ಬೆಂಗಳೂರು : ಪ್ರಧಾನಿ ಮೋದಿ ಸರಕಾರ ಯುಪಿಐ ಅನ್ನು ಕಲೆಕ್ಷನ್ ಮಷಿನ್ ಆಗಿ ಮಾಡುತ್ತಿದೆ. ಯುಪಿಐ ವಹಿವಾಟು ತೆರಿಗೆ ವಿಧಿಸಲು ಮುಂದಾಗಿರುವುದು ದೇಶದ ಜನ ಸಾಮಾನ್ಯರಿಗೆ ಮಾಡಿದ ಮಹಾಮೋಸ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಡವರು, ಮಧ್ಯಮವರ್ಗ ಸೇರಿ ಎಲ್ಲರ ಮೇಲೂ ಯುಪಿಐ ವಹಿವಾಟು ತೆರಿಗೆ ವಿಪರೀತ ಪರಿಣಾಮ ಬೀರಲಿದ್ದು, ಕೇಂದ್ರದ ಬಿಜೆಪಿ ಸರಕಾರ ಅಮೆರಿಕ ಕಂಪೆನಿಗಳಿಗೆ ಶರಣಾಗಿದೆ ಎಂದು ಗಂಭೀರ ಆರೋಪ ಮಾಡಿದರು.

2026ರ ಅಕ್ಟೋಬರ್ 15ರಿಂದ ಜಾರಿಗೆ ಬರುವಂತೆ 2000ರೂ.ಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲೆ ‘ಯುಪಿಐ ವಹಿವಾಟು ತೆರಿಗೆ’ ವಿಧಿಸಲು ಕೇಂದ್ರದ ಬಿಜೆಪಿ ಸರಕಾರ ದಾರಿ ಮಾಡಿಕೊಟ್ಟಿದ್ದು, 2026ರ ಸೆಪ್ಟೆಂಬರ್ 14ರ ದಿನವು ‘ಡಿಜಿಟಲ್ ಪಲ್ಟಿ’ ಹೊಡೆದ ಹಾಗೂ ‘ದ್ರೋಹ ಮತ್ತು ಶರಣಾಗತಿ’ಯ ದಿನವಾಗಿ ನೆನಪಿನಲ್ಲಿ ಉಳಿಯಲಿದೆ. ಯುಪಿಐ ವಹಿವಾಟು ತೆರಿಗೆ ಜನರಿಗೆ ಹೊರೆಯಾಗಲಿದೆ ಎಂದು ಸುರ್ಜೇವಾಲ ತಿಳಿಸಿದರು.

ಕೇಂದ್ರ ಸರಕಾರ ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊ ರೇಷನ್ ಆಫ್ ಇಂಡಿಯಾ ಪ್ರಸ್ತುತ ಪಿ2ಎಮ್ (ವ್ಯಕ್ತಿಯಿಂದ ವ್ಯಾಪಾರಿಗೆ) ವಹಿವಾಟುಗಳಿಗೆ 0.4ರಷ್ಟು ಶುಲ್ಕವನ್ನು ನಿಗದಿಪಡಿಸುತ್ತಿವೆ. ಖಂಡಿತವಾಗಿಯೂ, ಭಾರತ ಸರಕಾರವು ಕೇವಲ ಒಂದು ಅಧಿಸೂಚನೆಯನ್ನು ಹೊರಡಿಸುವ ಮೂಲಕ ಈ ವಹಿವಾಟು ಶುಲ್ಕವನ್ನು ಯಾವುದೇ ಸಮಯದಲ್ಲಿ ಮತ್ತು ಯಾವುದೇ ವಹಿವಾಟಿನ ವಿಭಾಗದ ಮೇಲಾದರೂ ಹೆಚ್ಚಿಸಬಹುದು ಎಂದು ಸುರ್ಜೇವಾಲ ಆತಂಕ ವ್ಯಕ್ತಪಡಿಸಿದರು.

