2026-27ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಕಟ: 10 ಸಾಧಕರ ಆಯ್ಕೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ರಾಜ್ಯ ಸರಕಾರದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ 2026-27ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುವ ಸಂಬಂಧ ಜಲಸಂಪನ್ಮೂಲ ಇಲಾಖೆಯ ಮಾಜಿ ಕಾರ್ಯದರ್ಶಿ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ಜಿ.ಟಿ. ಚಂದ್ರಶೇಖರಪ್ಪ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ಸ್ವೀಕೃತವಾದ ಒಟ್ಟು 137 ಅರ್ಜಿಗಳನ್ನು ಪರಿಶೀಲಿಸಿ, ಶೈಕ್ಷಣಿಕ, ಸಾಹಿತ್ಯ, ಸಾಂಸ್ಕೃತಿಕ, ವಿಜ್ಞಾನ ಹಾಗೂ ತಂತ್ರಜ್ಞಾನ ಹಾಗೂ ಸಾಮಾಜಿಕ ಸೇವೆ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಪ್ರಶಸ್ತಿ ಪುರಸ್ಕೃತರ ವಿವರ :
► ತೇಜಸ್ವಿ ಕಟ್ಟಿಮನಿ
► ತಿಪ್ಪಣ್ಣ ಮರಿಕುಂಟೆ
► ಆರ್.ಎಂ. ಮುನಿರಾಜು
► ಡಾ.ಚಂದ್ರನಾಯಕ್ ಎಸ್.
► ಜೆ.ಪಿ. ರಾಜು
► ಶಿವನಗೌಡ ಹೊನ್ನನಗೌಡ ಪಾಟೀಲ
► ನಂದಕುಮಾರ ಮಾಲಿ ಪಾಟೀಲ
► ಕೇತಮ್ಮ
► ಬಿ.ಜಿ. ಕೃಷ್ಣಪ್ಪ
► ವೆಂಕಟರಾಮ್
ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯಡಿ ಆಯ್ಕೆಯಾದ ಪ್ರತಿಯೊಬ್ಬ ಸಾಧಕರಿಗೆ 5 ಲಕ್ಷ ನಗದು ಬಹುಮಾನ ಹಾಗೂ 25 ಗ್ರಾಂ ಬಂಗಾರದ ಪದಕ ನೀಡಿ ಗೌರವಿಸಲಾಗುತ್ತದೆ. ಪರಿಶಿಷ್ಟ ಪಂಗಡದ ಜನರ ಏಳಿಗೆಗಾಗಿ ಶ್ರಮಿಸಿದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ಗೌರವಿಸುವುದು ಈ ಪ್ರಶಸ್ತಿಯ ಪ್ರಮುಖ ಉದ್ದೇಶವಾಗಿದೆ.