ಬೆಂಗಳೂರು : ‘ರಾಜ್ಯದಲ್ಲಿನ ಲಕ್ಷಾಂತರ ಜನರು ಪ್ರತಿದಿನ ಹೊಟೇಲ್ ಆಹಾರವನ್ನು ನೆಚ್ಚಿಕೊಂಡಿದ್ದಾರೆ. ಸಾರ್ವಜನಿಕರ ಆರೋಗ್ಯಕ್ಕೆ ಹಾನಿಯಾಗದಂತೆ ಸ್ಟಾರ್ ಹೊಟೇಲ್‍ಗಳಿಂದ ಹಿಡಿದು ಸಣ್ಣ ಉಪಹಾರ ಗೃಹಗಳ ವರೆಗೆ ಎಲ್ಲಹಂತದಲ್ಲೂ ನೈರ್ಮಲ್ಯ ಮತ್ತು ಕಟ್ಟುನಿಟ್ಟಿನ ಆಹಾರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಹೊಟೇಲ್ ಮಾಲಕರು ಕೇವಲ ಲಾಭದ ಉದ್ದೇಶದಿಂದ ಕಾರ್ಯ ನಿರ್ವಹಿಸದೆ ಸಮಾಜಮುಖಿ ಕಾಳಜಿ ಮತ್ತು ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸಬೇಕು’ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಎಚ್ಚರಿಸಿದ್ದಾರೆ.
ಶುಕ್ರವಾರ ಆರೋಗ್ಯಸೌಧದಲ್ಲಿ ಒಂದು ತಿಂಗಳಿನಿಂದ ರಾಜ್ಯಾದ್ಯಂತ ಆಹಾರ ಸುರಕ್ಷತಾ ಅಧಿಕಾರಿಗಳು ವಿವಿಧ ಹೊಟೇಲ್ ಮತ್ತು ಉಪಹಾರ ಗೃಹಗಳಲ್ಲಿ ಗಂಭೀರ ತಪಾಸಣೆ ನಡೆಸಿದ್ದು ಹಲವು ನೂನ್ಯತೆಗಳು ಹಾಗೂ ಲೋಪ-ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ, ರಾಜ್ಯ ಹೊಟೇಲ್ ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ಪ್ರಮುಖ ಹೊಟೇಲ್ ಮಾಲಕರೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅವರು ಕಟ್ಟುನಿಟ್ಟಿನ ಸೂಚನೆಗಳು ನೀಡಿದರು.
ಪ್ರತಿಯೊಂದು ಹೊಟೇಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಕಡ್ಡಾಯವಾಗಿ ವೈಜ್ಞಾನಿಕ ದಾಸ್ತಾನು ಕೊಠಡಿ ಹೊಂದಿರಬೇಕು. ಹೋಟೆಲ್‍ಗಳ ಅಡುಗೆ ಮನೆ(ಕಿಚನ್)ಗಳು ಸಿಸಿ ಟಿವಿ ಕ್ಯಾಮರಾಗಳ ಕಣ್ಗಾವಲಿನಲ್ಲಿ ಇರಿಸುವ ಮೂಲಕ ಗ್ರಾಹಕರೊಂದಿಗಿನ ವಿಶ್ವಾಸವನ್ನು ವೃದ್ಧಿಸಿಕೊಳ್ಳಲು ಮುಂದಾಗಬೇಕು. ಅಡುಗೆ ಮನೆಗಳು ಸಂಪೂರ್ಣ ಪಾರದರ್ಶಕ, ಸ್ವಚ್ಛ ಹಾಗೂ ನೈರ್ಮಲ್ಯದಿಂದ ಕೂಡಿರಬೇಕು. ಬಳಸುವ ಪ್ರತಿಯೊಂದು ಆಹಾರ ಪದಾರ್ಥಗಳ ಮೇಲೆ ಉತ್ಪಾದನಾ ದಿನಾಂಕ ಮತ್ತು ಕಾಲಾವಧಿ ಮುಕ್ತಾಯ ದಿನಾಂಕ ಕಡ್ಡಾಯವಾಗಿ ನಮೂದಿಸಿರಬೇಕು ಎಂದು ಅವರು ಸೂಚಿಸಿದರು.
ಆಹಾರ ತಯಾರಿಕಾ ಸಂದರ್ಭದಲ್ಲಿ ಬಳಸುವ ರಾಸಾಯನಿಕ ಅಂಶಗಳಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿರುವುದರಿಂದ, ಆಹಾರ ತಯಾರಿಕೆಗೆ ಬಳಸುವ ಪ್ರತಿ ಸಾಮಗ್ರಿಗಳು ಉನ್ನತ ಗುಣಮಟ್ಟದಿಂದ ಕೂಡಿರಬೇಕು, ರಾಸಾಯನಿಕಗಳ ಬಳಕೆಯನ್ನು ನಿರ್ಬಂಧಿಸಬೇಕು ಮತ್ತು ಅದನ್ನು ಖಾತ್ರಿಪಡಿಸಬೇಕು ಎಂದು ಖಾದರ್ ಸೂಚಿಸಿದರು.
ಹೊಟೇಲ್ ಸಿಬ್ಬಂದಿಗೆ ಸೂಕ್ತ ತರಬೇತಿ ಮತ್ತು 'Do's and Don'ts' ತರಬೇತಿಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಆಹಾರ ತಯಾರಿಕ ಸಾಮಗ್ರಿಗಳ ಸರಬರಾಜಿನಲ್ಲಿ, ಕಚ್ಚಾ ಸಾಮಗ್ರಿಗಳಲ್ಲಿ ಕಲಬೆರಕೆ ಅಥವಾ ಕಳಪೆ ಗುಣಮಟ್ಟ ಕಂಡುಬಂದಲ್ಲಿ ಸಾರ್ವಜನಿಕರು ಹಾಗೂ ಹೊಟೇಲ್ ಮಾಲಕರು ನೇರವಾಗಿ ಅಧಿಕಾರಿಗಳಿಗೆ ಅಥವಾ ಇಲಾಖೆಗೆ ದೂರು ನೀಡಬಹುದು. ಹೊಟೇಲ್ ರಂಗದ ಸಮಸ್ಯೆಗಳನ್ನು ಆಲಿಸಲು ಮತ್ತು ಅವರಿಗೆ ಮಾರ್ಗದರ್ಶನ ನೀಡಲು ಸರಕಾರ ಬದ್ಧವಾಗಿದೆ. ಆದರೆ, ಸ್ವಚ್ಛತೆ, ನೈರ್ಮಲ್ಯ ಹಾಗೂ ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಹೊಟೇಲ್ ಉದ್ಯಮಿಗಳು, ಹೊಟೇಲ್ ಅಸೋಸಿಯೇಷನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.