×
Ad

ವಿಶ್ವಗುರು ಮಾತಿನಲ್ಲಿ, ನಡೆಗಳಲ್ಲಿ ಪರಾಧೀನತೆ : ಪ್ರಧಾನಿ ಮೋದಿ ವಿರುದ್ಧ ಬಿ.ಕೆ.ಹರಿಪ್ರಸಾದ್‌ ಟೀಕೆ

"ಅಮೆರಿಕಾದ ʼ30 ದಿನಗಳ ವಿನಾಯಿತಿʼ ಹೇಳಿಕೆಯು ಭಾರತದ ವಿದೇಶಾಂಗ ಗೌರವಕ್ಕೆ ಬಿದ್ದಿರುವ ಅಪಮಾನಕರ ಹೊಡೆತ"

Update: 2026-03-07 14:45 IST

ಬಿ.ಕೆ.ಹರಿಪ್ರಸಾದ್‌/ನರೇಂದ್ರ ಮೋದಿ(PTI) 

ಬೆಂಗಳೂರು : ʼಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು “30 ದಿನಗಳ ವಿನಾಯಿತಿ” ನೀಡಲಾಗಿದೆ ಎಂದು ಅಮೆರಿಕಾದ ಸಚಿವರು ಬಹಿರಂಗವಾಗಿ ಹೇಳಿರುವುದು, ಸ್ವತಂತ್ರ ಭಾರತದ ವಿದೇಶಾಂಗ ಗೌರವಕ್ಕೆ ಬಿದ್ದಿರುವ ಅಪಮಾನಕರ ಹೊಡೆತʼ ಎಂದು ಕಾಂಗ್ರೆಸ್‌ ನಾಯಕ ಬಿ.ಕೆ.ಹರಿಪ್ರಸಾದ್‌ ಹೇಳಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ಭಾರತವು ರಷ್ಯಾದಿಂದ ತೈಲ ಖರೀದಿಸಲು ಅಮೆರಿಕಾದ ಒಪ್ಪಿಗೆ ಪಡೆಯುವುದು ಹಾಗೂ ವಿನಾಯಿತಿ ನೀಡುವುದು ಸಾರ್ವಭೌಮ ರಾಷ್ಟ್ರದ ಘನತೆಯನ್ನು ಗುಲಾಮಗಿರಿ ವ್ಯವಸ್ಥೆಗೆ ವಿಶ್ವಗುರು ತಳ್ಳಿರುವ ನಿದರ್ಶನಕ್ಕೆ ಸಾಕ್ಷಿ. ಒಂದು ಸಾರ್ವಭೌಮ ರಾಷ್ಟ್ರ ತನ್ನ ಇಂಧನ ಅವಶ್ಯಕತೆಗಳನ್ನು ಯಾವ ದೇಶದಿಂದ ಪೂರೈಸಿಕೊಳ್ಳಬೇಕು ಎಂಬ ನಿರ್ಧಾರಕ್ಕೂ ಇನ್ನೊಂದು ರಾಷ್ಟ್ರದಿಂದ “ವಿನಾಯಿತಿ” ಪಡೆಯಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದರೆ, ಅದು ಕೇವಲ ರಾಜತಾಂತ್ರಿಕ ವೈಫಲ್ಯವಲ್ಲ; ಅದು ರಾಷ್ಟ್ರದ ಆತ್ಮಗೌರವವನ್ನೇ ತುತ್ತುಮಾಡಿದ ಆಡಳಿತದ ನಗ್ನ ಸತ್ಯ ಎಂದು ಉಲ್ಲೇಖಿಸಿದ್ದಾರೆ.

ಸ್ವತಂತ್ರ ನಂತರ ಭಾರತವೂ ಸ್ವತಂತ್ರ ವಿದೇಶಾಂಗ ಧೋರಣೆಯ ಮೂಲಕ ವಿಶ್ವದಲ್ಲಿ ಗೌರವ ಪಡೆದಿದ್ದ ಭಾರತ, ಇಂದು ಅಮೆರಿಕಾದ ರಾಜಕೀಯ ತಾಳಕ್ಕೆ ತಕ್ಕಂತೆ ಕುಣಿಯುವ ಸ್ಥಿತಿಗೆ ಕುಸಿದಿರುವುದು ಆತಂಕಕಾರಿ ಬೆಳವಣಿಗೆ. ರಷ್ಯಾದಿಂದ ತೈಲ ಖರೀದಿಸಲು ಅಮೆರಿಕಾದ “ವಿನಾಯಿತಿ” ಬೇಕೆಂಬ ಭಾವ ಮೂಡುವಂತೆ ಮಾತನಾಡುವ ಧೈರ್ಯ ಅವರಿಗೆ ಬಂದಿದ್ದರೆ, ಅದು ನರೇಂದ್ರ ಮೋದಿ ಸರಕಾರದ ವಿದೇಶಾಂಗ ದೌರ್ಬಲ್ಯ ಮತ್ತು ಆತ್ಮಗೌರವ ಕುಸಿದಿರುವುದಕ್ಕೆ ಜೀವಂತ ಸಾಕ್ಷಿ ಎಂದು ಟೀಕಿಸಿದ್ದಾರೆ.