ಡಿಜಿಟಲ್, ನಗದುರಹಿತ ಮತ್ತು ಒಳಗೊಳ್ಳುವಿಕೆಯ ಭಾರತ ನಿರ್ಮಾಣಕ್ಕೆ ಯುಪಿಐ ಒಂದು ಪ್ರಮುಖ ಅಸ್ತ್ರವಾಗಿತ್ತು. ಆದರೆ ಮೋದಿ ಸರಕಾರವು ಸಾಮಾನ್ಯ ಜನರನ್ನು ಗುರಿಯಾಗಿಸಿಕೊಂಡು ಅದನ್ನು ‘ತೆರಿಗೆ ವಿಧಿಸುವ ಮತ್ತು ಸಂಗ್ರಹಿಸುವ ಯಂತ್ರ’ವಾಗಿ ಪರಿವರ್ತಿಸುತ್ತಿದೆ. ಇದು ಬಿಜೆಪಿ ಸರಕಾರವು ಸಾಮಾನ್ಯ ಭಾರತೀಯರಿಗೆ ಮಾಡಿದ ದ್ರೋಹ, ಬೆನ್ನಿಗೆ ಚೂರಿ ಹಾಕಿ-ಮಹಾವಂಚನೆ ಮಾಡಿದ ಕಥೆಯಾಗಿದೆ ಎಂದು ಸುರ್ಜೇವಾಲ ಟೀಕಿಸಿದರು.

ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಮಹಿಳಾ ಶಾಸಕರಿಗೆ ಸ್ಥಾನ ನೀಡದ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸುರ್ಜೇವಾಲ, ಇದು ದಿಲ್ಲಿಯ ಹೈಕಮಾಂಡ್ ತಪ್ಪಲ್ಲ, ನನ್ನ ತಪ್ಪು. ನಾನೇ ಒಬ್ಬ ಮಹಿಳಾ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಒಬ್ಬರಿಗಿಂತ ಹೆಚ್ಚು ಆಕಾಂಕ್ಷಿಗಳಿದ್ದರು, ಹೀಗಾಗಿ ಸಾಧ್ಯವಾಗಲಿಲ್ಲ. ಆದರೆ, ಮಹಿಳೆಗೆ ಸಚಿವ ಸ್ಥಾನ ನೀಡುವ ಬಗ್ಗೆ ಶೀಘ್ರದಲ್ಲೇ ನಿರ್ಧರಿಸುತ್ತೇವೆ. ಮಹಿಳಾ ಸಬಲೀಕರಣದ ವಿಚಾರದಲ್ಲಿ ಅತ್ಯಂತ ಗಂಭೀರವಾಗಿದ್ದೇವೆ ಎಂದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ‘ಸಂಘಟನ್ ಸೃಜನ್ ಅಭಿಯಾನ’ದ ಮೂಲಕ ನೂತನವಾಗಿ ನೇಮಕಗೊಂಡಿರುವ ಜಿಲ್ಲಾ ಅಧ್ಯಕ್ಷರುಗಳನ್ನು ಭೇಟಿ ಮಾಡಿದ್ದೇವೆ. ಸಂಘಟನ್ ಸೃಜನ್ ಅಭಿಯಾನ ಎಂಬುದು ಕಾಂಗ್ರೆಸ್ ಪಕ್ಷದ ಸಂಘಟನೆ ಕುರಿತ ಪ್ರಮುಖ ಪ್ರಕ್ರಿಯೆಯಾಗಿದೆ. ಒಂದು ವರ್ಷದ ಬಳಿಕ ಭಾರತದೆಲ್ಲೆಡೆ ಬಿಎಲ್‍ಎ2ನಿಂದ ಪಿಸಿಸಿ ಅಧ್ಯಕ್ಷರವರೆಗೆ 15,56,054 ಪದಾಧಿಕಾರಿಗಳನ್ನು ಪಕ್ಷ ಹೊಂದಲಿದೆ. ನಮ್ಮ ಪಕ್ಷದ ಸಂಘಟನೆ ಹೊಸ ಪಥದಲ್ಲಿ ಸಾಗುತ್ತಿದೆ ಎಂದರು.

