ಬೆಂಗಳೂರು : ರಾಜ್ಯ ವ್ಯಾಪಿ ಇಂಧನ ತುಂಬಿಸುವ ಬಂಕ್‍ಗಳಲ್ಲಿ ಪೆಟ್ರೋಲ್, ಡಿಸೇಲ್ ಅಳತೆಯೊಳಗೆ ಭಾರೀ ಮೋಸ ಬೆಳಕಿಗೆ ಬಂದಿದ್ದು, ಈ ಸಂಬಂಧ ಗ್ರಾಹಕರು ದೂರು ದಾಖಲಿಸಬೇಕು ಎಂದು ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ರಿಝ್ವಾನ್ ಅರ್ಶದ್ ಕರೆ ನೀಡಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿರುವ 5,946 ಇಂಧನ ಬಂಕ್‍ಗಳ ಪೈಕಿ ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ವಿವಿಧ ಪ್ರದೇಶದ 805 ಬಂಕ್‍ಗಳಲ್ಲಿ ಪರಿಶೀಲನೆ ನಡೆಸಿದಾಗ ಬರೋಬ್ಬರಿ 768 ಬಂಕ್‍ಗಳಲ್ಲಿ ತೈಲದ ಅಳತೆಯಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದೆ. ಅದರಲ್ಲೂ 101 ಪೆಟ್ರೋಲ್ ಬಂಕ್‍ಗಳಲ್ಲಿ ಅನುಮತಿಸಬಹುದಾದ ಪರಿಮಾಣಕ್ಕಿಂತಲೂ ಹೆಚ್ಚಿನ ವ್ಯತ್ಯಾಸಗಳು ಕಂಡು ಬಂದ ಹಿನ್ನೆಲೆಯಲ್ಲಿ ದಂಡ ವಿಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಇಂಧನ ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ವಿಚಾರ, ನಮ್ಮ ರಾಜ್ಯದಲ್ಲಿ 5946 ಪೆಟ್ರೋಲ್ ಬಂಕ್‍ಗಳಿವೆ. ಇಲ್ಲಿ ಜನರಿಗೆ ಸರಿಯಾದ ಪ್ರಮಾಣದಲ್ಲಿ ಇಂಧನ ಸಿಗುತ್ತಿದೆಯೇ ಎನ್ನುವ ಕುರಿತು ಈಗಲೂ ಅಧ್ಯಯನ ಮುಂದುವರೆಸಲಾಗಿದೆ. ಇತ್ತೀಚಿಗೆ ತಪಾಸಣೆ ಮಾಡಿದಾಗ 3071 ಪೆಟ್ರೋಲ್ ಗನ್(ಪೆಟ್ರೋಲ್ ಹಾಕುವ ನಾಜಲ್ ಪರಿಕರ) ಪತ್ತೆಯಾಗಿದ್ದು, ಅದರಲ್ಲಿ 2,618 ಗನ್‍ಗಳಲ್ಲಿ ಇಂಧನ ಕಡಿಮೆ ಬಂದಿವೆ.

ಈ ರೀತಿಯ ಪೆಟ್ರೋಲ್ ಗನ್‍ಗಳಲ್ಲಿ ಇಂಧನ ಕಡಿಮೆ ಬರುವುದಾದರೆ ಪೆಟ್ರೋಲ್ ಬಂಕ್‍ನವರೇ ಮಾಹಿತಿ ಕೊಡಬೇಕು. ಬಂಕ್ ಮಾಲಕರು ಪ್ರತಿದಿನ ಪರಿಶೀಲನೆ ಮಾಡಬೇಕು. ಒಟ್ಟಿನಲ್ಲಿ ಶೇ.95 ರಷ್ಟು ಗನ್‍ಗಳಲ್ಲಿ ಸಮರ್ಪಕ ಪೆಟ್ರೋಲ್ ಪೂರೈಕೆ ಆಗುತ್ತಿಲ್ಲ ಎನ್ನುವ ಆತಂಕಕಾರಿ ಅಂಶ ಪತ್ತೆಯಾಗಿದೆ. ಹೀಗಾಗಿ ಗ್ರಾಹಕನ ಹಕ್ಕಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಇಲಾಖೆ ಮಾಡಲು ಹೊರಟಿದೆ ಎಂದು ಸಚಿವರು ವಿವರಿಸಿದರು.

