×
Ad

VB-G RAM G | ಗ್ರಾಮೀಣ ಭಾಗದಲ್ಲಿ ನಿರುದ್ಯೋಗ, ಕನಿಷ್ಠ ವೇತನ ಮರೆಮಾಚಿ ಶೋಷಣೆ : ಪ್ರಿಯಾಂಕ್ ಖರ್ಗೆ

Update: 2025-12-27 18:54 IST
ಪ್ರಿಯಾಂಕ್‌ ಖರ್ಗೆ | PC : x/@INCKarnataka

ಬೆಂಗಳೂರು : ವಿಬಿ ಜಿ ರಾಮ್ ಜಿ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಸಮಸ್ಯೆಯಾಗಲಿದೆ. ಕನಿಷ್ಠ ವೇತನ ಮರೆಮಾಚಿ ಶೋಷಣೆ ಆರಂಭವಾಗುತ್ತದೆ. ಇದರಿಂದ ಈಗಿರುವ ಶೇ.58ರಷ್ಟು ಮಹಿಳೆಯರ ಔದ್ಯೋಗಿಕ ಭಾಗವಹಿಸುವಿಕೆ, ಕ್ರಮೇಣ ಕಡಿಮೆಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

ಶನಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೋದಿ ನೇತೃತ್ವದ ಸರಕಾರ ಸಂಸತ್ತಿನಲ್ಲಿ ಯಾವುದೇ ಚರ್ಚೆ ಮಾಡದೇ ವಿಬಿ ಜಿ ರಾಮ್ ಜಿ ಮಸೂದೆ ಅಂಗೀಕರಿಸಿದ್ದಾರೆ. ಮನರೇಗಾ ಯೋಜನೆ ಕಾಯ್ದೆ ಸುಧಾರಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಇವರು ಸುಧಾರಿಸಿಯೂ ಇಲ್ಲ, ಸಬಲೀಕರಣ ಮಾಡಿಲ್ಲ. ಮನರೇಗಾ ಕಾಯ್ದೆಯನ್ನು ತೆಗೆದು ಹಾಕಿದ್ದಾರೆ ಎಂದರು.

19-20 ವರ್ಷಗಳಿಂದ ಉದ್ಯೋಗ ಖಾತರಿ ಯೋಜನೆಯು ಗ್ರಾಮೀಣ ಪ್ರದೇಶದಲ್ಲಿ ಜೀವನೋಪಾಯದ ಗ್ಯಾರಂಟಿ ನೀಡಿತ್ತು. ಮೋದಿ ಸರಕಾರ ಈ ಗ್ಯಾರಂಟಿ ಕಸಿದುಕೊಂಡಿದೆ. ಬೇಡಿಕೆ ಆಧಾರಿತ ಯೋಜನೆ, ವಿತರಣೆ ಆಧಾರಿತ ಯೋಜನೆಯಾಗಿದೆ. ಈ ಹಿಂದೆ ಕೇಂದ್ರ ಸರಕಾರ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿತ್ತು. ಈಗ ಇದು ಕಾಯ್ದೆಯಾಗಿ ಉಳಿದಿಲ್ಲ. ಇತರೆ ಸರಕಾರಿ ಯೋಜನೆಗಳಲ್ಲಿ ಒಂದಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಮೋದಿ ಸರಕಾರ ವಿಬಿ ಜಿ ರಾಮ್ ಜಿ ಮಸೂದೆ ತರುವ ಮೂಲಕ 3 ಪ್ರಮುಖ ಸಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸಿದೆ. ಜೀವನೋಪಾಯದ ಹಕ್ಕು, ಪಂಚಾಯಿತಿಗಳ ಹಕ್ಕು, ರಾಜ್ಯ ಸರಕಾರಗಳ ಹಕ್ಕು ಕುಸಿದಿದೆ. ಕೇಂದ್ರ ಸರಕಾರ ಸಂಪೂರ್ಣವಾಗಿ ಅಸಂವಿಧಾನಿಕವಾಗಿ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯ ಸರಕಾರಗಳ ಅಭಿಪ್ರಾಯ ಪಡೆಯದೇ ರಾಜ್ಯದ ಮೇಲೆ ಆರ್ಥಿಕ ಹೊರೆ ಹಾಕಿದ್ದಾರೆ. ಮನರೇಗಾದಲ್ಲಿ ಉದ್ಯೋಗದ ಹಕ್ಕು ಎಂದು ಇತ್ತು. ಈಗ ಹೊಸ ಯೋಜನೆಯಲ್ಲಿ ಕೇಂದ್ರ ಸರಕಾರ ಅನುಮತಿ ನೀಡಿದರೆ ಮಾತ್ರ ಉದ್ಯೋಗ ಎಂದು ಮಾಡಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು.

ಈ ಮಸೂದೆಯ ಸೆಕ್ಷನ್ 5ನಲ್ಲಿ ಕೇಂದ್ರ ಸರಕಾರ ಪ್ರತಿ ಆರ್ಥಿಕ ವರ್ಷದಲ್ಲಿ ರಾಜ್ಯಗಳಿಗೆ ನೀಡಲಾಗುವ ಅನುದಾನದ ಮೇಲೆ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿದೆ. ಇನ್ನು ಸೆಕ್ಷನ್ 5(1)ರಲ್ಲಿ ರಾಜ್ಯ ಸರಕಾರ ಗ್ರಾಮೀಣ ಪ್ರದೇಶದಲ್ಲಿ ಕೇಂದ್ರ ಸರಕಾರದ ಅಧಿಸೂಚನೆಗೊಳಿಸಿದ ಪ್ರದೇಶಗಳಲ್ಲಿ ಅನುದಾನ ನೀಡುತ್ತದೆ. ಈ ರೀತಿ ಅನುದಾನ ನೀಡಿದ ನಂತರ ಆ ಭಾಗದ ಉದ್ಯೋಗ ಕಾರ್ಡ್ ಹೊಂದಿರುವವರು ಕೆಲಸ ಮಾಡಬಹುದು ಎಂದು ಹೇಳಿದೆ. ಈ ಹಿಂದೆ ಒಬ್ಬ ವ್ಯಕ್ತಿ ಮನರೇಗಾ ಉದ್ಯೋಗ ಕಾರ್ಡ್ ಹೊಂದಿದ್ದರೆ ಆತ ಎಲ್ಲಿ ಬೇಕಾದರೂ ಹೋಗಿ ಕೆಲಸ ಮಾಡುವ ಅವಕಾಶವಿತ್ತು. ಈಗ ಈ ಅವಕಾಶವನ್ನು ಕಸಿದುಕೊಳ್ಳಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ಮನರೇಗಾ ಯೋಜನೆಯಲ್ಲಿ ವರ್ಷದ 365 ದಿನಗಳಲ್ಲಿ ಯಾವಾಗ ಬೇಕಾದರೂ ಮಾಡಬಹುದಾಗಿತ್ತು. ಆದರೆ, ವಿಬಿ ಜಿ ರಾಮ್ ಜಿ ಮಸೂದೆಯಲ್ಲಿ ಕೃಷಿಯ ಚಟುವಟಿಕೆ ಹೆಚ್ಚಾಗಿರುವ ಸಮಯದಲ್ಲಿ 60 ದಿನ ಈ ಯೋಜನೆಯಡಿ ಉದ್ಯೋಗ ಮಾಡುವಂತಿಲ್ಲ ಎಂದು ಸೆಕ್ಷನ್ 6(1)ನಲ್ಲಿ ತಿಳಿಸಿದೆ. ಕೃಷಿ ಚಟುವಟಿಕೆ ವೇಳೆ ಉದ್ಯೋಗ ಸಿಗದಿರುವ ಕಾರಣ ಕಾರ್ಮಿಕರು ಜಮೀನುದಾರರು ಕೊಟ್ಟಷ್ಟು ಕೂಲಿಗೆ ಅವರ ಬಳಿ ಹೋಗಿ ದುಡಿಯಬೇಕಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಉದ್ಯೋಗ ಖಾತರಿ ಯೋಜನೆಯಲ್ಲಿ ಪ್ರತಿ ವರ್ಷ ವೇತನ ಪರಿಷ್ಕರಣೆಯಾಗುತ್ತಿತ್ತು. ಆದರೆ, ಹೊಸ ಯೋಜನೆಯಲ್ಲಿ ಇದನ್ನು ತೆಗೆದುಹಾಕಲಾಗಿದೆ. ಮನರೇಗಾದಲ್ಲಿ ಪಂಚಾಯಿತಿಗಳ ಮೂಲಕ ಕೆಲಸ ಕೈಗೊಳ್ಳುತ್ತಿದ್ದರು. ಈಗ ಈ ಯೋಜನೆಯ ಕೆಲಸಗಳನ್ನು ಗ್ರಾಮಸ್ಥರು ನಿರ್ಧರಿಸುವುದಿಲ್ಲ; ದಿಲ್ಲಿಯಲ್ಲಿ ಕೂತಿರುವವರು ನಿರ್ಧಾರ ಮಾಡುತ್ತಾರೆ. ಪಿ.