ಮನೆ-ಮನೆ ಸಮೀಕ್ಷೆ ಮೂಲಕ ‘ಗೃಹಲಕ್ಷ್ಮಿ’ ಫಲಾನುಭವಿಗಳ ಅರ್ಜಿ ಮರುಪರಿಶೀಲನೆ
ಬೆಂಗಳೂರು : ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಅರ್ಜಿ ಮರುಪರಿಶೀಲನೆಗೆ ಸೇವಾ ಸಿಂಧು ಕೇಂದ್ರಗಳು ಹಾಗೂ ಮನೆ-ಮನೆ ಸಮೀಕ್ಷೆಯ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಮರುಪರಿಶೀಲನೆ ಪ್ರಕ್ರಿಯೆಯಲ್ಲಿ ಫಲಾನುಭವಿಗಳ ಬಯೊಮೆಟ್ರಿಕ್/ಫೇಸ್ ಆಥೆಂಟಿಕೇಶನ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದೇ ಉದ್ದೇಶಕ್ಕಾಗಿ ಇ-ಡಿಸಿಎಸ್ ಮೂಲಕ ಮೊಬೈಲ್ ಆಪ್ ಹಾಗೂ ವೆಬ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದ್ದು, ಅಂತಿಮ ಪರಿಶೀಲನಾ ಹಂತದಲ್ಲಿದೆ ಎಂದು ದಿನೇಶ್ ಗೂಳಿಗೌಡ ಕೇಳಿದ ಪ್ರಶ್ನೆಗೆ ಸಿಎಂ ಸ್ಪಷ್ಟಣೆ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ರಾಜ್ಯ ಸರಕಾರ ಇದುವರೆಗೂ 76,951 ಕೋಟಿ ರೂ.ಪಾವತಿಸಿದೆ. ಯೋಜನೆಯಡಿ ಒಟ್ಟು 1,24,48,938 ಫಲಾನುಭವಿಗಳಿದ್ದಾರೆ. ಪ್ರತಿಮನೆಯ ಯಜಮಾನಿಗೆ ಇದುವರೆಗೂ 32ಕಂತುಗಳಲ್ಲಿ ತಲಾ 2ಸಾವಿರ ರೂ.ಗಳನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದು ಅವರು ಉತ್ತರದಲ್ಲಿ ತಿಳಿಸಿದ್ದಾರೆ.
ಯೋಜನೆ ಆರಂಭವಾದಾಗಿನಿಂದ ಜೂನ್-2026ರ ಅಂತ್ಯದ ವರೆಗೆ ಒಟ್ಟು 3,13,297 ಫಲಾನುಭವಿಗಳು ಮರಣ ಹೊಂದಿದ್ದಾರೆ. ಈ ಪೈಕಿ 1,10,562 ಫಲಾನುಭವಿಗಳ ಖಾತೆಗೆ ಮರಣಾ ನಂತರವೂ 117.31 ಕೋಟಿ ರೂ.ಹಣ ಜಮೆಯಾಗಿದ್ದು, ಈ ಪೈಕಿ ಈವರೆಗೆ 40.07ಕೋಟಿ ರೂ.ಹಣ ಮಾತ್ರ ಸರಕಾರದ ಲೆಕ್ಕ ಶೀರ್ಷಿಕೆಗೆ ಮರುಜಮೆಯಾಗಿದೆ ಎಂದು ಅವರು ವಿವರ ನೀಡಿದ್ದಾರೆ.
ದುರುಪಯೋಗ ತಡೆಯಲು ಮರುಪರಿಶೀಲನೆ: ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿತರಲ್ಲಿ 3,13,297ಫಲಾನುಭವಿಗಳು ಮೃತಪಟ್ಟಿದ್ದಾರೆ. ಅವರ ಖಾತೆಗೆ 117.31ಕೋಟಿ ರೂ.ಹಣ ಜಮೆಯಾಗಿದೆ. ಅರ್ಹ ಫಲಾನುಭವಿಗಳಿಗೆ ತಲುಪಬೇಕಿದ್ದ ಹಣ ದುರುಪಯೋಗ ಆಗಿತ್ತಿರುವುದು ಸರಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು ಯೋಜನೆ ಮರುಪರಿಶೀಲನೆ ನಡೆಸಿ ಅರ್ಹರಿಗೆ ಯೋಜನೆಯ ಸದುಪಯೋಗ ಆಗಬೇಕೆಂದು ಹೇಳಿದ್ದಾರೆ ಎಂದು ಗೂಳಿಗೌಡ ಹೇಳಿದ್ದಾರೆ.
ಮರಣ ಹೊಂದಿದ ಫಲಾನುಭವಿಯ ಪರ್ಯಾಯವಾಗಿ ಕುಟುಂಬದ ಇತರ ಸದಸ್ಯರನ್ನು ಫಲಾನುಭವಿಯಾಗಿ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಅತಿಹೆಚ್ಚು (24,705) ಫಲಾನುಭವಿಗಳು ಮೃತಪಟ್ಟಿದ್ದರೆ, ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ (2,991)ಫಲಾನುಭವಿಗಳು ಮೃತಪಟ್ಟಿದ್ದಾರೆ. ಮೃತರ ಖಾತೆಗೆ ಜಮೆಯಾಗಿದ್ದ ಹಣ ವಾಪಸ್ ಪಡೆಯುವ ಪ್ರಕ್ರಿಯೆ ಜಿಲ್ಲಾವಾರು ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.