‘ಆಶಾ ಕಾರ್ಯಕರ್ತೆಯರು ಇಲ್ಲದಿದ್ದರೂ ಆರೋಗ್ಯ ವ್ಯವಸ್ಥೆ ನಡೆಯುತ್ತದೆ’ : ಸಚಿವ ಯು.ಟಿ.ಖಾದರ್
ಬೆಂಗಳೂರು : ಆಶಾ ಕಾರ್ಯಕರ್ತೆಯರು ಹತ್ತು ದಿನಗಳಿಂದ ಕೆಲಸ ಮಾಡದಿದ್ದರೂ ಹೆರಿಗೆ ಸೇರಿದಂತೆ ಆರೋಗ್ಯ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ವೈದ್ಯರು, ದಾದಿಯರು, ಎಎನ್ಎಂಗಳು, ಸಿಎಚ್ಒಗಳು ಸೇರಿದಂತೆ ಇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರಿಲ್ಲದಿದ್ದರೂ ಆರೋಗ್ಯ ಸೇವೆಗಳು ಮುಂದುವರಿಯುತ್ತವೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ 10ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂಬಂಧ ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರು ಕೇಂದ್ರ ಸರಕಾರದಿಂದ ನೇಮಕಗೊಂಡವರಾಗಿದ್ದು, ರಾಜ್ಯ ಸರಕಾರದಿಂದ ನೇಮಕಗೊಂಡವರಲ್ಲ. ಕೇಂದ್ರ ಸರಕಾರ ಅನುದಾನ ನೀಡುವುದಾಗಿ ಹೇಳಿದ್ದರೂ ಈವರೆಗೆ ಬಿಡುಗಡೆ ಮಾಡಿಲ್ಲ. ಆದರೂ ಅವರು ನಮ್ಮವರೇ ಆಗಿದ್ದು, ನಮ್ಮೊಂದಿಗೆ ಕೆಲಸ ಮಾಡುವವರು. ಹೀಗಾಗಿ ಅವರ ಬಗ್ಗೆ ಸಹಾನುಭೂತಿ ಮತ್ತು ಕಾಳಜಿ ಇದೆ ಎಂದರು.
ರಾಜ್ಯ ಸರಕಾರ ಆಶಾ ಕಾರ್ಯಕರ್ತೆಯರಿಗೆ ಪ್ರತ್ಯೇಕವಾಗಿ 5 ಸಾವಿರ ರೂ. ನೀಡುತ್ತಿದೆ. ಕೇಂದ್ರದಿಂದ 7 ಸಾವಿರದಿಂದ 8 ಸಾವಿರ ರೂ. ದೊರೆಯುತ್ತಿದೆ. ಕೆಲಸ ಮಾಡಿದರೂ, ಮಾಡದಿದ್ದರೂ ಈ ಹಣ ಸಿಗುತ್ತದೆ. ಇಂತಹ ಸಂದರ್ಭದಲ್ಲಿ 15 ಸಾವಿರ ರೂ. ಗೌರವಧನ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಸುಮಾರು 42 ಸಾವಿರ ಕಾರ್ಯಕರ್ತೆಯರಿಗೆ ಏಕಾಏಕಿ 15 ಸಾವಿರ ರೂ. ನೀಡುವುದು ಸರಕಾರಕ್ಕೆ ಸುಲಭದ ವಿಚಾರವಲ್ಲ. ಈ ಬಗ್ಗೆ ಆರ್ಥಿಕ ಇಲಾಖೆ, ಶಾಸಕರು ಮತ್ತು ಸಚಿವ ಸಂಪುಟದೊಂದಿಗೆ ಚರ್ಚಿಸಬೇಕಾಗುತ್ತದೆ ಎಂದು ಖಾದರ್ ತಿಳಿಸಿದರು.
ಅಕ್ಷರ ದಾಸೋಹ ನೌಕರರು 4 ಸಾವಿರ ರೂ., ಶಿಕ್ಷಕರು 12 ಸಾವಿರ ರೂ. ಹಾಗೂ ಕೆಲವು ಕಡೆ ದಾದಿಯರು 10 ಸಾವಿರ ರೂ.ಗೆ ಕೆಲಸ ಮಾಡುತ್ತಿದ್ದಾರೆ. ವಿವಿಧ ಇಲಾಖೆಗಳಲ್ಲಿನ ಇಂತಹ ವಿಚಾರಗಳನ್ನೂ ಸರಕಾರ ಪರಿಗಣಿಸಬೇಕಾಗುತ್ತದೆ. ಮುಖ್ಯಮಂತ್ರಿ ಈಗಾಗಲೇ ಆಶಾ ಕಾರ್ಯಕರ್ತೆಯರೊಂದಿಗೆ ಚರ್ಚಿಸಿ, ವಿಧಾನಸಭೆ ಅಧಿವೇಶನ ಮುಗಿಯುವ ವೇಳೆಗೆ ಯಾವುದಾದರೂ ತೀರ್ಮಾನಕ್ಕೆ ಬರುವುದಾಗಿ ಹೇಳಿದ್ದಾರೆ. ಸರಕಾರಕ್ಕೆ ಸ್ವಲ್ಪ ಸಮಯ ನೀಡಬೇಕು ಎಂದು ಅವರು ಹೇಳಿದರು.
ತಮಿಳುನಾಡಿನಲ್ಲಿಯೂ ಆಶಾ ಕಾರ್ಯಕರ್ತೆಯರ ವ್ಯವಸ್ಥೆ ಇಲ್ಲದಿದ್ದರೂ ಅಲ್ಲಿನ ಆರೋಗ್ಯ ಸೂಚ್ಯಂಕಗಳು ಉತ್ತಮವಾಗಿವೆ. ಸರಕಾರದ ಮೇಲೆ ವಿಶ್ವಾಸವಿಡದೆ ಪ್ರತಿಭಟನೆ ಮುಂದುವರಿಸುವುದು ಸರಿಯಲ್ಲ. ಮುಖ್ಯಮಂತ್ರಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದಾಗ ಅದಕ್ಕೆ ಗೌರವ ನೀಡಬೇಕು. ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಹಿಂಪಡೆದು ಕೆಲಸಕ್ಕೆ ಮರಳಿದರೆ ಅವರ ಬೇಡಿಕೆಗಳ ಬಗ್ಗೆ ಸರಕಾರವೂ ಚಿಂತಿಸಿ ಸಹಕಾರ ನೀಡಲಿದೆ. ನಮ್ಮ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿದರೆ ಅವರ ಬಗ್ಗೆ ನಾವು ಯಾಕೆ ಕಾಳಜಿ ವಹಿಸಬೇಕು ಎಂಬ ಬೇಸರವಿದೆ ಎಂದು ಖಾದರ್ ತಿಳಿಸಿದರು.