×
Ad

ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಹಗರಣ ನಡೆದಿದೆ ಎಂಬ ಬಿಜೆಪಿಗರ ಹೇಳಿಕೆ ಸತ್ಯಕ್ಕೆ ದೂರ : ಎಂ.ಲಕ್ಷ್ಮಣ್

Update: 2025-05-27 20:24 IST

ಎಂ.ಲಕ್ಷ್ಮಣ್

ಬೆಂಗಳೂರು : ಸ್ಮಾರ್ಟ್ ಮೀಟರ್ ಯೋಜನೆಯಲ್ಲಿ ಹಗರಣ ನಡೆದಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಸತ್ಯಕ್ಕೆ ದೂರ. ಇದು ಕೇಂದ್ರ ಸರಕಾರದ ನಿಯಂತ್ರಣದಲ್ಲಿದ್ದು, ಎಲ್ಲವೂ ಅವರ ಆದೇಶದಂತೆ ನಡೆಯುತ್ತದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದ್ದಾರೆ.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಗರ ಸುಳ್ಳು ಆರೋಪಗಳಿಗೆ ಕಿವಿಗೊಡದೇ ರಾಜ್ಯದಲ್ಲಿ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಸಲು ಸರಕಾರಕ್ಕೆ ಮನವಿ ಮಾಡುತ್ತೇವೆ. ಈಗ ತಾತ್ಕಾಲಿಕ ಹಾಗೂ ಹೊಸ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿ, ಉಳಿದವರು ಸ್ಮಾರ್ಟ್ ಮೀಟರ್ ಅಳವಡಿಕೆಗೆ ಬಯಸಿದರೆ ಅವಕಾಶ ಮಾಡಿಕೊಡಬೇಕು. ಪಾರದರ್ಶಕವಾಗಿ ನಾವು ಯೋಜನೆ ಜಾರಿ ಮಾಡುತ್ತೇವೆ ಎಂದರು.

ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ 15 ಸಾವಿರ ಕೋಟಿ ಹಗರಣ ಎಂದು ಬಿಜೆಪಿಯ ಅಶ್ವತ್ಥ್ ನಾರಾಯಣ ಹೇಳುತ್ತಿದ್ದಾರೆ. ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿ ಆರ್‍ಡಿಎಸ್‍ಎಸ್ ಎಂಬ ವಿಭಾಗದಲ್ಲಿ ಎಲ್ಲಾ ಎಲೆಕ್ಟ್ರಿಕ್ ಕಂಪೆನಿಗಳು ನೋಂದಣಿ ಮಾಡಿಕೊಳ್ಳಬೇಕು. ಈ ಆರ್‍ಡಿಎಸ್‍ಎಸ್ ವ್ಯಾಪ್ತಿಯಲ್ಲಿ ಕರ್ನಾಟಕ ಹೊರತಾಗಿ ದೇಶದ ಎಲ್ಲಾ ರಾಜ್ಯಗಳು ಬರುತ್ತವೆ. ಇದಕ್ಕೆ ಕಾರಣ ಏನು ಎಂಬುದನ್ನು ಈ ಹಿಂದಿನ ಬಿಜೆಪಿ ಸರಕಾರಕ್ಕೆ ಕೇಳಬೇಕು ಎಂದು ಎಂ.ಲಕ್ಷ್ಮಣ್ ತಿಳಿಸಿದರು.

ಬಿಜೆಪಿಯ ಅಶ್ವತ್ಥ್ ನಾರಾಯಣ ಅವರು ಅಪ್ರಬುದ್ಧವಾಗಿ ಮಾತನಾಡುತ್ತಿದ್ದಾರೆ. ಅವರು ನೆತ್ತಿ ಮೇಲೆ ಹೊಡೆದಂತೆ ಸುಳ್ಳು ಹೇಳುತ್ತಿದ್ದಾರೆ. ಅವರ ಪ್ರಕಾರ 900 ರೂಪಾಯಿಗೆ ಮೀಟರ್ ಸಿಗುತ್ತದಂತೆ. ಈ 900 ರೂಪಾಯಿಗೆ ಸ್ಮಾರ್ಟ್ ಮೀಟರ್ ಎಲ್ಲಿ ಸಿಗುತ್ತದೆ, ಇದನ್ನು ಪೂರೈಸುವ ಗುತ್ತಿಗೆದಾರರು ಯಾರು ಎಂದು ಅಶ್ವತ್ಥ್ ನಾರಾಯಣ ಹೇಳಬೇಕು. ಲಿಖಿತ ರೂಪದಲ್ಲಿ ಅವರ ಮಾಹಿತಿಯನ್ನು ಕೊಟ್ಟರೆ ನಾನೇ ಅಶ್ವತ್ಥ್ ನಾರಾಯಣರನ್ನು ಸಿಎಂ ಮುಂದೆ ನಿಲ್ಲಿಸಿ ಅವರಿಂದಲೇ ಯೋಜನೆ ಜಾರಿಗೊಳಿಸೋಣವೆಂದು ಹೇಳುತ್ತೇನೆ ಎಂದು ಎಂ.ಲಕ್ಷ್ಮಣ್ ಹೇಳಿದರು.

