ಬೆಂಗಳೂರು: ಹೊಸದಿಲ್ಲಿಯಲ್ಲಿ ನಡೆದ ಎರಡು ದಿನಗಳ ಸೆಮಿಕಾನ್ ಇಂಡಿಯಾ-2026 ಸಮಾವೇಶದಲ್ಲಿ ಉನ್ನತ ಮಟ್ಟದ ನಿಯೋಗದೊಂದಿಗೆ ಪಾಲ್ಗೊಂಡಿದ್ದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರು, ನೆದರ್ಲೆಂಡ್ಸ್ ಮೂಲದ ಎಎಸ್‍ಎಂಎಲ್ ಸೆಮಿಕಂಡಕ್ಟರ್ಸ್ ಮತ್ತು ನೆಕ್ಸ್ಪೀರಿಯಾ, ಅಮೆರಿಕದ 3ಡಿ ಗ್ಲಾಸ್ ಸೊಲ್ಯೂಷನ್ಸ್, ಎಟಿ ಆಂಡ್ ಎಸ್, ಜಪಾನಿನ ಫ್ಯೂಜಿ ಫಿಲಂ ಮತ್ತು ಲ್ಯಾಮ್ ರೀಸರ್ಚ್ ಸೇರಿದಂತೆ ಹಲವು ಕಂಪೆನಿಗಳೊಂದಿಗೆ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮತ್ತು ತಯಾರಿಕಾ ಸ್ಥಾವರ ಆರಂಭಿಸುವಂತೆ ಮಾತುಕತೆ ನಡೆಸಿದ್ದಾರೆ.

ಶುಕ್ರವಾರ ಈ ಸಂಬಂಧ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಉಳಿದಂತೆ ಅಪ್ಲೈಡ್ ಮೆಟೀರಿಯಲ್ಸ್, ಎಸ್‍ಎಫ್‍ಎಎಲ್, ಗೋದಾವರಿ ಕಮಾಡಿಟೀಸ್, ಟೋಕಿಯೋ ಎಲೆಕ್ಟ್ರಾನ್, ಸಿರ್ಮಾ ಎಸ್.ಜಿ.ಎಸ್ ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಲ್ಯಾಮ್ ರೀಸರ್ಚ್ ಕಂಪೆನಿಯು ರಾಜ್ಯದಲ್ಲಿ ತನ್ನ ಮಹತ್ವಾಕಾಂಕ್ಷಿ ಯೋಜನೆಗೆ 10ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ ಈಗಾಗಲೇ ಘೋಷಿಸಿದೆ. ಸೆಮೆಕಂಡಕ್ಟರ್ ಕ್ಷೇತ್ರದ ಈ ಯೋಜನೆಯನ್ನು ಆದಷ್ಟು ತ್ವರಿತವಾಗಿ ಅನುಷ್ಠಾನಕ್ಕೆ ತರಲು ಅಗತ್ಯವಿರುವ ಕ್ರಮಗಳೇನೇನು ಎನ್ನುವುದನ್ನು ಚರ್ಚಿಸಲಾಗಿದೆ. ಜತೆಗೆ ಅಪ್ಲೈಡ್ ಮೆಟೀರಿಯಲ್ಸ್ ಕಂಪೆನಿ ಮಾಡುತ್ತಿರುವ ಹೂಡಿಕೆಯಿಂದ ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ತಯಾರಿಕೆ ಎರಡೂ ಸಾಕಾರಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಎಟಿ ಆಂಡ್ ಎಸ್ ಕಂಪೆನಿ 25 ವರ್ಷಗಳಿಂದಲೂ ನಂಜನಗೂಡಿನಲ್ಲಿ ಗುಣಮಟ್ಟದ ಪ್ರಿಂಟೆಡ್ ಸಕ್ರ್ಯೂಟ್ ಬೋರ್ಡ್ ತಯಾರಿಸುತ್ತಿದೆ. ಇಲ್ಲಿನ ಸ್ಥಾವರವನ್ನು ವಿಸ್ತರಿಸುವಂತೆ ಮತ್ತು ಹೆಚ್ಚಿನ ಹೂಡಿಕೆ ಮಾಡುವಂತೆ ಹೇಳಲಾಗಿದೆ. ಸೆಮಿಕಂಡಕ್ಟರ್, ವಿದ್ಯುನ್ಮಾನ, ಆರೋಗ್ಯ ಸೇವೆ, ಇಮೇಜಿಂಗ್ ವಲಯಗಳಲ್ಲಿ ಹೆಸರಾಗಿರುವ ಫ್ಯೂಜಿ ಫಿಲಂ ಕಂಪೆನಿಗೂ ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪಿಸುವಂತೆ ಮತ್ತು ಬೆಂಗಳೂರಿನಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ ಘಟಕ ನಿರ್ಮಿಸುವಂತೆ ಮನವಿ ಮಾಡಿಕೊಂಡಿದ್ದೇವೆ ಎಂದು ಪಾಟೀಲ್ ನುಡಿದಿದ್ದಾರೆ.

