ಯುಕೆಪಿ-3 ಭೂಸ್ವಾಧೀನ ಪ್ರಕ್ರಿಯೆ: ಮುಳುಗಡೆ ಸಂತ್ರಸ್ತರಿಗೆ ಆದ್ಯತೆಯ ಪರಿಹಾರ: ಸಚಿವ ಎನ್.ಚಲುವರಾಯಸ್ವಾಮಿ
ಬೆಂಗಳೂರು : ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಹಂತ-1 ಮತ್ತು 2ರ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಆದ್ಯತೆಯ ಮೇರೆಗೆ ಪರಿಹಾರ ನೀಡಬೇಕು ಹಾಗೂ ಹಂತ-3ರ ವ್ಯಾಪ್ತಿಯಲ್ಲಿ ನಿಯಮಾನುಸಾರ ಭೂಸ್ವಾಧೀನ ಕೈಗೊಳ್ಳಬೇಕೆಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ 184 ಗ್ರಾಮಗಳ ಜಮೀನು ಸ್ವಾಧೀನ ಕುರಿತು ಸಭೆ ನಡೆಸಿದ ಅವರು, ಅಧಿಕಾರಿಗಳು ಮನಸೋಇಚ್ಛೆ ಕೆಲಸ ಮಾಡದೆ ಕಡ್ಡಾಯವಾಗಿ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಯೋಜನೆ ವ್ಯಾಪ್ತಿಯ ಸಚಿವರು ಹಾಗೂ ಶಾಸಕರು ಭೂಸ್ವಾಧೀನದ ಹಂತಗಳ ಕುರಿತು ಪತ್ರದ ಮೂಲಕವೂ ಸಲಹೆಗಳನ್ನು ನೀಡಬಹುದು ಎಂದು ತಿಳಿಸಿದರು.
ಕಳೆದ ವರ್ಷ ಹೊರಡಿಸಲಾದ ಸರ್ಕಾರಿ ಆದೇಶದನ್ವಯ ಪ್ರತಿ ಎಕರೆ ಭೂಮಿಗೆ ದರ ನಿಗದಿಯಾಗಿದ್ದು, ಕಟ್ಟಡಗಳ ಪರಿಹಾರ ದರ ನಿಗದಿಯಲ್ಲಿ ಗೊಂದಲಗಳಿದ್ದರೆ ಅಧಿಕಾರಿಗಳು ಇಲಾಖೆಗೆ ಪತ್ರ ಬರೆದು ಸ್ಪಷ್ಟತೆ ಪಡೆಯಬೇಕು. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ಮಾರ್ಗಸೂಚಿ ಪ್ರಕಟಿಸಲಾಗುವುದು. ಪುನರ್ವಸತಿ ಕಲ್ಪಿಸಲು ಜಮೀನು ಗುರುತಿಸುವ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದ್ದು, ಪುನರ್ವಸತಿ ಕೇಂದ್ರಗಳಲ್ಲಿ ಕೆಲವರು ಕೋಟ್ಯಂತರ ರೂಪಾಯಿಗಳ ಮಾರಾಟ ಒಪ್ಪಂದ ಮಾಡಿಕೊಂಡಿರುವ ಆರೋಪಗಳ ಕುರಿತು ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಆರ್.ಬಿ.ತಿಮ್ಮಾಪುರ, ವಿಜಯಾನಂದ ಕಾಶಪ್ಪನವರ್, ಲಕ್ಷ್ಮಣ್ ಸವದಿ, ವಿಧಾನ ಪರಿಷತ್ತಿನ ಉಪಸಭಾಪತಿ ಉಮಾಶ್ರೀ, ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ (ಕೆಬಿಜೆಎನ್‍ಎಲ್) ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.