ನಮ್ಮ ಪಕ್ಷದಲ್ಲಿ ಯಾರಾದರೂ ಒಂದು ಹುದ್ದೆ ಪಡೆದರೆ ಅವರು ನಾಯಕತ್ವಕ್ಕೆ ಹೊಣೆಗಾರಿಕೆ ಹೊಂದಿರಬೇಕು. ನೂತನ ಜಿಲ್ಲಾ ಅಧ್ಯಕ್ಷರಿಗೆ ಭವಿಷ್ಯದ ಕಾರ್ಯಗಳ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ. ರಾಜ್ಯದಲ್ಲಿ ತಳಮಟ್ಟದಿಂದ ಸಂಘಟನಾ ವ್ಯವಸ್ಥೆ ಹೊಂದುವುದು ನಮ್ಮ ಧ್ಯೇಯವಾಗಿದೆ ಎಂದು ವೇಣುಗೋಪಾಲ್ ತಿಳಿಸಿದರು.

ನಂತರ ನಾವು ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‍ಐಆರ್ ಪ್ರಕ್ರಿಯೆ ಬಗ್ಗೆ ಸಭೆ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಈಗ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿದ್ದು, ಇದು ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವಿನ ಸಮರ ಮಾತ್ರವಲ್ಲ. ಬಿಜೆಪಿಯು ನಮ್ಮ ವಿರುದ್ಧ ಸಿಬಿಐ, ಈಡಿ, ಐಟಿ ಹಾಗೂ ಚುನಾವಣಾ ಆಯೋಗದ ಜತೆಗೂಡಿ ಹೋರಾಡುತ್ತಿದೆ. ಚುನಾವಣಾ ಆಯೋಗ 3-4 ವರ್ಷಗಳಲ್ಲಿ ನಡೆದುಕೊಳ್ಳುತ್ತಿರುವುದನ್ನು ನೋಡಿದರೆ, ವಿರೋಧ ಪಕ್ಷಗಳ ಯಾವುದೇ ಪ್ರಶ್ನೆಗೂ ಸರಿಯಾದ ಉತ್ತರ ನೀಡುತ್ತಿಲ್ಲ ಎಂದು ವೇಣುಗೋಪಾಲ್ ದೂರಿದರು.

ಕರ್ನಾಟಕದಲ್ಲಿ 5.54 ಕೋಟಿ ಮತಗಳ ಪೈಕಿ 1,07,96,415 ಮತಗಳನ್ನು ತೆಗೆದುಹಾಕಲಾಗಿದೆ. 43 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗಿದೆ. ಇವುಗಳಿಂದ ಚುನಾವಣಾ ಆಯೋಗದ ಉದ್ದೇಶ ಅರ್ಥವಾಗುತ್ತದೆ. ಈ ವಿಚಾರವನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿದ್ದು, ನಾವು ಚುನಾವಣಾ ಆಯೋಗದಿಂದ ಯಾವುದೇ ನೆರವನ್ನು ನಿರೀಕ್ಷೆ ಮಾಡುತ್ತಿಲ್ಲ. ಈ ಎಸ್‍ಐಆರ್ ಪ್ರಕ್ರಿಯೆ ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಬೇಕು ಎಂದು ವೇಣುಗೋಪಾಲ್ ತಿಳಿಸಿದರು.

