ಶೃಂಗೇರಿ : ರೈತರ ಮೇಲೆ ಯಾರೂ ಮರಣ ಶಾಸನ ಬರೆಯಲು ಸಾಧ್ಯವಿಲ್ಲ. ವರದಿ ಅನುಷ್ಠಾನಕ್ಕೆ ನೂರಾರು ವರ್ಷಗಳಿಂದ ಬದುಕುತ್ತಿರುವ ಜನತೆ ಹೆದರುವ ಅಗತ್ಯವಿಲ್ಲ ಎಂದು ಆದಿಚುಂಚನಗಿರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿ ಸಮಿತಿ ಸೋಮವಾರ ಏರ್ಪಡಿಸಿದ್ದ ಬೃಹತ್ ಪ್ರತಿಭಟನಾ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಉನ್ನತ ಅಧಿಕಾರಿಗಳು ನಾಲ್ಕು ಗೋಡೆಯ ಮಧ್ಯೆ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಬರೆಯುವ ಕಾನೂನು ಕಾಯ್ದೆಯಾಗಲು ಸಾಧ್ಯವಿಲ್ಲ. ಇಲ್ಲಿನ ಸ್ಥಿತಿಗತಿ ಬಗ್ಗೆ ಅರಿವಿಲ್ಲದೆ ಅವರು ಬರೆಯುತ್ತಿದ್ದಾರೆ. ರೈತರಿಂದ ಪರಿಸರಕ್ಕೆ ಯಾವುದೇ ಮಾರಕವಾಗಿಲ್ಲ. ರೈತರು ಬೆಳೆಯುವ ಬೆಳೆ ಪರಿಸರಕ್ಕೆ ಪೂರಕವಾಗಿದೆ ಎಂದರು.

ಅರಣ್ಯ ಇಲಾಖೆ ಸ್ವಾಭಾವಿಕ ಕಾಡು ತೆಗೆದು ಬೆಳೆಸಿದ ಅಕೇಶಿಯಾ ಕಾಡು ಪ್ರಕೃತಿಗೆ ಮಾರಕವಾಗಿದೆ. ರೈತರಿಗೆ ವಿನಾಕಾರಣ ತೊಂದರೆ ನೀಡಿದರೆ ಇಡೀ ಜಗತ್ತಿನ ಜೀವರಾಶಿಯೇ ಸತ್ತುಹೋಗುತ್ತದೆ. ಕೃಷಿಕನ ಚಿಂತನ ಮಂಥನ ಯಾವುದೇ ಧರ್ಮ ಗ್ರಂಥ ಜಾತಿ, ವರ್ಗಕ್ಕೆ ಸೀಮಿತವಾದುದಲ್ಲ. ಅನ್ನ ನೀಡುವ ರೈತರಿಗೆ ಸರಕಾರಗಳು ಯಾವುದೇ ತೊಂದರೆ ನೀಡಬಾರದು ಎಂದು ಹೇಳಿದರು.

ಚಿಂತಕ ಹುಲಕೋಡು ರಾಮಸ್ವಾಮಿ ಮಾತನಾಡಿ, ವಿದೇಶಿ ಎನ್‌ಜಿಒ ಸಂಸ್ಥೆಗಳ ಒತ್ತಾಸೆಯಿಂದ ಈ ವರದಿ ಜಾರಿಗೊಳಿಸಲಾಗುತ್ತಿದೆ. ಇಲ್ಲಿ ಬದುಕುತ್ತಿರುವ ಜನರ ಅಭಿಪ್ರಾಯ ಪಡೆಯದೇ ಏಕಪಕ್ಷೀಯವಾಗಿ ವರದಿ ಜಾರಿ ಮಾಡಲು ಸರಕಾರ ಹೊರಟಿದೆ. ವರದಿಯನ್ನು ಒಗ್ಗಟ್ಟಾಗಿ ವಿರೋಧಿಸಬೇಕಾಗಿದೆ. ವರದಿ ಜಾರಿಯಾದರೆ ಮಲೆನಾಡಿನ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಸರಕಾರದ ಯಾವುದೇ ಯೋಜನೆಯಲ್ಲಿ ಸಂತ್ರಸ್ತರ ಸಮಸ್ಯೆ ಬಗ್ಗೆ ಕಡೆಗಣನೆ ಮಾಡುತ್ತಿದ್ದು, ಜನರ ಜೀವನದ ಬಗ್ಗೆ ಯೋಚಿಸದೆ ಅವೈಜ್ಞಾನಿಕ ವರದಿಯನ್ನು ಹೇರಲಾಗುತ್ತಿದೆ ಎಂದರು.

ಸ್ಥಳೀಯ ಹೋರಾಟಗಾರ ದಿಗಂತ್ ಬಿಂಬೈಲ್ ಮಾತನಾಡಿ, ತಾಲೂಕಿನ ಶೇ.50ರಷ್ಟು ಗ್ರಾಮಗಳಲ್ಲಿ ನೇರವಾಗಿ ವರದಿ ಜಾರಿಯಾಗಲಿದ್ದರೆ, ಉಳಿದ ಭಾಗವೂ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುತ್ತದೆ. ಆಗ ಮೂಲಭೂತ ಸೌಕರ್ಯಕ್ಕೂ ಪರದಾಡಬೇಕಾಗುತ್ತದೆ. ನಾವು ವರದಿ ಜಾರಿಗೊಳಿಸಲು ಅವಕಾಶ ನೀಡಬಾರದು ಎಂದು ತಿಳಿಸಿದರು.

ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣರಾವ್ ಮಾತನಾಡಿ, ನಮ್ಮ ಬದುಕಿನ ಉಳಿವಿಗಾಗಿ ಬೀದಿಗಿಳಿಯಬೇಕಿದೆ. ವರದಿಯಿಂದ ನಮ್ಮದೇ ನೆಲದಲ್ಲಿ ಸ್ವಾತಂತ್ರ್ಯ ಕಳೆದುಕೊಂಡು ಬದುಕಬೇಕಾಗುತ್ತದೆ. ಈ ಹಿಂದೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆ ಮೂಲಕ ಬದುಕುವ ಸಾತಂತ್ರ್ಯ ಕಿತ್ತುಕೊಂಡು ಊರನ್ನೇ ತೊರೆಯುವಂತೆ ಮಾಡಿದ್ದಾರೆ. ಒಕ್ಕಲೆಬ್ಬಿಸುವುದಿಲ್ಲ ಎಂದ ಸರಕಾರ ನಂತರದಲ್ಲಿ ಮೂಲಭೂತ ಸೌಕರ್ಯ ನೀಡದೇ ಪರೋಕ್ಷವಾಗಿ ಅಲ್ಲಿನ ಜನರನ್ನು ಹೊರ ದಬ್ಬಿದೆ ಎಂದು ಆರೋಪಿಸಿದರು.

ಬಂದ್ ಹಿನ್ನೆಲೆಯಲ್ಲಿ ಇಡೀ ಶೃಂಗೇರಿ ತಾಲೂಕಿನಾದ್ಯಂತ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿತ್ತು. ಪಟ್ಟಣದಲ್ಲಿ ವಾಹನ ಸಂಚಾರ, ಜನಸಂಚಾರವೂ ಕಡಿಮೆ ಇತ್ತು. ಪ್ರತಿಭಟನಾ ಮೆರವಣಿಗೆಯಲ್ಲಿ ತಾಲೂಕಿನ ಹಲವಾರು ಗ್ರಾಮಗಳ ಜನತೆ, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನಾ ಸಭೆಯಲ್ಲಿ ಹೋರಾಟ ಸಮಿತಿಯ ಕಾನುವಳ್ಳಿ ಚಂದ್ರಶೇಖರ್, ಡಿ.ಸಿ.ಶಂಕರಪ್ಪ, ರಂಜಿತ್, ಕೆ.ಎಂ.ಗೋಪಾಲ್, ಭರತ್, ಅಂಗುರ್ಡಿ ದಿನೇಶ್, ಮಾಜಿ ಶಾಸಕ ಡಿ.ಎನ್.ಜೀವರಾಜ್, ಜೆಡಿಎಸ್ ಮುಖಂಡ ಸುಧಾಕರ ಶೆಟ್ಟಿ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor