×
Ad

ನರೇಂದ್ರ ಮೋದಿ, ಜೈಶಂಕರ್ ಅವರಿಂದಾಗಿ ಭಾರತಕ್ಕೆ ಅವಮಾನ : ಪ್ರಿಯಾಂಕ್ ಖರ್ಗೆ ವಾಗ್ದಾಳಿ

"ಮೋದಿಯವರ ಬಗ್ಗೆ ಎಪ್‌ಸ್ಟೀನ್ ಫೈಲ್‌ನಲ್ಲಿ ಏನಾದರೂ ಇದೆಯಾ?"

Update: 2026-03-07 12:43 IST

ನರೇಂದ್ರ ಮೋದಿ(PTI)/ಪ್ರಿಯಾಂಕ್‌ ಖರ್ಗೆ

ಕಲಬುರಗಿ : ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಅವರ ವಿದೇಶ ನೀತಿಯಿಂದಾಗಿ ಅಮೆರಿಕಾದ ವಿದೇಶಾಂಗ ಸಚಿವರು ಸೇರಿದಂತೆ ಪ್ರತಿಯೊಬ್ಬರು ಭಾರತದ ಬಗ್ಗೆ ಹಗುರವಾಗಿ ಮಾತನಾಡುವಂತಾಗಿದೆ. ಇದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಅವಮಾನ ಅನುಭವಿಸುವಂತಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹರಿಹಾಯ್ದರು.

ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಅಮೆರಿಕಾದ ವಿದೇಶಾಂಗ ಅಧಿಕಾರಿಯೊಬ್ಬರು ನಾವು ಭಾರತವನ್ನು ಬೆಳೆಯಲು ಬಿಡುವುದಿಲ್ಲ. ಯುದ್ದದ ಪರಿಣಾಮದಿಂದಾಗಿ ಭಾರತ, ರಷ್ಯಾದಿಂದ 30 ದಿನಗಳವರೆಗೆ ತೈಲ ಖರೀದಿಸಲು ಅನುಮತಿ ನೀಡಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ‌. ಭಾರತಕ್ಕೆ ಅನುಮತಿ ನೀಡಲು ಅವರು ಯಾರು ? ಮೋದಿ, ಜೈಶಂಕರ್ ಸೇರಿದಂತೆ ಬಿಜೆಪಿ ನಾಯಕರು ಯಾರೊಬ್ಬರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಭಾರತದ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದರಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಅವಮಾನವಾಗುತ್ತಿದೆ ಎಂದು ಖರ್ಗೆ ಟೀಕಿಸಿದರು.

ಪ್ರಶ್ನೆಯೊಂದಕ್ಕೆ‌ ಉತ್ತರಿಸುತ್ತಿದ್ದ ಸಚಿವರು, "ನಾನು ಮನಸ್ಸು ಮಾಡಿದರೆ ಮೋದಿ ಅವರ ರಾಜಕೀಯ ಭವಿಷ್ಯ ಹಾಳು ಮಾಡಬಲ್ಲೆ. ಆದರೆ, ಮೋದಿ ನನ್ನ ಸ್ನೇಹಿತರು, ಹಾಗಾಗಿ ನಾನು ಹಾಗೆ ಮಾಡುವುದಿಲ್ಲ" ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದಕ್ಕೂ ಕೂಡಾ ಮೋದಿ ಪ್ರತಿಕ್ರಿಯೆ ನೀಡಿಲ್ಲ. ಯಾಕೆ ಅವರು ಮಾತನಾಡುತ್ತಿಲ್ಲ, ಮೋದಿಯವರ ಬಗ್ಗೆ ಎಪ್‌ಸ್ಟೀನ್ ಫೈಲ್ ನಲ್ಲಿ ಏನಾದರೂ ಇದೆಯಾ ? ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.

ಈ ಹಿಂದೆ ಮಧ್ಯಪ್ರಾಚ್ಯಗಳ ವಿಚಾರದಲ್ಲಿ ಅಮೆರಿಕಾ ಮಧ್ಯೆ ಪ್ರವೇಶಿಸಿದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಆ ಬಗ್ಗೆ ಆಕ್ಷೇಪ ಎತ್ತಿದ್ದರು. ಅಂತಹ ಎದೆಗಾರಿಕೆ ಮೋದಿಗೆ ಯಾಕೆ ಇಲ್ಲ? ಎಂದು ಪ್ರಶ್ನಿಸಿದ ಸಚಿವರು, ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಬಿಜೆಪಿವರು ನೆಹರೂ , ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಗ್ಗೆ ಮಾತನಾಡುತ್ತಾರೆ. ಸ್ವತಃ ಮೋದಿ ಸಿನೆಮಾ ನಟ ನಟಿಯರ ಮದುವೆ, ಕ್ರಿಕೆಟ್ ತಂಡಕ್ಕೆ ಶುಭಾಶಯ ಕೋರಲು ಹೋಗುತ್ತಾರೆ. ಆದರೆ, ವಿದೇಶಾಂಗ ನೀತಿಗಳ ಬಗ್ಗೆ ಭಾರತ ದಿಟ್ಟ‌ನಿಲುವಿನ ಬಗ್ಗೆ ಮಾತನಾಡಲು‌ ಅವರಿಗೆ ಸಮಯವಿಲ್ಲ ಎಂದು ಕುಟುಕಿದರು.

ಗೃಹ ಬಳಕೆ‌ ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆ ಬಗ್ಗೆ ಕೇಂದ್ರ ಸಚಿವರು ಉತ್ತರಿಸಲಿ. ಬೆಲೆ ಏರಿಕೆಯ ಮಾಸ್ಟರ್ ಸ್ಟ್ರೋಕ್ ಬಗ್ಗೆ‌ ಬಿಜೆಪಿಯವರು ಉತ್ತರಿಸಲಿ ಎಂದರು.

ಕಾಲೇಜುಗಳಲ್ಲಿ‌ ಚುನಾವಣೆ ನಡೆಸುವ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಚುನಾವಣೆಗೆ ಪೋಷಕರ ವಿರೋಧ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಕೂಲಂಕುಷ ಪರಿಶೀಲನೆ ನಡೆಸಲಾಗುತ್ತದೆ. ಜೆಎನ್‌ಯು ಸೇರಿದಂತೆ ಬಹುತೇಕ ‌ಶೈಕ್ಷಣಿಕ ಕೇಂದ್ರಗಳಲ್ಲಿ‌ ವಿದ್ಯಾರ್ಥಿ ಸಂಘಕ್ಕೆ‌ ಚುನಾವಣೆ ನಡೆಸಲಾಗುತ್ತಿದೆ. ಎಲ್ಲ ಹಂತದ ಪರಿಶೀಲನೆ ನಂತರ‌ ರೂಪಿಸಲಾದ ನಿಯಮಗಳ ಪ್ರಕಾರ ಎನ್‌ಎಸ್‌ಐಯೂ, ಎಬಿವಿಪಿ ಸಂಘಗಳು ಒಪ್ಪಬೇಕಾಗುತ್ತದೆ ಎಂದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News