ನಮಗೆ ಪರಿಷತ್ ಚುನಾವಣೆ ಮುಖ್ಯವಲ್ಲ, ನಮ್ಮ ಗುರಿ 2028ರ ವಿಧಾನಸಭೆ ಚುನಾವಣೆ : ಎಚ್.ಡಿ. ರೇವಣ್ಣ
"ಶಾಸಕ ಜಿ.ಟಿ.ದೇವೇಗೌಡರು ಯಾರಿಗೆ ಮತ ಹಾಕಿದ್ದಾರೆ ಎಂಬುದು ನನಗೆ ಗೊತ್ತಿಲ್ಲ"
ಬೆಂಗಳೂರು: ನಮಗೆ ಪರಿಷತ್ ಚುನಾವಣೆ ಮುಖ್ಯವಲ್ಲ, ನಮ್ಮ ಗುರಿ 2028ರ ವಿಧಾನಸಭೆ ಚುನಾವಣೆ ಮೇಲಿದೆ ಎಂದು ಜೆಡಿಎಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೆ ಈ ಪರಿಷತ್ ಚುನಾವಣೆ ಅಷ್ಟೊಂದು ಮುಖ್ಯವಲ್ಲ. ನಮ್ಮ ಗಮನ ಸಂಪೂರ್ಣವಾಗಿ 2028ರ ವಿಧಾನಸಭಾ ಚುನಾವಣೆಯ ಮೇಲಿದೆ. ಆ ಚುನಾವಣೆಯಲ್ಲಿ ಏನಾಗುತ್ತದೆ ಎಂಬುದನ್ನು ಆಗ ನೋಡೋಣ ಎಂದು ಹೇಳಿದರು.
ಪಕ್ಷದ ಶಾಸಕರ ಅಡ್ಡಮತದಾನದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗೇ ಮತ ಹಾಕಿದ್ದೇನೆ. ಆದರೆ ಶಾಸಕ ಜಿ.ಟಿ. ದೇವೇಗೌಡರು ಯಾರಿಗೆ ಮತ ಹಾಕಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಬಿಜೆಪಿಯವರು ಒಳಗೆ ಏನು ತಂತ್ರ ರೂಪಿಸಿದ್ದಾರೆ ಎನ್ನುವುದೂ ತಿಳಿದಿಲ್ಲ. ಸದ್ಯಕ್ಕೆ ಈ ಚುನಾವಣೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.
ಜೆಡಿಎಸ್ ಭವಿಷ್ಯದ ರಾಜಕೀಯ ತಂತ್ರದ ಕುರಿತು ಮಾತನಾಡಿದ ರೇವಣ್ಣ, ಕುಮಾರಸ್ವಾಮಿ ಅವರು ಪಕ್ಷದ ಸಿದ್ಧಾಂತದ ಆಧಾರದ ಮೇಲೆ ಶಾಸಕರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಂದ ಇಂದಿನ ರಾಜಕಾರಣಿಗಳು ಸಾಕಷ್ಟು ಪಾಠ ಕಲಿಯಬೇಕಿದೆ. ಪಕ್ಷದ ಇಂದಿನ ಸ್ಥಿತಿಗತಿಗಳನ್ನು ನಾವು ವಾಸ್ತವಿಕವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ರಾಷ್ಟ್ರೀಯ ರಾಜಕೀಯದ ಕುರಿತು ಮಾತನಾಡಿದ ಅವರು, ಬಿಜೆಪಿಯೊಂದಿಗೆ ಮೈತ್ರಿ ಕುರಿತ ತೀರ್ಮಾನವನ್ನು ಪಕ್ಷದ ರಾಷ್ಟ್ರೀಯ ನಾಯಕತ್ವವೇ ಕೈಗೊಂಡಿದೆ. ಆದರೆ ದೇವೇಗೌಡರು ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೂ ಹೋದವರಲ್ಲ. ಅವರು ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿದ್ದು, ಪ್ರಧಾನಮಂತ್ರಿ ಹುದ್ದೆಯನ್ನೂ ತ್ಯಾಗ ಮಾಡಿದ ನಾಯಕ ಎಂದು ಹೇಳಿದರು.