ಮಾಜಿ ಸಂಸದ ಪ್ರತಾಪ್ ಸಿಂಹ ಓರ್ವ ಅಯೋಗ್ಯ, ಮುಠ್ಠಾಳ : ಪ್ರದೀಪ್ ಈಶ್ವರ್ ವಾಗ್ದಾಳಿ
"ದಲಿತ ಸಮುದಾಯ, ನೀಲಿ ಶಾಲಿನ ಬಗ್ಗೆ ಮಾತನಾಡಲು ನೀನು ಯಾರು"
ಪ್ರತಾಪ್ ಸಿಂಹ /ಪ್ರದೀಪ್ ಈಶ್ವರ್
ಬೆಂಗಳೂರು : ಮಾಜಿ ಸಂಸದ ಪ್ರತಾಪ್ ಸಿಂಹ ಓರ್ವ ಅಯೋಗ್ಯ, ಮುಠ್ಠಾಳ ಆಗಿದ್ದು, ದಲಿತ ಸಮುದಾಯ, ನೀಲಿ ಶಾಲಿನ ಬಗ್ಗೆ ಮಾತನಾಡಲು ನೀನು ಯಾರು ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಂಸದ ಪ್ರತಾಪ್ ಸಿಂಹ ನಾಲಾಯಕ್, ಅಯೋಗ್ಯ, ಮುಠ್ಠಾಳ. ಅವನು ಒಬ್ಬ ಸರ್ಕಲ್ ಇನ್ಸ್ ಪೆಕ್ಟರ್ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾನೆ. ಕರ್ತವ್ಯನಿರತ ಪೊಲೀಸ್ ಅಧಿಕಾರಿಯ ವಿರುದ್ಧ ಈ ರೀತಿಯಾಗಿ ಅಸಭ್ಯವಾಗಿ ಮಾತನಾಡಿರುವುದು ಖಂಡನೀಯ. ಸಾರ್ವಜನಿಕವಾಗಿ ಪ್ರಚೋದನಕಾರಿ ಹಾಗೂ ಜವಾಬ್ದಾರಿರಹಿತ ಹೇಳಿಕೆಗಳನ್ನು ನೀಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ದಲಿತ ಸಮುದಾಯ ಹಾಗೂ ನೀಲಿ ಶಾಲಿನ ಬಗ್ಗೆ ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ಖಂಡನೀಯ. ಈ ದೇಶದ ನಿರ್ಮಾಣದಲ್ಲಿ ದಲಿತ ಸಮುದಾಯದ ಪಾತ್ರ ಮಹತ್ತರವಾದದ್ದು, ದಲಿತ ಸಂಘರ್ಷ ಸಮಿತಿ ಅಥವಾ ಸಮುದಾಯದ ಸಂಕೇತಗಳ ಬಗ್ಗೆ ಮಾತನಾಡುವಾಗ ಸಂಯಮ ಇರಬೇಕು. ಧಾರ್ಮಿಕ ಮತ್ತು ಸಮುದಾಯ ಸಂಕೇತಗಳನ್ನು ಮುಂದಿಟ್ಟುಕೊಂಡು ವಿವಾದ ಸೃಷ್ಟಿಸುವುದನ್ನು ನಿಲ್ಲಿಸಬೇಕು. ದಲಿತರ ಭಾವನೆಗಳಿಗೆ ಧಕ್ಕೆ ತಂದಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಸಮುದಾಯದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.