ಯಾವುದೇ ಒಳ್ಳೆಯ ಕೆಲಸಗಳನ್ನು ಮಾಡಲು ಬಿಜೆಪಿಗರು ಬಿಡುತ್ತಿಲ್ಲ. ಸ್ಟೀಲ್ ಬ್ರಿಡ್ಜ್ ಮಾಡಲು ಮುಂದಾದಾಗ ಅದಕ್ಕೆ ಕಲ್ಲು ಹಾಕಿದರು. ಮಾನ ಮರ್ಯಾದೆ ಇದ್ದರೆ ಕೇಂದ್ರ ಸರಕಾರಕ್ಕೆ ರಾಜ್ಯ ಬಿಜೆಪಿ ನಾಯಕರು ಪತ್ರ ಬರೆದು ನಮ್ಮ ರಾಜ್ಯಕ್ಕೆ ಸ್ಮಾರ್ಟ್ ಮೀಟರ್ ಯೋಜನೆ ಬೇಡ ಎಂದು ಹೇಳಲಿ. ಅಲ್ಲಿಂದಲೇ ಯೋಜನೆ ನಿಲ್ಲಿಸಲಿ. ಬೇರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಹೆಚ್ಚು ವೆಚ್ಚ ನಿಗದಿ ಮಾಡಲಾಗಿದೆ ಎಂದು ಅಶ್ವತ್ಥ್ ನಾರಾಯಣ ಆರೋಪ ಮಾಡುತ್ತಿದ್ದಾರೆ. ನಮ್ಮ ರಾಜ್ಯಕ್ಕಿಂತ ಯಾವ ರಾಜ್ಯಗಳಲ್ಲಿ ಕಡಿಮೆ ದರ ನಿಗದಿ ಮಾಡಿದ್ದಾರೆ ಎಂದು ಅವರೇ ಹೇಳಲಿ ಎಂದು ಎಂ.ಲಕ್ಷ್ಮಣ್ ಸವಾಲು ಹಾಕಿದರು.

ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಮಾತನಾಡಿ, ಕರ್ನಾಟಕದ ನವರಂಗಿ ನಾಟಕಕಾರ ಡಾ.ಅಶ್ವತ್ಥ್ ನಾರಾಯಣ ಅವರು ಇಂಧನ ಸಚಿವಾಲಯದ ಮೇಲೆ ಮಾಡಿರುವ ಆರೋಪವನ್ನು ಎರಡು ದೃಷ್ಟಿಕೋನಗಳಲ್ಲಿ ನೋಡಬೇಕಾಗಿದೆ. ರಾಜ್ಯದಲ್ಲಿ ಬೇನಾಮಿ ವ್ಯವಹಾರಗಳಿಗೆ ಖ್ಯಾತಿ ಪಡೆದಿರುವ ಅಶ್ವತ್ಥ್ ನಾರಾಯಣ ಅವರು ಟೆಂಡರ್ ಪಡೆಯಲು ಪ್ರಯತ್ನಿಸಿದ್ದರಾ? ಅದು ಸಿಗದ ಕಾರಣಕ್ಕೆ ಆರೋಪ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಇದೆ ಎಂದರು.

ಅಲ್ಪಸಂಖ್ಯಾತ ಸಮುದಾಯದ ನಾಯಕ ಕೆ.ಜೆ.ಜಾರ್ಜ್ ಅವರ ಮೇಲೆ ಬಿಜೆಪಿ ನಾಯಕರು ನಿರಂತರವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಲು ಕೇಂದ್ರ ಸರಕಾರ ಡಿಜಿಟಲ್ ಇಂಡಿಯಾಗೆ ಪೂರಕವಾಗಿ ತೆಗೆದುಕೊಂಡಿರುವ ತೀರ್ಮಾನವೇ ಹೊರತು, ರಾಜ್ಯ ಸರಕಾರದ ತೀರ್ಮಾನವಲ್ಲ. ರಾಜ್ಯ ಇಂಧನ ಸಚಿವಾಲಯದ ಅನೇಕ ಯೋಜನೆಗಳನ್ನು ಕೇಂದ್ರ ಸರಕಾರವೇ ಶ್ಲಾಘಿಸಿರುವ ಅನೇಕ ಉದಾಹರಣೆಗಳಿವೆ ಎಂದು ರಮೇಶ್ ಬಾಬು ತಿಳಿಸಿದರು.

ಬಿಜೆಪಿ ಸರಕಾರದ ಅವಧಿಯಲ್ಲಿ ಆಂಬುಲೆನ್ಸ್‌ ನಲ್ಲಿ ನಡೆದ ಅವ್ಯವಹಾರ ಬಗ್ಗೆ ಅಶ್ವಥ್ ನಾರಾಯಣ ಅವರೇ ಹೇಳಬೇಕು. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟು ನೋಡಿಕೊಳ್ಳುವ, ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂಬ ಗಾದೆ ಅಶ್ವತ್ಥ್ ನಾರಾಯಣ ಅವರಿಗೆ ಸೂಕ್ತವಾಗುತ್ತದೆ. ಸ್ಮಾರ್ಟ್ ಮೀಟರ್ ವಿಚಾರವಾಗಿ ಕೇಂದ್ರ ಸರಕಾರ ಕೆಲವು ಆದೇಶ ನೀಡಿದ್ದು ಅದರಂತೆ ರಾಜ್ಯ ಸರಕಾರ ತೀರ್ಮಾನ ಮಾಡಿದೆ ಎಂದು ರಮೇಶ್ ಬಾಬು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಹಾಗೂ ಮಾಧ್ಯಮ ಕಾರ್ಯದರ್ಶಿ ದೀಪಕ್ ತಿಮ್ಮಯ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News