×
Ad

ಅಮಿತ್ ಶಾ–ಕುಮಾರಸ್ವಾಮಿ ಭೇಟಿ: ಸೀಟು ಹಂಚಿಕೆ ಕುರಿತು ಮಾತುಕತೆ

Update: 2024-02-22 12:59 IST

Photo: twitter.com/JanataDal_S

ಬೆಂಗಳೂರು: ಮುಂಬರಲಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಸೀಟು ಹಂಚಿಕೆ ಸೇರಿದಂತೆ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಖುದ್ದು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಗುರುವಾರ ಹೊಸದಿಲ್ಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ರಾಜ್ಯಸಭೆ ಚುನಾವಣೆ ಕಾರ್ಯತಂತ್ರ, ಲೋಕಸಭೆ ಚುನಾವಣೆ ಸಿದ್ಧತೆ, ಬಿಜೆಪಿ-ಜೆಡಿಎಸ್ ನಡುವೆ ಕ್ಷೇತ್ರಗಳ ಹಂಚಿಕೆ ಸೇರಿದಂತೆ ಇನ್ನಿತರ ವಿಚಾರಗಳನ್ನು ಸಮಾಲೋಚನೆ ನಡೆಸಿದ್ದಾರೆಂದು ಗೊತ್ತಾಗಿದೆ.

ನಿನ್ನೆ(ಫೆ.21) ಸಂಜೆಯೆ ಹೊಸದಿಲ್ಲಿಗೆ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರ್ ಜತೆ ಪ್ರಯಾಣ ಬೆಳೆಸಿದ್ದ ಕುಮಾರಸ್ವಾಮಿ, ಗುರುವಾರ ಬೆಳಗ್ಗೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿ ಸೋಲಿನ ಬಗ್ಗೆ ಮಾಹಿತಿ ನೀಡಿದ್ದಾರೆ.

ಅಲ್ಲದೆ, ಫೆ.27ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಕುಪೇಂದ್ರರೆಡ್ಡಿ ಗೆಲುವಿನ ರಣತಂತ್ರದ ಬಗ್ಗೆಯೂ ಎಚ್‍ಡಿಕೆ, ಅಮಿತ್ ಶಾಗೆ ವಿವರ ನೀಡಿದರು ಎಂದು ಹೇಳಲಾಗಿದೆ.

ಸೀಟು ಹಂಚಿಕೆ: ಈ ಮಧ್ಯೆ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟು ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದ್ದಾರೆ. ಆದರೆ, ಸೀಟು ಹಂಚಿಕೆ ವಿಚಾರ ಇನ್ನೂ ಅಂತಿಮವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News