ಕೇಂದ್ರದ ಅಧಿಸೂಚನೆ ಒಪ್ಪುವುದಿಲ್ಲ: ಈ ಹಿಂದೆ ಪ್ರತಿ ಪೆಟ್ರೋಲ್ ಬಂಕ್ ಅವರು ವರ್ಷಕ್ಕೊಮ್ಮೆ ರಿಕ್ಯಾಲಿಬರೇಷನ್ (ತಪಾಸಣೆ) ಮಾಡಬೇಕೆಂಬ ನಿಯಮ ಸೇರಿಸಲಾಗಿತ್ತು. ಆದರೆ, 2025ರಲ್ಲಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದ್ದು, ಅದರಂತೆ ಎರಡು ವರ್ಷಕ್ಕೊಮ್ಮೆ ಈ ಪರಿಶೀಲನೆ ಮಾಡಬೇಕು ತಿಳಿಸಿದೆ. ಈ ಹಿಂದಿನ ಒಂದು ವರ್ಷದ ತಪಾಸಣಾ ಅವಧಿಯಲ್ಲೇ ಬಂಕ್‍ಗಳಲ್ಲಿ ಇಷ್ಟೊಂ ದು ವ್ಯತ್ಯಾಸ ಕಂಡುಬರುತ್ತಿದೆ. ಹೊಸ ಅಧಿಸೂಚನೆಯಂತೆ ತಪಾಸಣೆಗೆ 24 ತಿಂಗಳ ಅವಧಿ ವಿಸ್ತರಿಸಿದರೆ ಗ್ರಾಹಕರಿಗೆ ಎಷ್ಟು ಹೊಡೆತ ಬೀಳಬಹುದು ಎಂದು ಅವರು ಪ್ರಶ್ನಿಸಿದರು.

ಕೇಂದ್ರ ಸರಕಾರ ಯಾವ ಆಧಾರದಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ ಎನ್ನುವುದೇ ಗೊತ್ತಿಲ್ಲ. ನನ್ನ ಪ್ರಕಾರ ಇದೊಂದು ಅವೈಜ್ಞಾನಿಕ ಅಧಿಸೂಚನೆಯೇ ಸರಿ ಎಂದು ಪ್ರತಿಪಾದಿಸಿದ ಅವರು, ಇದರಿಂದ ರಾಜ್ಯದ ಸಾಮಾನ್ಯ ಜನರಿಗೆ ತೊಂದರೆ ಆಗುತ್ತದೆ. ಹೀಗಾಗಿ ಕೇಂದ್ರದ ಅಧಿಸೂಚನೆಯನ್ನು ಒಪ್ಪಲು ಆಗುವುದಿಲ್ಲ. ಈ ಸಂಬಂಧ ಕೇಂದ್ರ ಸರಕಾರಕ್ಕೆ ಪತ್ರ ಬರೆದು ಈ ಅಧಿಸೂಚನೆಯನ್ನು ಒಪ್ಪಲು ಸಿದ್ಧರಿಲ್ಲ ಎಂಬುದನ್ನು ತಿಳಿಸಲಿದ್ದೇವೆ ಎಂದರು.

ಇತ್ತ ಕೇಂದ್ರ ಸರಕಾರ ಇತ್ತೀಚಿಗೆ ಇನ್ನೊಂದು ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ತಪಾಸಣೆ ಮಾಡುವ ಅಧಿಕಾರವನ್ನು ಖಾಸಗಿ ಏಜೆನ್ಸಿಗಳಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ರೀತಿ ಮಾಡಿದರೆ ಬಂಕ್‍ಗಳಲ್ಲಿನ ಪೆಟ್ರೋಲ್ ವ್ಯತ್ಯಾಸವನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ. ಅಲ್ಲದೆ, ಇಂತಹ ಅಂಶಗಳಿಂದ ರಾಜ್ಯ ಸರಕಾರಕ್ಕೂ ನಷ್ಟ ಆಗುತ್ತದೆ. ಗ್ರಾಹಕರಿಗೂ ಇದರಿಂದ ದೊಡ್ಡ ನಷ್ಟ ಆಗಲಿದೆ. ಈ ಎರಡು ಅಧಿಸೂಚನೆಗಳು ಸರಿಯಿಲ್ಲ. ಒಟ್ಟಿನಲ್ಲಿ 2027 ಜನವರಿಯಿಂದ ಈ ಹೊಸ ಅಧಿಸೂಚನೆ ಬರಲಿದ್ದು, ಇದರಲ್ಲಿ ಖಾಸಗಿ ಸಂಸ್ಥೆಗಳ ತಪಾಸಣೆ ಅಂಶವನ್ನು ಕೈಬಿಡಬೇಕು ಎಂದು ಸಚಿವರು ಆಗ್ರಹಿಸಿದರು.

