ಅರಿವು ಕೇಂದ್ರಗಳಲ್ಲಿ ‘ಓದುವ ಬೆಳಕು’ ಅಭಿಯಾನ : ಸಚಿವ ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
ಬೆಂಗಳೂರು : ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ ‘ಓದುವ ಬೆಳಕು’ ಕಾರ್ಯಕ್ರಮದಡಿ ಫೆಬ್ರವರಿ ತಿಂಗಳಲ್ಲಿ ಹಲವಾರು ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಶನಿವಾರ ಈ ಬಗ್ಗೆ ಮಾಧ್ಯಮ ಪ್ರಕಟನೆ ಹೊರಡಿಸಿರುವ ಅವರು, ಓದುವ ಬೆಳಕು ಕಾರ್ಯಕ್ರಮದಡಿ ಪ್ರತಿ ತಿಂಗಳು ಉಪಯುಕ್ತ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದ್ದು, ಮಕ್ಕಳ ಸರ್ವತೋಮುಖ ಅಭ್ಯುದಯಕ್ಕೆ ಈ ಚಟುವಟಿಕೆಗಳು ಸಹಕಾರಿಯಾಗಿವೆ ಎಂದಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ‘ಗ್ರಂಥಾಲಯದೆಡೆಗೆ ನಾನು ನನ್ನ ಸ್ನೇಹಿತರು' ಅಭಿಯಾನದಡಿ ಗ್ರಾಮೀಣ ಪ್ರದೇಶದ ಎಲ್ಲಾ ಮಕ್ಕಳು ಹಾಗೂ ಹದಿಹರೆಯದವರಲ್ಲಿ ಓದುವ ಹವ್ಯಾಸ ಹೆಚ್ಚಿಸಲು ಹಾಗೂ ಅರಿವು ಕೇಂದ್ರಗಳ ಉಪಯೋಗಗಳನ್ನು ಪಡೆಯಲು ಪ್ರೇರೇಪಿಸಲಾಗುವುದು ಎಂದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
‘ಗಟ್ಟಿ ಓದು’ ಅಭಿಯಾನದಡಿ ಮಕ್ಕಳು ತಮ್ಮ ಗ್ರಾಮ ಪಂಚಾಯತಿಯ ಅರಿವು ಕೇಂದ್ರಕ್ಕೆ ಭೇಟಿ ನೀಡಿ, ತಮ್ಮ ಇಷ್ಟದ ಕಥೆ ಪುಸ್ತಕಗಳನ್ನು ಆಯ್ದುಕೊಂಡು ಗಟ್ಟಿಯಾಗಿ ಓದುವ ಕ್ರಿಯೆಯಲ್ಲಿ ತೊಡಗುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
‘ನಾನು ಓದಿದ ಪುಸ್ತಕ’ ಚಟುವಟಿಕೆಯಡಿ ಅರಿವು ಕೇಂದ್ರದಿಂದ ಒಂದು ಪುಸ್ತಕವನ್ನು ಆಯ್ಕೆ ಮಾಡಿ ಓದಿ, ಪುಸ್ತಕದ ಬಗ್ಗೆ ಮುಕ್ತವಾಗಿ ಅಭಿಪ್ರಾಯವನ್ನು ಇತರೆ ಮಕ್ಕಳಿಗೆ ಹೇಳುವುದು, ಮಕ್ಕಳು ತಮ್ಮ ಅಜ್ಜ-ಅಜ್ಜಿಯರನ್ನು ಅರಿವು ಕೇಂದ್ರಕ್ಕೆ ಕರೆತರಲು ಪ್ರೋತ್ಸಾಹಿಸುವುದು ಸಾಧ್ಯವಾಗಲಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಫೆಬ್ರವರಿ ತಿಂಗಳು ವಾರ್ಷಿಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾಲಿಗೆ ಮಹತ್ವದ ಸಮಯವಾಗಿದೆ. ಈ ಅವಧಿಯಲ್ಲಿ ಪರೀಕ್ಷಾ ಸಿದ್ಧತೆ ಕುರಿತಂತೆ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕರಿಂದ, ಹಿರಿಯರಿಂದ ಮಾರ್ಗದರ್ಶನ ಮತ್ತು ಆತ್ಮಸ್ಥೆರ್ಯ ತುಂಬುವ ಹಿತನುಡಿಗಳು ಹಾಗೂ ಪೋಷಕರು ಮತ್ತು ಮಕ್ಕಳೊಂದಿಗೆ ಸೌಹಾರ್ದ ಸಭೆ ನಡೆಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಫೆ.28ಕ್ಕೆ ವಿಜ್ಞಾನ ಕ್ಷೇತ್ರದ ಸಾಧನೆಗಳ ಮಾಹಿತಿ: ‘ಫೆ.28ರಂದು ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಅರಿವು ಕೇಂದ್ರಗಳಿಗೆ ಬರುವ ಮಕ್ಕಳಿಗೆ ವಿಜ್ಞಾನ ಕ್ಷೇತ್ರದ ಸಾಧನೆಗಳು, ವಿಜ್ಞಾನಿಗಳ ಪರಿಚಯ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಆಯೋಜಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು’
-ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