ಮೇಕೆದಾಟು ಡ್ಯಾಮ್‌ನಿಂದ ತಮಿಳುನಾಡು ರೈತರಿಗೂ ಅನುಕೂಲ: ರಾಮಲಿಂಗಾ ರೆಡ್ಡಿ
photo: screengrab/x.com/NewsArenaIndia
ಬೆಂಗಳೂರು: ಮೇಕೆದಾಟು ಯೋಜನೆಯು ಹೊಸ ಡ್ಯಾಮ್ ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಕೇವಲ ನೀರು ಸಂಗ್ರಹಣೆಗೆ ಮಾತ್ರ ಸೀಮಿತವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆಯಿಂದ ಬೆಂಗಳೂರಿಗೆ 4.75 ಟಿಎಂಸಿ ಕುಡಿಯುವ ನೀರು ದೊರೆಯಲಿದ್ದು, 400 ಮೆಗಾವಾಟ್ ವಿದ್ಯುತ್ ಉತ್ಪಾದನೆಯೂ ಸಾಧ್ಯವಾಗಲಿದೆ. ಇದರಿಂದ ವ್ಯವಸಾಯಕ್ಕೆ ನೀರು ಸಿಗುವುದಿಲ್ಲ. ನಾಲ್ಕೈದು ವರ್ಷಗಳಿಗೊಮ್ಮೆ ಮಳೆ ಕೊರತೆ ಉಂಟಾಗುತ್ತದೆ. ತಮಿಳುನಾಡಿಗೆ ಕೇಂದ್ರದ ನಿಯಮಗಳ ಪ್ರಕಾರ ತಿಂಗಳಿಗೆ ಒಮ್ಮೆ ನೀರು ಬಿಡುಗಡೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಜೂನ್ ತಿಂಗಳಲ್ಲಿ 19 ಟಿಎಂಸಿ ನೀರು ಬಿಡುಗಡೆ ಮಾಡಬೇಕೆಂಬ ತೀರ್ಮಾನ ಈಗಾಗಲೇ ಆಗಿದೆ. ನಮ್ಮ ಬಳಿ 16 ಟಿಎಂಸಿ ನೀರು ಇದ್ದು, ಕುಡಿಯುವ ನೀರಿನ ಅಗತ್ಯವನ್ನು ಹೊರತುಪಡಿಸಿದರೆ ಕೇವಲ 3 ಟಿಎಂಸಿ ನೀರು ಮಾತ್ರ ಲಭ್ಯವಿದೆ. ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಮರುಪರಿಶೀಲನಾ ಅರ್ಜಿಯನ್ನೂ ತಿರಸ್ಕರಿಸಿದ್ದು, ಎರಡು ಬಾರಿ ತಮಿಳುನಾಡಿನ ಅರ್ಜಿಗಳು ತಿರಸ್ಕೃತವಾಗಿವೆ ಎಂದು ಹೇಳಿದರು.
ಆದರೂ ಅಲ್ಲಿನ ಮುಖ್ಯಮಂತ್ರಿ ಹೋರಾಟ ನಡೆಸಬೇಕೆಂದು ಹೇಳುತ್ತಿದ್ದಾರೆ. ನಮಗೆ ಹಂಚಿಕೆಯಾಗಿರುವ ನೀರು ನಮಗೆ ಸಾಕಾಗಿದೆ. ಮೇಕೆದಾಟುವಿನಲ್ಲಿ ಡ್ಯಾಮ್ ನಿರ್ಮಾಣವಾಗಿದ್ದರೆ ಈಗ ಅವರಿಗೆ ನೀರು ಬಿಡುಗಡೆ ಮಾಡಲು ಸಾಧ್ಯವಾಗುತ್ತಿತ್ತು. ಇದರಿಂದ ತಮಿಳುನಾಡಿನ ರೈತರೂ ಪ್ರಯೋಜನ ಪಡೆಯುತ್ತಿದ್ದರು. ಅವರು ವಿರೋಧಿಸಿದರೆ ಅವರ ರೈತರಿಗೆ ತೊಂದರೆಯಾಗಲಿದೆ ಎಂದು ಹೇಳಿದರು.
ಮೇಕೆದಾಟು ಯೋಜನೆಯ ಡಿಪಿಆರ್ ಈಗಾಗಲೇ ಸಿದ್ಧವಾಗಿದೆ. ತಮಿಳುನಾಡಿಗೆ ಹಂಚಿಕೆಯಾಗಿರುವ ನೀರಿನಲ್ಲಿ ನಮಗೆ ಒಂದು ಹನಿ ಹೆಚ್ಚಾಗಿ ಬೇಡ. ಜೂನ್ ತಿಂಗಳಲ್ಲಿ 9.19 ಟಿಎಂಸಿ ನೀರು ಬಿಡುಗಡೆ ಮಾಡಬೇಕಿದೆ. ಇದುವರೆಗೆ 2 ಟಿಎಂಸಿ ನೀರು ಬಿಡುಗಡೆ ಮಾಡಿದ್ದೇವೆ. ನಮ್ಮ ಬಳಿ ಕೇವಲ 3 ಟಿಎಂಸಿ ನೀರು ಮಾತ್ರ ಉಳಿದಿದೆ. ಇದು ಜೂನ್ 18ರವರೆಗಿನ ವರದಿ. ಡ್ಯಾಮ್ ನಿರ್ಮಿಸಿ ನೀರು ಸಂಗ್ರಹಿಸಿದರೆ ಅವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ನೆಲ, ಜಲ ಹಾಗೂ ಭಾಷೆಯ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು. ಚುನಾವಣೆ ಮುಗಿದ ಬಳಿಕ ಭಿನ್ನಾಭಿಪ್ರಾಯಗಳನ್ನು ಮರೆತು ನೀರಿನ ವಿಷಯದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಇತ್ತೀಚೆಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮಹದಾಯಿ ಹಾಗೂ ಮೇಕೆದಾಟು ಯೋಜನೆ ಕುರಿತು ಚರ್ಚಿಸಿದ್ದೇವೆ. ತಮಿಳುನಾಡು ಮುಖ್ಯಮಂತ್ರಿ ನಮ್ಮನ್ನೂ ಕರೆಸಿ ಮಾತುಕತೆ ನಡೆಸಲಿ ಎಂದು ತಿಳಿಸಿದ್ದೇವೆ. ನೀರು ಸಂಗ್ರಹವಾದರೆ ತಮಿಳುನಾಡಿನ ರೈತರಿಗೆ ಸಹ ಉಪಯೋಗವಾಗುತ್ತದೆ. ನ್ಯಾಯಾಲಯದ ಮೊರೆ ಹೋಗುವುದಕ್ಕಿಂತ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.
ಕೃಷ್ಣಾ ನೀರಿನ ವಿವಾದ 13-14 ವರ್ಷಗಳಿಂದ ಬಗೆಹರಿದಿಲ್ಲ. ಅದಕ್ಕೂ ಮಾತುಕತೆಯ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು. ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ. ಆದರೆ ಕುಡಿಯುವ ನೀರಿಗೆ ಮುಂದಿನ ಎರಡು ತಿಂಗಳು ಸಮಸ್ಯೆ ಇಲ್ಲ. ಕೆಆರ್‌ಎಸ್‌ನಲ್ಲಿ 11 ಟಿಎಂಸಿ ಹಾಗೂ ಕಬಿನಿಯಲ್ಲೂ ಸಾಕಷ್ಟು ನೀರು ಲಭ್ಯವಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.