ಅಮೆರಿಕಾದ ಸಚಿವರು ಭಾರತಕ್ಕೆ “30 ದಿನಗಳ ವಿನಾಯಿತಿ” ನೀಡಿದೆ ಎಂದು ಜಗತ್ತಿನ ಮುಂದೆ ಹೇಳುವ ಮಟ್ಟಿಗೆ ಪರಿಸ್ಥಿತಿ ತಲುಪಿರುವುದೇ ಮೋದಿ ಸರಕಾರದ ದುರ್ಬಲತೆ ಮತ್ತು ಆತ್ಮಗೌರವಹೀನತೆಯ ಪರಾಕಾಷ್ಠೆ. ಇದು ಕೇವಲ ರಾಜಕೀಯ ಅಪಮಾನವಲ್ಲ; ಇದು ಭಾರತದ ಸ್ವಾಭಿಮಾನವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹರಾಜು ಹಾಕಿದಂತಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ದೇಶದ ಗೌರವವನ್ನು ಇಷ್ಟು ಮಟ್ಟಿಗೆ ಕುಗ್ಗಿಸಿ, ವಿಶ್ವಗುರುವಿನ ಘೋಷಣೆಗಳ ಹಿಂದೆ ರಾಜತಾಂತ್ರಿಕ ದೀನತೆಯನ್ನು ಮುಚ್ಚಿಟ್ಟ ಪ್ರಧಾನಿಯನ್ನು ನೋಡಲು ಸಾಧ್ಯವಿಲ್ಲ. ಮಾತಿನಲ್ಲಿ ವಿಶ್ವಗುರು, ನಡೆಗಳಲ್ಲಿ ಪರಾಧೀನತೆ ತೋರುವುದು ನರೇಂದ್ರ ಮೋದಿಯ ವಿದೇಶಾಂಗ ನೀತಿಯ ವ್ಯಂಗ್ಯಾತ್ಮಕ ಸತ್ಯ ಎಂದು ಹೇಳಿದ್ದಾರೆ.

ದೇಶದ ಗೌರವವನ್ನು ಉಳಿಸುವ ಹೊಣೆಗಾರಿಕೆ ಪ್ರಧಾನಮಂತ್ರಿಯದ್ದು. ಆದರೆ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತವು ಅಮೇರಿಕಾದ “ವಿನಾಯಿತಿ”ಗಾಗಿ ಕಾಯುವ ರಾಷ್ಟ್ರದಂತೆ ಕಾಣಿಸಿಕೊಳ್ಳುತ್ತಿರುವುದು ನಾಚಿಕೆಗೇಡಿತನದ ಸಂಗತಿ. ವಿಶ್ವಗುರುವಿನ ಬೃಹತ್ ಭಾಷಣಗಳ ಹಿಂದೆ ಅಡಗಿರುವ ವಿದೇಶಾಂಗ ದೌರ್ಬಲ್ಯವನ್ನು ಇಂದು ಜಗತ್ತೇ ಗಮನಿಸುತ್ತಿದೆ. ವಿಶ್ವಗುರು ಎಂಬ ಘೋಷಣೆಯಿಂದ ದೇಶದ ಗೌರವ ಉಳಿಯುವುದಿಲ್ಲ. ಆತ್ಮಗೌರವದಿಂದ, ಸ್ವತಂತ್ರ ರಾಜತಾಂತ್ರಿಕ ಧೈರ್ಯದಿಂದ ಮಾತ್ರ ರಾಷ್ಟ್ರದ ಮಾನ ಉಳಿಯುತ್ತದೆ. ಆ ಧೈರ್ಯವೇ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಕಾಣೆಯಾಗಿರುವುದು ಇಂದಿನ ಭಾರತದ ಅತ್ಯಂತ ಕಹಿ ಸತ್ಯ ಎಂದು ವಗ್ದಾಳಿ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News