ಸಹಕಾರ ಕ್ಷೇತ್ರದಲ್ಲಿ ಎಸ್.ಸಿ, ಎಸ್.ಟಿ ಸಮುದಾಯದ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಎಂಎಲ್ಸಿ ಕೆ. ಶಿವಕುಮಾರ್ ಒತ್ತಾಯ
ಎಂಎಲ್ಸಿ ಕೆ. ಶಿವಕುಮಾರ್
ಬೆಂಗಳೂರು: ಶತಮಾನಗಳ ಇತಿಹಾಸವುಳ್ಳ ಸಹಕಾರ ಕ್ಷೇತ್ರದಲ್ಲಿ ಎಸ್.ಸಿ, ಎಸ್.ಟಿ ಸಮುದಾಯದ ಪಾಲ್ಗೊಳ್ಳುವಿಕೆ ಇಲ್ಲವಾಗಿದ್ದು, ಈ ಸಮುದಾಯಗಳ ಪಾಲ್ಗೊಳ್ಳುವಿಕೆ ಹೆಚ್ಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಶಿವಕುಮಾರ್ ಅವರು ಒತ್ತಾಯಿಸಿದರು.
ಬುಧವಾರ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಡಿಸಿಸಿ ಹಾಗೂ ಪಿಕಾರ್ಡ್ ಸೇರಿದಂತೆ ಇನ್ನಿತರ ಬ್ಯಾಂಕ್ ಗಳಲ್ಲಿ ಎಸ್.ಸಿ, ಎಸ್.ಟಿ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಹೆಚ್ಚಿನ ಸಾಲ ವಿತರಣೆ ಹಾಗೂ ನೇಮಕಾತಿ ಮಾಡಿಕೊಳ್ಳಬೇಕು ಎಂದು ಸರ್ಕಾಕ್ಕೆ ಮನವಿ ಮಾಡಿದರು.
ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಜಾರಿ ಮಾಡಿದ್ದರೂ ಎಸ್.ಸಿ, ಎಸ್.ಟಿ ಸಮುದಾಯದ ಜನರಿಗೆ ಸದಸ್ಯತ್ವ ನಿರಾಕರಣೆ ಮಾಡಲಾಗುತ್ತಿದೆ. ಸಮುದಾಯದ ಜನರು ಹಾಗೂ ಅವರು ಹೊಂದಿರುವ ಭೂಮಿಗೆ ಅನುಗುಣವಾಗಿ ಸದಸ್ಯತ್ವ ಇಲ್ಲ. ಹೀಗಾಗಿ ಎಸ್ ಸಿಎಎಸ್ ಪಿ ಮತ್ತು ಟಿಎಸ್ ಪಿ ಅನುದಾನವನ್ನು ಬಳಸಿಕೊಂಡು ಭೂಮಿ ಹೊಂದಿರುವ ರೈತರ ಸದಸ್ಯತ್ವವನ್ನು ಹೆಚ್ಚಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿರುವ 11357 ಸಹಕಾರಿ ಸಂಘಗಳಲ್ಲಿ ಎಸ್.ಸಿ, ಎಸ್.ಟಿ ಸಮುದಾಯದ ರೈತರಿಗೆ ಮೀಸಲಾತಿಗೆ ಅನುಗುಣವಾಗಿ 5,980 ಕೋಟಿ ರೂ. ಸಾಲ ನೀಡಬೇಕಿತ್ತು, ಆದರೆ 3,094 ಕೋಟಿ ರೂ. ಮಾತ್ರ ನೀಡಲಾಗಿದೆ. ಸರ್ಕಾರದ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೋಲಾರದ ಜಿಲ್ಲಾ ಸಹಕಾರ ಬ್ಯಾಂಕಿನಲ್ಲಿ ನೂರಾರು ಕೋಟಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಎಲ್ಲರನ್ನೂ ಒಳಗೊಳ್ಳಬೇಕು ಎಂಬುದು ಸಂವಿಧಾನದ ಆಶಯ ಹಾಗೂ ಸರ್ಕಾರದ ಉದ್ದೇಶವಾಗಿದೆ. ಕಳೆದ 75 ವರ್ಷಗಳಿಂದ ಈ ಸಮುದಾಯಗಳು ಸಹಕಾರಿ ಕ್ಷೇತ್ರದಿಂದ ಹೊರಗಿದ್ದಾರೆ ಎಂದು ಹೇಳಿದರು.
ಹೊಸದಾಗಿ ಶೇ.20 ರಷ್ಟು ನೀಡುವ ಹೊಸ ಸಾಲವನ್ನು ಕೂಡ ನೀಡುತ್ತಿಲ್ಲ. ಎಸ್.ಸಿ, ಎಸ್.ಟಿ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯದ ಜನರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಸರ್ಕಾರವೇ ಸೊಸೈಟಿ ಸ್ಥಾಪಿಸಿ ಪ್ರಿನ್ಸಿಪಾಲ್ ಹಣವನ್ನು ಕೋಡಬೇಕು ಎಂದರು.
ಸಾಲ ತೀರಿಸುವ ಸಾಮಾರ್ಥ್ಯವಿಲ್ಲದೆ ಬಾಕಿ ಉಳಿಸಿಕೊಳ್ಳುತ್ತಾರೆ ಎಂಬ ನಿರ್ಧಾರಕ್ಕೆ ಬರಬಾರದು. ಊಟವನ್ನೇ ನೀಡದೆ ಅಜೀರ್ಣವಾಗುತ್ತದೆ ಎಂಬುದು ತಪ್ಪು ಪರಿಕಲ್ಪನೆಯಾಗಿದೆ ಎಂದು ಹೇಳಿದರು.
ಈ ಕುರಿತು ಸಹಕಾರ ಸಚಿವರಾದ ಲಕ್ಷಣ ಸವದಿ ಅವರು ಪ್ರತಿಕ್ರಿಯಿಸಿ, ನಿಯಾಮನುಸಾರ ಕ್ರಮಕೈಗೊಂಡು ಸಹಕಾರ ಕ್ಷೇತ್ರದಲ್ಲಿ ಎಸ್.ಸಿ, ಎಸ್.ಟಿ. ಸಮುದಾಯದ ಸದಸ್ಯತ್ವ ಹಾಗೂ ಸಾಲ ವಿತರಣೆ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.