ವಿದ್ಯುನ್ಮಾನ ವಿನ್ಯಾಸ ಮತ್ತು ಪಿಸಿಬಿ ಜೋಡಣೆಗೆ ಹೆಸರಾಗಿರುವ ಸಿರ್ಮಾ ಎಸ್.ಜಿ.ಎಸ್ ಕಂಪೆನಿ ಇತ್ತೀಚೆಗಷ್ಟೇ ಬೊಮ್ಮಸಂದ್ರದಲ್ಲಿ ತನ್ನ ತಯಾರಿಕಾ ಘಟಕದ ಕಾರ್ಯಾರಂಭ ಮಾಡಿದೆ. ಇದರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವಂತೆ ಕೋರಿದ್ದೇವೆ. ಇದೇ ರೀತಿಯಲ್ಲಿ ಉಳಿದ ಕಂಪನಿಗಳಿಗೂ ಕರ್ನಾಟಕದಲ್ಲಿ ತಯಾರಿಕಾ ಸ್ಥಾವರಗಳನ್ನು ಅಭಿವೃದ್ಧಿ ಪಡಿಸುವಂತೆ ಗಮನಸೆಳೆಯಲಾಗಿದೆ ಎಂದು ಪಾಟೀಲ್ ಹೇಳಿದ್ದಾರೆ.

ಮಾತುಕತೆಯಲ್ಲಿ ಎಎಸ್‍ಎಂಎಲ್ ಕಂಪೆನಿಯ ಉನ್ನತ ಮಟ್ಟದ ಪ್ರತಿನಿಧಿಗಳಾದ ಜೂಸ್ಟ್ ಸ್ಟೀನೆನ್ ಮತ್ತು ಹರ್ಮನ್ ಬೂಮ್, ನೆಕ್ಸ್ಪೀರಿಯಾದ ಹಿರಿಯ ನಿರ್ದೇಶಕ ಹ್ಯಾನ್ಸ್ ವ್ಯಾನ್ ರೇಮ್ಡಂಕ್ ಮತ್ತು ಅಕಿಂ ಕೆಂಪ್, 3ಡಿ ಗ್ಲಾಸ್‍ನ ಸಿಇಒ ಬಾಬು ಮಾಂಡವ ಮತ್ತು ನಿರ್ದೇಶಕ ಕೆ.ಕೃಷ್ಣಮೂರ್ತಿ, ಎಟಿ ಆಂಡ್ ಎಸ್ ಕಂಪನಿಯ ಸೈಮನ್ ಸೆಬಾನ್ಜ್ ಮತ್ತು ಆರ್.ಎಸ್.ಸಿಂಹ, ಲ್ಯಾಮ್ ರೀಸರ್ಚ್ ಪರವಾಗಿ ಸಿಒಒ ಶೇಷ ವರದರಾಜನ್ ಮತ್ತು ರಂಗೇಶ್ ರಾಘವನ್, ಫ್ಯೂಜಿ ಫಿಲಂ ಪರವಾಗಿ ವ್ಯವಸ್ಥಾಪಕ ನಿರ್ದೇಶಕ ಕೋಜಿ ವಾಡ ಮತ್ತು ಅಭಿಶೇಖರ್ ಸಿಂಗ್ ಮಾತುಕತೆಯಲ್ಲಿ ಭಾಗವಹಿಸಿದ್ದರು. ಸಚಿವರೊಂದಿಗಿ ನಿಯೋಗದಲ್ಲಿ ಕೈಗಾರಿಕಾ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಖುಷ್ಬೂ ಗೋಯೆಲ್ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor