ಕಸ್ತೂರಿ ರಂಗನ್ ವರದಿ | ಜನಜೀವನ ರಕ್ಷಿಸಲು ಸರಕಾರ ಮುಂದಾಳತ್ವ ವಹಿಸಬೇಕು : ವಿಜಯೇಂದ್ರ
ಬೆಂಗಳೂರು : ಕಸ್ತೂರಿರಂಗನ್ ವರದಿ ವಿಚಾರದಲ್ಲಿ ವಿಶೇಷ ಅಧಿವೇಶನ ಕರೆದು ಕೇವಲ ಕೇಂದ್ರ ಸರಕಾರದ ವಿರುದ್ಧ ನಿರ್ಣಯ ಅಂಗೀಕರಿಸಿ ಕೈತೊಳೆದುಕೊಳ್ಳುವುದು ರಾಜ್ಯ ಸರಕಾರದ ಜವಾಬ್ದಾರಿಯಲ್ಲ. ಪಶ್ಚಿಮಘಟ್ಟ ಸಂರಕ್ಷಣೆಯ ಜೊತೆಗೆ ಕಾಡಂಚಿನ ರೈತರು, ಕುಟುಂಬಗಳು ಹಾಗೂ ಜನಜೀವನವನ್ನು ರಕ್ಷಿಸಲು ರಾಜ್ಯ ಸರಕಾರವೇ ಮುಂದಾಳತ್ವ ವಹಿಸಬೇಕು ಎಂದು ಬಿಜೆಪಿ ಸದಸ್ಯ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಸೋಮವಾರ ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಲು ಕರೆದಿರುವ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು, ಪಶ್ಚಿಮಘಟ್ಟ ಉಳಿಯಬೇಕು, ನದಿಗಳು ಉಳಿಯಬೇಕು, ಪರಿಸರವೂ ಉಳಿಯಬೇಕು. ಅದೇ ರೀತಿ ಕಾಡಂಚಿನ ಜನರು, ರೈತರು ಮತ್ತು ಅವರ ಜೀವನೋಪಾಯವೂ ಉಳಿಯಬೇಕು. ಈ ಎರಡರ ನಡುವೆ ಸಮತೋಲನ ಸಾಧಿಸುವುದೇ ಸರಕಾರದ ಜವಾಬ್ದಾರಿ ಎಂದರು.
ನಿರ್ಣಯ ಮಾಡಿ ಕೇಂದ್ರಕ್ಕೆ ಕಳುಹಿಸಿದ ಮಾತ್ರಕ್ಕೆ ಸಮಸ್ಯೆ ಬಗೆಹರಿಯುವುದಿಲ್ಲ. ಎನ್‍ಜಿಟಿ ಮುಂದೆ ಏನಾಗುತ್ತದೆ ಎಂಬುದನ್ನು ನಾವು ಗಮನಿಸಬೇಕು. ನ್ಯಾಯಾಂಗ ಪ್ರಕ್ರಿಯೆಯನ್ನೂ ಎದುರಿಸಬೇಕಾಗಿದೆ. ಹೀಗಾಗಿ ರಾಜ್ಯ ಸರಕಾರವೆ ಸಂಪೂರ್ಣ ಸಿದ್ಧತೆಯೊಂದಿಗೆ ಮುಂದುವರಿಯಬೇಕು ಎಂದು ಅವರು ಒತ್ತಾಯಿಸಿದರು.
ಕಸ್ತೂರಿರಂಗನ್ ವರದಿ ಪ್ರಸ್ತಾವನೆಗೆ ಆಧಾರವಾಗಿರುವ ಉಪಗ್ರಹ ಸಮೀಕ್ಷೆ ಹಲವು ವರ್ಷಗಳ ಹಿಂದಿನದ್ದು. ಅಂದಿನ ಭೂಬಳಕೆ ಮತ್ತು ಇಂದಿನ ವಾಸ್ತವ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೀಗಿರುವಾಗ ಹಳೆಯ ಉಪಗ್ರಹ ಮಾಹಿತಿಯನ್ನೆ ಅಂತಿಮ ಆಧಾರ ಮಾಡುವುದು ಸರಿಯಲ್ಲ ಎಂದು ವಿಜಯೇಂದ್ರ ವಾದಿಸಿದರು.
1476 ಗ್ರಾಮಗಳಿಗೆ ಸರ್ವೆ ನಂಬರ್ ಮಟ್ಟದ ನಕ್ಷೆ: ಕಸ್ತೂರಿರಂಗನ್ ವರದಿ ವ್ಯಾಪ್ತಿಗೆ ಬರುವ 1476 ಗ್ರಾಮಗಳಲ್ಲಿ ಸರ್ವೆ ನಂಬರ್ ಮಟ್ಟದ ಇಎಸ್‍ಎ ನಕ್ಷೆ ಸಿದ್ಧಪಡಿಸಬೇಕು. ಅದನ್ನು ಕನ್ನಡದಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು. ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಭೌತಿಕ ಸಮೀಕ್ಷೆ ನಡೆಸಬೇಕು. ಪ್ರತಿ ಬಾಧಿತ ಗ್ರಾಮದಲ್ಲಿ ವಿಶೇಷ ಗ್ರಾಮಸಭೆ ನಡೆಸಿ ಜನರ ಅಭಿಪ್ರಾಯ ದಾಖಲಿಸಬೇಕು. ಈ ಮಾಹಿತಿಯನ್ನು ರಾಜ್ಯದ ಆಕ್ಷೇಪಣೆಯ ಭಾಗವನ್ನಾಗಿ ಮಾಡಬೇಕು ಎಂದು ಅವರು ಹೇಳಿದರು.
ಎನ್‍ಜಿಟಿಯಿಂದ ಒಂದು ವರ್ಷ ಕಾಲಾವಕಾಶ ಪಡೆಯಿರಿ: ಅ.25ರ ಗಡುವಿನೊಳಗೆ ಇಷ್ಟೊಂದು ದೊಡ್ಡ ಪ್ರಮಾಣದ ಸಮೀಕ್ಷೆ ಮತ್ತು ದಾಖಲೆ ಸಿದ್ಧಪಡಿಸುವುದು ಸಾಧ್ಯವಿಲ್ಲ. ಹೀಗಾಗಿ ಎನ್‍ಜಿಟಿ ಮುಂದೆ ಸಮರ್ಥ ಕಾನೂನು ತಂಡವನ್ನು ನಿಯೋಜಿಸಿ ಕನಿಷ್ಠ ಒಂದು ವರ್ಷದ ಕಾಲಾವಕಾಶ ಪಡೆಯಬೇಕು. ಭೌತಿಕ ಸಮೀಕ್ಷೆ ಮಾಡಿ, ಪರ್ಯಾಯ ನಕ್ಷೆ ಸಿದ್ಧಪಡಿಸಿ, ಗ್ರಾಮಸಭೆಗಳ ನಿರ್ಣಯ ಪಡೆಯಿರಿ. ಜನರ ಜೀವನೋಪಾಯ ರಕ್ಷಣೆಗೆ ಸ್ಪಷ್ಟಕ್ರಮ ರೂಪಿಸಿ, ನಂತರ ಎನ್‍ಜಿಟಿ ಮುಂದೆ ಸಮಗ್ರ ವರದಿ ಸಲ್ಲಿಸಿ ಎಂದು ವಿಜಯೇಂದ್ರ ಸಲಹೆ ನೀಡಿದರು.
ಕಾಡಂಚಿನ ಜನರ ಆತಂಕ ನಿವಾರಿಸಲು ಬಗರ್ ಹುಕುಂ ಹಾಗೂ ಸೆಕ್ಷನ್ 94ಎ ಅಡಿಯಲ್ಲಿ ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸಿ ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು. ಅರಣ್ಯ ಮತ್ತು ಕಂದಾಯ ಗಡಿ ವಿವಾದಗಳಿಗೆ ಪ್ರತ್ಯೇಕ ಟಾಸ್ಕ್ ಫೋರ್ಸ್ ರಚಿಸಬೇಕು ಎಂದು ಅವರು ಆಗ್ರಹಿಸಿದರು.
ಅಧಿಕಾರಿಗಳಿಗೂ ‘ನಟ್ಟು-ಬೋಲ್ಟ್ ಟೈಟ್’ ಮಾಡಿ: ‘ಜನರು ಕಾಡುಪ್ರಾಣಿಗಳ ಜೊತೆ ಸಂಘರ್ಷ ಎದುರಿಸುತ್ತಿದ್ದಾರೆ. ಮತ್ತೊಂದೆಡೆ ಅರಣ್ಯ ಅಧಿಕಾರಿಗಳ ಜೊತೆ ಸಂಘರ್ಷದ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಅಂತ್ಯಸಂಸ್ಕಾರಕ್ಕೆ ಕಟ್ಟಿಗೆ ತರುವುದರಿಂದ ಹಿಡಿದು ಶೌಚಾಲಯ ನಿರ್ಮಾಣದವರೆಗೆ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ದೂರುಗಳಿವೆ. ಮುಖ್ಯಮಂತ್ರಿ ಅಧಿಕಾರಿಗಳ ‘ನಟ್ಟು-ಬೋಲ್ಟ್ ಟೈಟ್ ಮಾಡುತ್ತೇನೆ' ಎಂದಿದ್ದಾರೆ. ಈಗ ಅದನ್ನು ಕಾರ್ಯರೂಪಕ್ಕೆ ತರಬೇಕು’ ಎಂದು ವಿಜಯೇಂದ್ರ ಆಗ್ರಹಿಸಿದರು.