ಮತ್ತೊಂದು ಪ್ರಮುಖ ಅಂಶ ಎಂದರೆ, 5 ಲೀಟರ್ ಇಂಧನದ ಅಳತೆ ಪರಿಶೀಲನೆ ಮಾಡಿದಾಗ, ಸುಮಾರು 30ರಿಂದ70 ಎಂಎಲ್‍ಗಳು ಕಡಿಮೆ ಬಂದಿದೆ. ನಮ್ಮ ದೇಶದಲ್ಲಿ 5 ಲೀಟರ್‍ಗೆ ಶೇ.0.5ರಷ್ಟು ವ್ಯತ್ಯಾಸ ಇರಬಹುದು ಎಂಬ ಮಾನದಂಡ ಇದೆ. ಬೇರೆ ದೇಶಗಳಲ್ಲಿ ಶೇ.0.3ರಷ್ಟು ವ್ಯತ್ಯಾಸ ಇರಬಹುದು ಎಂಬ ನಿಯಮ ಇದೆ. 2011ರಲ್ಲಿ ಶೇ.0.5 ರಿಂದ ಶೇ.0.3ರಷ್ಟು ಇಳಿಸಬೇಕು ಎಂಬ ಚಿಂತನೆ ಇತ್ತು. ಆದರೆ, ಅದನ್ನು ಮಾಡಿಲ್ಲ. ಹಾಗಾಗಿ ವ್ಯತ್ಯಾಸ ಪ್ರಮಾಣವನ್ನು ಶೇ.0.3ರಷ್ಟಿಗೆ ಇಳಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಿದ್ದೇವೆ. ಈಗಿರುವ ಮಾನದಂಡದ ಪ್ರಕಾರ ನೂರಾರು ಕೋಟಿ ಹಣ ಗ್ರಾಹಕರಿಗೆ ಹಣ ನಷ್ಟ ಆಗುತ್ತಿದೆ ಎಂದು ಅವರು ಹೇಳಿದರು.

 

‘ಡಿಸೆಂಬರ್ 2026ರೊಳಗೆ ರಿ ಕ್ಯಾಲಿಬರೇಷನ್ ಬಾಕಿ ಇರುವ 2500 ಪೆಟ್ರೋಲ್, ಡೀಸೆಲ್ ಪಂಪ್‍ಗಳು ಇದ್ದು, ಅವಧಿ ಮುಗಿಯುವ ಮುನ್ನ ತಪಾಸಣೆ ಮಾಡಬೇಕು. ಇಲ್ಲವಾದರೆ ಮಾಪನಶಾಸ್ತ್ರ ಇಲಾಖೆಯಿಂದ ತಪಾಸಣೆ ಮಾಡಲಾಗುವುದು’ ಎಂದು ಸಚಿವ ರಿಝ್ವಾನ್ ಆರ್ಶದ್ ಹೇಳಿದ್ದಾರೆ.

ದೂರು ನೀಡಲು ಸಹಾಯವಾಣಿ: ‘ಪೆಟ್ರೋಲ್ ಬಂಕ್‍ಗಳಲ್ಲಿ ಗ್ರಾಹಕರಿಗೆ ಅಳತೆ ಸಂಬಂಧ ಏನಾದರೂ ಅನುಮಾನ ಬಂದರೆ ಉಚಿತ ಸಹಾಯವಾಣಿ 18005991100ಗೆ ಕರೆ ಮಾಡಬಹುದು.ಅಥವಾ ಇಮೇಲ್ ಐಡಿ clm/lm/k@nic.in ನಿಮ್ಮ ದೂರು ಸಲ್ಲಿಸಬಹುದು.ಇನ್ನೂ, ಪೆಟ್ರೋಲ್ ಬಂಕ್‍ಗಳಲ್ಲಿ ಈ ಸಹಾಯವಾಣಿ ಫಲಕಗಳನ್ನು ಪ್ರದರ್ಶನ ಮಾಡಬೇಕು. ಗ್ರಾಹಕರಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ನೀಡಬೇಕು’

-ರಿಝ್ವಾನ್ ಆರ್ಶದ್, ಆಹಾರ ಸಚಿವ

ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆಗೆ ಆಗ್ರಹ: ರಾಜ್ಯ ಕಾಂಗ್ರೆಸ್ ಸರಕಾರ ಪ್ರಮುಖ ಗ್ಯಾರಂಟಿಗಳಲ್ಲಿ ಈಗ ಅಳತೆ ಗ್ಯಾರಂಟಿ ಸಹ ನೀಡಿದೆ. ಆದರೆ, ಇಂಧನ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಬಹಳ ಕಷ್ಟ ಇದೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣವೇ ಇಂಧನ ಬೆಲೆ ಕಡಿಮೆ ಮಾಡಬೇಕು ಎಂದು ಸಚಿವ ರಿಝ್ವಾನ್ ಆರ್ಶದ್ ಒತ್ತಾಯಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor