×
Ad

ಮೇ ಅಂತ್ಯದವರೆಗೆ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ : ಸಚಿವ ಶಿವಾನಂದ ಪಾಟೀಲ್‌

Update: 2025-05-01 12:58 IST

ಸಚಿವ ಶಿವಾನಂದ ಪಾಟೀಲ್‌

ಬೆಂಗಳೂರು : ಬೆಂಬಲ ಬೆಲೆ ತೊಗರಿ ಖರೀದಿ ಅವಧಿಯನ್ನು ವಿಸ್ತರಣೆ ಮಾಡಲಾಗಿದ್ದು, ಮೇ ತಿಂಗಳ ಅಂತ್ಯದವರೆಗೆ ಖರೀದಿ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್‌ ತಿಳಿಸಿದ್ದಾರೆ.

ಖರೀದಿ ಅವಧಿ ಮೇ 1ಕ್ಕೆ ಅಂತ್ಯವಾಗಲಿದ್ದು, ನಿಗದಿತ ಖರೀದಿ ಪ್ರಮಾಣ ಇನ್ನೂ ಆಗದ ಕಾರಣ ಖರೀದಿ ಅವಧಿ ವಿಸ್ತರಣೆ ಮಾಡಲು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದ್ದು, ಒಂದು ತಿಂಗಳು ವಿಸ್ತರಣೆ ಮಾಡಲಾಗಿದೆ.

ಕೇಂದ್ರ ಸರಕಾರ ಕನಿಷ್ಠ ಬೆಂಬಲ ಬೆಲೆಯಲ್ಲಿ 3.06 ಲಕ್ಷ ಮೆಟ್ರಿಕ್‌ ಟನ್‌ ತೊಗರಿ ಖರೀದಿಗೆ ಅನುಮತಿ ನೀಡಿದ್ದು, ಇದುವರೆಗೆ ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ 1.83 ಲಕ್ಷ ಮೆಟ್ರಿಕ್‌ ಟನ್‌ ಖರೀದಿ ಮಾಡಲಾಗಿದೆ. ಇನ್ನೂ 2.70 ಲಕ್ಷ ಮೆಟ್ರಿಕ್ ಟನ್ ಪ್ರಮಾಣದಷ್ಟು ತೊಗರಿಯನ್ನು ರೈತರು ನೋಂದಣಿ ಮಾಡಿಸಿಕೊಂಡಿದ್ದು, ಇನ್ನೂ ಸುಮಾರು 93 ಸಾವಿರ ಮೆಟ್ರಿಕ್‌ ಟನ್‌ ಖರೀದಿ ಮಾಡಬೇಕಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಕೇಂದ್ರ ಸರಕಾರ ಪ್ರತಿ ಟನ್‌ಗೆ ರೂ 7,550 ನಿಗದಿಪಡಿಸಿದ್ದು, ಈ ಬೆಲೆ ಕಡಿಮೆಯಾಗಿದ್ದು, ಹೆಚ್ಚಳ ಮಾಡಬೇಕು ಎಂದು ರೈತರು ಬೇಡಿಕೆ ಇಟ್ಟಿದ್ದರು. ರೈತರ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಪ್ರೋತ್ಸಾಹ ಧನ ಘೋಷಣೆ ಮಾಡಲು ಮನವಿ ಮಾಡಿದಾಗ ಬೇಡಿಕೆಗೆ ಸ್ಪಂದಿಸಿ ಪ್ರತಿ ಕ್ವಿಂಟಾಲ್‌ಗೆ ರೂ 450 ಪ್ರೋತ್ಸಾಹ ಧನ ಘೋಷಣೆ ಮಾಡಿದ್ದು, ಒಟ್ಟು ಪ್ರತಿ ಕ್ವಿಂಟಾಲ್‌ಗೆ ರೂ 8000ಗಳಂತೆ ಖರೀದಿ ಮಾಡಲಾಗುತ್ತಿದೆ. ರೈತರು ಈ ಅವಕಾಶ ಬಳಕೆ ಮಾಡಿಕೊಂಡು ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ತೊಗರಿ ಮಾರಾಟ ಮಾಡಬಹುದು ಎಂದು ಸಚಿವ ಶಿವಾನಂದ ಪಾಟೀಲ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News