾರದರ್ಶಕತೆ ಇಲ್ಲದಿರುವುದು, ಅನಿಯಂತ್ರಿತತೆ ಮತ್ತು ಸಂಭಾವ್ಯ ಮತದಾನದ ಹಕ್ಕು ವಂಚನೆಯ ಬಗ್ಗೆ ರಾಜ್ಯ ಸಂಪುಟವು ಕೆಲವು ನಿರ್ಣಯಗಳನ್ನು ಅಂಗೀಕರಿಸಿ, ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಿದೆ. ಈ ನಿರ್ಣಯಗಳಿಗೆ ಆಯೋಗವು ಪ್ರತಿಕ್ರಿಯೆ ನೀಡಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

ಮಂಗಳವಾರ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯ ಸಚಿವ ಸಂಪುಟವು ಮತದಾರರ ಪಟ್ಟಿಗಳ ಪಾರದರ್ಶಕ ಮತ್ತು ಪುರಾವೆ ಆಧಾರಿತ ಪರಿಷ್ಕರಣೆಯನ್ನು ಬೆಂಬಲಿಸುತ್ತದೆ. ಆದರೆ ಕರ್ನಾಟಕದಲ್ಲಿ ಎಸ್‍ಐಆರ್ ಅನುಷ್ಠಾನಗೊಳಿಸುವ ಮೊದಲು, ಚುನಾವಣಾ ಆಯೋಗವು ಕೆಲವು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವ ಸಂಪುಟವು ನಿರ್ಣಯಿಸಿದೆ ಎಂದಿದ್ದಾರೆ.

ಎಸ್‍ಐಆರ್ ಪ್ರಕ್ರಿಯೆಯ ಕಾನೂನು ಆಧಾರ, ಹೆಸರು ತೆಗೆದುಹಾಕುವ ಮಾನದಂಡಗಳು, ಉಸ್ತುವಾರಿ ರಚನೆ, ಸಾಫ್ಟ್‌ ವೇರ್ ವ್ಯವಸ್ಥೆಗಳು ಮತ್ತು ಸುರಕ್ಷತಾ ಕ್ರಮಗಳು ಸೇರಿದಂತೆ ಸಂಪೂರ್ಣ ಪ್ರಕ್ರಿಯೆಯ ಸ್ವತಂತ್ರ ಪರಿಶೀಲನೆಯನ್ನು ನಡೆಸಬೇಕು.ಬಿಎಲ್‍ಒಗಳು ಮತ್ತು ಆಡಳಿತ ಯಾಂತ್ರಿಕತೆಯ ಮೇಲಿನ ಅನಗತ್ಯ ಒತ್ತಡವನ್ನು ತಪ್ಪಿಸಲು, ಎನ್ಯೂಮರೇಶನ್(ಗಣತಿ) ನಮೂನೆಗಳನ್ನು ಸಲ್ಲಿಸುವ ಕಾಲಾವಧಿಯನ್ನು ಕನಿಷ್ಠ ಮೂರು ತಿಂಗಳವರೆಗೆ ವಿಸ್ತರಿಸಬೇಕು ಎಂದು ಸಂಪುಟವು ನಿರ್ಣಯ ಮಂಡಿಸಿದೆ.

ತಾರ್ಕಿಕ ವ್ಯತ್ಯಾಸಗಳು, ಆಲ್ಗಾರಿದಮ್‍ಗಳು/ಸಾಫ್ಟ್‌ ವೇರ್ ಲಾಜಿಕ್, ಎಸ್‍ಒಪಿಗಳು, ಜವಾಬ್ದಾರಿಯುತ ಅಧಿಕಾರಿಗಳು ಮತ್ತು ಅಗತ್ಯ ದಾಖಲೆಗಳು ಸೇರಿದಂತೆ ಎಲ್ಲ ವ್ಯತ್ಯಾಸಗಳ ಮಾನದಂಡಗಳನ್ನು ವಿವರಿಸುವ ವಿವರವಾದ ಕೈಪಿಡಿಯನ್ನು ಪ್ರಕಟಿಸಬೇಕು. ಬಿಎಲ್‍ಒಗಳಿಂದ ಪೂರ್ವ ಕ್ಷೇತ್ರ ಪರಿಶೀಲನೆ ನಡೆಸದೆ ಯಾವುದೇ ಮತದಾರರ ಅರ್ಹತೆಯನ್ನು ಪ್ರಶ್ನಿಸಬಾರದು ಅಥವಾ ನೋಟಿಸ್ ನೀಡಬಾರದು. ಅಲ್ಲದೆ, ಸಣ್ಣಪುಟ್ಟ ಕಾಗುಣಿತ, ಲಿಪ್ಯಂತರ ಅಥವಾ ಕ್ಲಾರಿಕಲ್ ದೋಷಗಳನ್ನು ಆಕ್ಷೇಪಣೆಗೆ ಆಧಾರವಾಗಿ ಪರಿಗಣಿಸಬಾರದು ಎಂದು ಸಚಿವ ಸಂಪುಟ ನಿರ್ಧರಿಸಿದೆ.

ಯಾವುದೇ ಹಾಲಿ ಮತದಾರರನ್ನು ಮುನ್ಸೂಚನೆ ಇಲ್ಲದೆ, ನಿಷ್ಪಕ್ಷಪಾತ ಅಧಿಕಾರಿಯ ಮುಂದೆ ವಿಚಾರಣೆಗೆ ಅವಕಾಶ ನೀಡದೆ ಮತ್ತು ಲಿಖಿತ ಆದೇಶವಿಲ್ಲದೆ ಮತದಾರರ ಪಟ್ಟಿಯಿಂದ ತೆಗೆದುಹಾಕಬಾರದು. ಅಂಗೀಕಾರಾರ್ಹ ದಾಖಲೆಗಳ ಸಂಪೂರ್ಣ ಪಟ್ಟಿಯನ್ನು ಸ್ಪಷ್ಟಪಡಿಸಬೇಕು ಎಂದು ಸಚಿವ ಸಂಪುಟ ನಿರ್ಧರಿಸಿದೆ.

ಪ್ರಸ್ತುತವಿರುವ ಕರ್ನಾಟಕದ ‘ಕುಟುಂಬ ಐಡಿ'ಯನ್ನು ಅನ್ವಯವಾಗುವ ಕಡೆಗಳಲ್ಲಿ ಮಾನ್ಯ ಮಾಡಬೇಕು, ಸಾಬೀತುಪಡಿಸುವ ಹೊರೆಯನ್ನು ಸಾಮಾನ್ಯ ನಾಗರಿಕರ ಮೇಲೆ ಅನಗತ್ಯವಾಗಿ ಹೇರಬಾರದು. ಮಾನ್ಯವಾದ ಫಾರಂ-6 ಅರ್ಜಿಗಳನ್ನು ಫಾರಂ-7 ಆಕ್ಷೇಪಣೆಗಳೊಂದಿಗೆ ಪ್ರಕ್ರಿಯೆಗೊಳಿಸಬೇಕು. ಸಾಮೂಹಿಕವಾಗಿ ಹೆಸರುಗಳನ್ನು ತೆಗೆದುಹಾಕಲು ಕಾರಣವಾಗುವ ಸಾರಾಸಗಟು ಆಕ್ಷೇಪಣೆಗಳನ್ನು ತಡೆಯಬೇಕು ಎಂದು ಸಚಿವ ಸಂಪುಟ ಅಂಗೀಕಾರ ಮಾಡಿದೆ.

ನೋಟಿಸ್‍ಗಳು, ಸೇರ್ಪಡೆಗಳು, ತೆಗೆದುಹಾಕುವಿಕೆಗಳು ಮತ್ತು ಆದೇಶಗಳಿಗೆ ಸಂಬಂಧಿಸಿದ ಯಂತ್ರ-ಓದಬಲ್ಲ ದೈನಂದಿನ ದತ್ತಾಂಶವನ್ನು ಸಾರ್ವಜನಿಕ ಡೊಮೇನ್‍ನಲ್ಲಿ ಲಭ್ಯವಾಗುವಂತೆ ಮಾಡಬೇಕು. ಯಾವುದೇ ಅಪಾರದರ್ಶಕ ಎಐ ಪರಿಕರಗಳನ್ನು ಬಳಸಬಾರದು. ದತ್ತಾಂಶ ನಮೂದು, ಡಿಜಿಟಲೀಕರಣ, ಮ್ಯಾಪಿಂಗ್ ಮತ್ತು ಪರಿಶೀಲನೆಗಾಗಿ ಬಳಸುವ ಎಲ್ಲ ಸಾಫ್ಟ್‍ವೇರ್‍ಗಳನ್ನು ಬಹಿರಂಗಪಡಿಸಬೇಕು ಮತ್ತು ಅವುಗಳನ್ನು ಸ್ವತಂತ್ರವಾಗಿ ಪರೀಕ್ಷಿಸಬೇಕು ಎಂದು ಸಚಿವ ಸಂಪುಟ ಅಂಗೀಕಾರ ಮಾಡಿದೆ.

ಇಆರ್‌ ಒಗಳು ತಮ್ಮ ಶಾಸನಬದ್ಧ ಕರ್ತವ್ಯಗಳನ್ನು ಸ್ವತಂತ್ರವಾಗಿ ನಿರ್ವಹಿಸಲು ಅವಕಾಶ ನೀಡುವ ಜೊತೆಗೆ, ವಿಶೇಷ ರೋಲ್ ವೀಕ್ಷಕರು ಮತ್ತು ಮೈಕ್ರೋ-ವೀಕ್ಷಕರ ಪಾತ್ರವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕು. ಮಹಿಳೆಯರು, ವಲಸೆ ಕಾರ್ಮಿಕರು, ಕೊಳಚೆ ಪ್ರದೇಶದ ನಿವಾಸಿಗಳು, ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳು, ವಿಧವೆಯರು, ವಿಕಲಚೇತನರು, ಅನಾಥರು ಮತ್ತು ತೃತೀಯ ಲಿಂಗಿಗಳಿಗೆ ವಿಶೇಷ ಸುರಕ್ಷತಾ ಕ್ರಮಗಳನ್ನು ಒದಗಿಸಬೇಕು. ಕರ್ನಾಟಕವು ಮತದಾರರ ಪಟ್ಟಿಗಳ ಪರಿಷ್ಕರಣೆಯನ್ನು ಬೆಂಬಲಿಸುತ್ತದೆಯೇ ಹೊರತು, ಮತದಾರರ ಪಟ್ಟಿಗಳ ಧ್ವಂಸವನ್ನಲ್ಲ ಎಂದು ಸಚಿವ ಸಂಪುಟ ನಿರ್ಣಯಗಳನ್ನು ಅಂಗೀಕರಿಸಿ ಆಯೋಗಕ್ಕೆ ಕಳುಹಿಸಿತ್ತು. ಆದರೆ ಆಯೋಗವು ಇನ್ನೂ ಇದಕ್ಕೆ ಪ್ರತಿಕ್ರಿಯಿಸಿಲ್ಲ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News