ಚುನಾವಣೆಗಳನ್ನು ಜನಾದೇಶದ ಮೂಲಕ ಗೆಲ್ಲಬಹುದೇ ವಿನಃ ಮತಗಳ್ಳತನದಿಂದ ಅಲ್ಲ. ರಾಜ್ಯದಲ್ಲಾಗಲಿ, ರಾಷ್ಟ್ರ ಮಟ್ಟದಲ್ಲಾಗಲಿ ಚುನಾವಣಾ ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ನಾವು ಸಹಿಸುವುದಿಲ್ಲ ಎಂದು ವೇಣುಗೋಪಾಲ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಎಸ್‍ಸಿ-ಎಸ್‍ಟಿ ನಾಯಕರೇ ಈ.ಡಿ. ಟಾರ್ಗೆಟ್: ಎಸ್‍ಟಿ ಸಮುದಾಯದ ಪ್ರಬಲ ನಾಯಕ ಎಂಬ ಕಾರಣಕ್ಕೆ ಸತೀಶ್ ಜಾರಕಿಹೊಳಿಯವರನ್ನು 2 ಬಾರಿ ಟಾರ್ಗೆಟ್ ಮಾಡಲಾಗಿದೆ. ಡಿ.ಕೆ.ಬ್ರದರ್ಸ್ ಮೇಲೂ ಕೇಂದ್ರದ ತನಿಖಾ ಸಂಸ್ಥೆಗಳು ದಾಳಿ ನಡೆಸಿದ್ದವು. ಸಿದ್ದರಾಮಯ್ಯ ಮೇಲೂ ಈಡಿ ದಾಳಿ ಮಾಡಲಾಗಿತ್ತು. ಭೈರತಿ ಸುರೇಶ್, ಝಮೀರ್, ಡಾ.ಜಿ.ಪರಮೇಶ್ವರ್, ನಾರಾ ಭರತ್ ರೆಡ್ಡಿ, ನಾಗೇಂದ್ರ ಮೇಲೆ ದಾಳಿ ನಡೆಯಿತು. ಕಾಂಗ್ರೆಸ್ ನಾಯಕರ ಮೇಲೆ ಈ.ಡಿ. ದಾಳಿ ಮಾಡಿರುವ ದೊಡ್ಡ ಪಟ್ಟಿಯಿದೆ. ಇದಕ್ಕೆ ಪ್ರಮುಖ ಕಾರಣ ಇವರೆಲ್ಲ ಎಸ್‍ಸಿ, ಎಸ್‍ಟಿ ನಾಯಕರು ಎಂಬುದಾಗಿದೆ. ಯಾವುದೇ ಕಾರಣಕ್ಕೂ ನಾವು ಕೇಂದ್ರದ ಮುಂದೆ ತಲೆ ಬಾಗುವುದಿಲ್ಲ. ನಾವೆಲ್ಲರೂ ಸಚಿವ ಸತೀಶ್ ಜಾರಕಿಹೊಳಿ ಜೊತೆ ಇದ್ದೇವೆ ಎಂದು ಸುರ್ಜೇವಾಲ ತಿಳಿಸಿದರು.

 

ಜಿಲ್ಲಾಧ್ಯಕ್ಷರ ಕಾರ್ಯವೈಖರಿ ಮೌಲ್ಯಮಾಪನ: ನೂತನ ಜಿಲ್ಲಾ ಅಧ್ಯಕ್ಷರುಗಳು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ತಿಳಿಯಲು ಆರು ತಿಂಗಳ ನಂತರ ಇವರ ಕಾರ್ಯವೈಖರಿ ಮೌಲ್ಯಮಾಪನ ಮಾಡಲಾಗುವುದು. ಉತ್ತಮವಾಗಿ ಕಾರ್ಯನಿರ್ವಹಿಸಿದವರನ್ನು ಈ ಜವಾಬ್ದಾರಿಯಲ್ಲಿ ಮುಂದುವರಿಸಲಾಗುವುದು, ಯಾರು ಕಾರ್ಯನಿರ್ವಹಿಸಲು ವಿಫಲರಾಗುತ್ತಾರೋ ಅವರ ಬದಲು ಬೇರೆಯವರಿಗೆ ಅವಕಾಶ ನೀಡಲಾಗುವುದು ಎಂದು ವೇಣುಗೋಪಾಲ್ ಹೇಳಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor