ಕುರುಬ ಸಮುದಾಯಕ್ಕೆ ಎಸ್.ಟಿ.ಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರ ನಿಲುವೇನು?: ಕೆ.ಎಸ್.ಈಶ್ವರಪ್ಪ
ಬೆಂಗಳೂರು, ಅ.17: ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡ(ಎಸ್‍ಟಿ) ಮೀಸಲಾತಿ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾನು ಎಸ್.ಟಿ. ಹೋರಾಟಕ್ಕೆ ಬೆಂಬಲ ನೀಡುತ್ತೇನೆ ಅಥವಾ ಇಲ್ಲ ಎಂಬುದನ್ನು ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಬೇಕು ಎಂದು ಒತ್ತಾಯಿಸಿದರು.
ಕುರುಬ ಸಮುದಾಯದ ಬೆಂಬಲ ಇಲ್ಲದಿದ್ದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದವರೆಗೂ ಬರುತ್ತಿರಲಿಲ್ಲ. ಆದರೆ, ಅವರು 2021ರಲ್ಲಿ ನಮ್ಮ ಸಮುದಾಯದ ಸ್ವಾಮೀಜಿಗಳು ಕರೆದಾಗಲೂ ಹೋರಾಟಕ್ಕೆ ಬರಲು ನಿರಾಕರಿಸಿದ್ದರು ಎಂದು ಕೆ.ಎಸ್.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾನು ಕುರುಬ ಮೀಸಲಾತಿ ಹೋರಾಟ ಮಾಡಿಲ್ಲ, ಹೋರಾಟ ಮಾಡಿದ್ದು ಈಶ್ವರಪ್ಪ ಎಂದು ಹೇಳಿದ್ದರು. ಅವರು ಯಾಕೆ ಹೀಗೆ ಹೇಳಿದರು ಎಂಬುದನ್ನು ಅವರೇ ಹೇಳಬೇಕು ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಕುರುಬ ಸಮುದಾಯವು ತೀರಾ ಬಡ ಸಮುದಾಯವಾಗಿದ್ದು, ಕುಲ ಶಾಸ್ತ್ರೀಯ ಅಧ್ಯಯನವೂ ಇದನ್ನೇ ದೃಢಪಡಿಸಿದೆ. ಸಮುದಾಯಕ್ಕೆ ಎಸ್.ಟಿ. ಮೀಸಲಾತಿ ನೀಡುವಂತೆ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಹಿಂದೆ ದೊಡ್ಡ ಹೋರಾಟ ಮಾಡಲಾಗಿತ್ತು. ಈ ಹೋರಾಟದ ಫಲವಾಗಿ ಅಂದಿನ ಬಸವರಾಜ್ ಬೊಮ್ಮಾಯಿ ಸರಕಾರ ಮತ್ತು ಈಗಿನ ಸಿದ್ದರಾಮಯ್ಯ ಸರಕಾರವು ಈ ಶಿಫಾರಸ್ಸನ್ನು ಕೇಂದ್ರಕ್ಕೆ ಕಳುಹಿಸಿವೆ. ಈಗ ಕೇಂದ್ರ ಸರಕಾರ ಎಸ್.ಟಿ. ಪಟ್ಟಿಗೆ ಸೇರಿಸಬೇಕೆಂದು ನಾವು ಒತ್ತಾಯಿಸಿದ್ದೇವೆ ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದರು.
ನಮ್ಮ ಬೇಡಿಕೆ ಹೊಸದೇನಲ್ಲ. ಬಿಟ್ಟು ಹೋಗಿರುವ ನಮ್ಮ ಸಮುದಾಯವನ್ನು ಎಸ್.ಟಿ.ಗೆ ಸೇರಿಸಿ ಅನ್ನುವುದು ನಮ್ಮ ಮನವಿ. ದಿಲ್ಲಿಯಲ್ಲಿ ನಮ್ಮ ಸ್ವಾಮೀಜಿಗಳ ಜೊತೆ ತೆರಳಿ ಕೇಂದ್ರ ಸಚಿವರಿಗೂ ಮನವಿ ಮಾಡಿದ್ದೆವು. ಈಗಲೂ ಅದೇ ಮನವಿ ಮಾಡುತ್ತೇವೆ ಎಂದು ಕೆ.ಎಸ್.ಈಶ್ವರಪ್ಪ ಪುನರುಚ್ಚರಿಸಿದರು.
ಮಾಜಿ ಸಚಿವ ಎಚ್.ವಿಶ್ವನಾಥ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕುರುಬರಿಗೆ ಈಗಾಗಲೇ ಮೀಸಲಾತಿ ದೊರೆಯುತ್ತಿದೆ. ಆದರೆ, ಇದಕ್ಕೆ ಮಿತಿಯನ್ನು (ನಿರ್ಬಂಧವನ್ನು) ಹಾಕಲಾಗಿದೆ. ನಾವು ಈ ಮಿತಿಯನ್ನು ತೆಗೆದು, ಮೀಸಲಾತಿಯನ್ನು ರಾಜ್ಯಾದ್ಯಂತ ವಿಸ್ತರಿಸಲು ಮನವಿ ಮಾಡುತ್ತಿದ್ದೇವೆ. ನಮ್ಮ ಸಮುದಾಯದ ಹಿಂದಿನ ಸ್ಥಿತಿಗತಿಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದರು.
ಮೀಸಲಾತಿಯು ದೇಶ ಹಾಗೂ ರಾಜ್ಯದಲ್ಲಿ ದೊಡ್ಡ ಸಮಸ್ಯೆಯ ರೂಪ ತಾಳಿದ್ದು, ಪ್ರಸ್ತುತ ಎಲ್ಲರೂ ಮೀಸಲಾತಿಯನ್ನು ಕೇಳುವಂತಹ ಸ್ಥಿತಿ ಎದುರಾಗಿದೆ. ಕುರುಬ ಸಮುದಾಯವನ್ನು ಎಸ್.ಟಿ.ಗೆ ಸೇರಿಸುವ ಬೇಡಿಕೆಯ ಬಗ್ಗೆ ಕೇಂದ್ರ ಸರಕಾರ ಗಮನ ಹರಿಸಬೇಕು. ನಮ್ಮ ಹಕ್ಕು ಪಡೆಯಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಎಚ್.ವಿಶ್ವನಾಥ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕುರುಬ ಸಮುದಾಯದ ಮುಖಂಡರಾದ ಮುಕುಡಪ್ಪ, ಕಾಂತೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅ.24ರ ಸಭೆಯಲ್ಲಿ ಹೋರಾಟದ ನಿರ್ಧಾರ: ‘ಕುರುಬ ಸಮುದಾಯದ ಎಸ್.ಟಿ. ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಮುಂದಿನ ನಿರ್ಧಾರದ ಕುರಿತು ಚರ್ಚಿಸಲು ಅ.24ರಂದು ವಿಜಯಪುರದಲ್ಲಿ ಕುರುಬ ಸಮುದಾಯದ ಸಭೆಯನ್ನು ನಡೆಸಲಾಗುವುದು. ಸಮುದಾಯದ ಪ್ರಮುಖರು ಭಾಗವಹಿಸಿ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಲಿದ್ದೇವೆ’ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.