×
Ad

ಬಡಜನರ ಮನೆಗಳನ್ನು ಬುಲ್ಡೋಜರ್ ಬಳಸಿ ನೆಲಸಮಗೊಳಿಸಿದ್ದು ಖಂಡನೀಯ; ಸ್ಲಂ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವಂತೆ ಸಂಸದ ಎ.ಎ.ರಹೀಮ್ ಆಗ್ರಹ

Update: 2025-12-27 20:35 IST

ಬೆಂಗಳೂರು : ಇಲ್ಲಿನ ಕೋಗಿಲು ಬಡಾವಣೆಯ ಫಕೀರ್ ಮತ್ತು ವಾಸೀಮ್ ಬಡಾವಣೆಯಲ್ಲಿ ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಬಡ ಜನರು ವಾಸಿಸುತ್ತಿದ್ದ 200 ಸ್ಲಂ ಮನೆಗಳನ್ನು ರಾಜ್ಯ ಸರಕಾರದ ಅಧೀನದಲ್ಲಿರುವ ಜಿಬಿಎ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ನೆಲಸಮಗೊಳಿಸರುವುದನ್ನು ರಾಜ್ಯಸಭಾ ಸದಸ್ಯ ಎ.ಎ.ರಹೀಮ್ ಖಂಡಿಸಿದ್ದಾರೆ.

ಶನಿವಾರ ನೆಲಸಮಗೊಳಿಸಿದ ಪ್ರದೇಶಕ್ಕೆ ಡಿವೈಎಫ್‍ಐ ನಿಯೋಗದೊಂದಿಗೆ ತೆರಳಿ, ಮನೆಗಳನ್ನು ಕಳೆದುಕೊಂಡ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿ ಮಾತನಾಡಿದ ಅವರು, ಕರ್ನಾಟಕ ಕಾಂಗ್ರೆಸ್ ಸರಕಾರ ರಾಜ್ಯದ ಜನತೆಗೆ ಉತ್ತರಾದಾಯಿಯಾಗಿರಬೇಕಾಗಿತ್ತು. ಆದರೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು, ಉತ್ತರ ಪ್ರದೇಶದ ಬಿಜೆಪಿ ಸರಕಾರದ ಮಾದರಿಯಲ್ಲಿ ಬಡಜನರು ವಾಸಿಸುವ ಸ್ಲಂ ಮನೆಗಳನ್ನು ಏಕಾಏಕಿ ಯಾವುದೇ ಮುನ್ಸೂಚನೆ ನೀಡದೇ, ಬುಲ್ಡೋಜರ್‌ನಿಂದ ನೆಲಸಮ ಮಾಡಿರುವುದು ಬಡ ಜನರ ಮೇಲೆ ಎಸಗಿರುವ ಕ್ರೂರ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರಕಾರದ ಅಧೀನದಲ್ಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದವರು ಈ ಫಕೀರ್ ಲೇಔಟ್ ಪ್ರದೇಶದಲ್ಲಿ 30-35 ವರ್ಷಗಳಿಂದ ವಾಸವಾಗಿರುವ ದಲಿತ ಹಾಗೂ ಅಲ್ಪಸಂಖ್ಯಾತ ಬಡಜನರ ಮನೆಗಳನ್ನು ಧ್ವಂಸಗೊಳಿಸಿರುವುದು ಸಂವಿಧಾನದತ್ತ ಬದುಕಿನ ಹಕ್ಕಿನ ಉಲ್ಲಂಘನೆಯಾಗಿದೆ. ನೆಲಸಮಗೊಳಿಸಿ ಎಂಟು ದಿನಗಳಾದರೂ ತುಟಿ ಬಿಚ್ಚದ ಕಾಂಗ್ರೆಸ್ ಹೈಕಮಾಂಡ್‍ನ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್ ನಡೆ ಬೂಟಾಟಿಕೆಯಿಂದ ಕೂಡಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಮನೆಗಳನ್ನು ಕಳೆದುಕೊಂಡ ಬಡವರು ಘನತೆಯಿಂದ ಬದುಕುವಂತಾಗಲು ಬುಲ್ಡೋಜರ್ ನ್ಯಾಯದ ಪರಿಕಲ್ಪನೆಯಲ್ಲಿ ಧ್ವಂಸಗೊಳಿಸಿರುವ 200 ಮನೆಗಳನ್ನು ರಾಜ್ಯ ಸರಕಾರ ತಕ್ಷಣ ಮರುನಿರ್ಮಿಸಿ ಸೂಕ್ತ ಪುನರ್‌ ವಸತಿ ಕಲ್ಪಿಸಬೇಕು ಎಂದು ಎ.ಎ.ರಹೀಮ್ ಆಗ್ರಹಿಸಿದ್ದಾರೆ.

ಈ ವೇಳೆಯಲ್ಲಿ ಸಿಪಿಐಎಂನ ಹುಳ್ಳಿ ಉಮೇಶ, ಮಂಗಳಕುಮಾರಿ, ಪುಷ್ಪಲತಾ, ದುಡಿಯುವ ಜನರ ವೇದಿಕೆಯ ನಂದಿನಿ, ಡಿವೈಎಫ್‍ಐ ಮುಖಂಡರಾದ ಬಸವರಾಜ ಪೂಜಾರ, ಶಿವರಾಜ್, ತನಿಕಾ ಸೇಲಂ, ನಿರೇಶಬಾಬು, ಕರ್ನಾಟಕ ಐಟಿ ಯೂನಿಯನ್ ರಾಜ್ಯ ಮುಖಂಡರಾದ ಸೂರಜ್ ನಿಧಿಯಂಗ, ಸುಹಾಸ್ ಅಡಿಗ, ದುಡಿಯುವ ಜನರ ವೇದಿಕೆಯ ಮುಖಂಡರಾದ ಪೂಜಾ, ಮಾನಸ, ಪ್ರಣೋಯ್, ಫಾತಿಮಾ ಸೇರಿದಂತೆ ಹಲವರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News