ಎಂ. ಗತಿಶಕ್ತಿ ಪೋರ್ಟಲ್‍ಗೆ ಯೋಜನೆಯನ್ನು ಸೇರಿಸಿದ್ದಾರೆ. ಪಿಎಂ ಗತಿಶಕ್ತಿ ಎಂಬುದು 500 ಕೋಟಿಗೂ ಹೆಚ್ಚು ಮೊತ್ತದ ಕೇಂದ್ರ ಸರಕಾರ ಯೋಜನೆಗಳ ಮೇಲುಸ್ತುವಾರಿ ಮಾಡುವ ಪೋರ್ಟಲ್ ಆಗಿದೆ. ನೀವು ಈ ಪಿ.ಎಂ. ಗತಿಶಕ್ತಿ ಪೋರ್ಟಲ್‍ನಲ್ಲಿ ನಿಮ್ಮ ಹೊಲದ ಕೆಲಸದ ಬಗ್ಗೆ ಮಾಹಿತಿ ಹಾಕಲು ಸಾಧ್ಯವೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಮನರೇಗಾದಲ್ಲಿ ಶೇ.100ರಷ್ಟು ಕೇಂದ್ರ ಸರಕಾರದ ಅನುದಾನವಿತ್ತು. ಈಗ 60:40 ಅನುಪಾತದಲ್ಲಿ ರಾಜ್ಯ ಸರಕಾರದ ಮೇಲೆ ಹೊರೆ ಹಾಕಿದ್ದಾರೆ. ಸೆಕ್ಷನ್ 22(1)ರಲ್ಲಿ ಇದರ ಬಗ್ಗೆ ತಿಳಿಸಲಾಗಿದೆ. ನಿಮ್ಮ ಪಂಚಾಯಿತಿ ಅಧಿಸೂಚನೆ ಹೊರಡಿಸಬೇಕು. ನಂತರ ಕೇಂದ್ರ ಸರಕಾರದ ಮಾನದಂಡಗಳ ಅನುಸಾರ ಇರಬೇಕು. ನಂತರ 60:40 ಅನುಪಾತದಲ್ಲಿ ರಾಜ್ಯ ಸರಕಾರ ಅನುದಾನ ನೀಡಬೇಕು. ಈ ಯೋಜನೆಯಲ್ಲಿ ಹೆಚ್ಚುವರಿ ವೆಚ್ಚವಾದರೆ ಅದನ್ನು ರಾಜ್ಯ ಸರಕಾರವೇ ಭರಿಸಬೇಕು. ಶೇ.100ರಷ್ಟು ಕೇಂದ್ರ ಸರಕಾರದ ಯೋಜನೆಯಾಗಿದ್ದ ಈ ಯೋಜನೆ ಈಗ ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಪರಿವರ್ತನೆಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಕೇಂದ್ರ ಸರಕಾರ ತಂತ್ರಜ್ಞಾನದ ಹೆಸರಲ್ಲಿ ಜನರನ್ನು ಉದ್ಯೋಗದಿಂದ ದೂರ ಇಡುವ ಪ್ರಯತ್ನ ಮಾಡುತ್ತಿದೆ. ಕೆಲವು ರಾಜ್ಯಗಳಲ್ಲಿ ಡಿಜಿಟಲ್ ಲಿಂಕ್ ಆಗಿಲ್ಲ ಎಂದು ಶೇ.38ರಷ್ಟು ಹಾಗೂ ಮತ್ತೆ ಕೆಲವು ರಾಜ್ಯಗಳಲ್ಲಿ ಶೇ.63ನಷ್ಟು ಕಾರ್ಮಿಕರಿಗೆ ವೇತನವೇ ಸಿಕ್ಕಿಲ್ಲ. ಇಷ್ಟೇಲ್ಲಾ ತಂತ್ರಜ್ಞಾನ ಅಳವಡಿಸಿಕೊಂಡಿದ್ದರೂ ಶೇ.16.6ನಷ್ಟು ಬೇಡಿಕೆ ಕಡಿಮೆಯಾಗಿದೆ. ಇದು ಗ್ರಾಮೀಣ ಪ್ರದೇಶದ ಜನರಿಗೆ ಜೀವನೋಪಾಯ ನೀಡುವ ರೀತಿಯೇ? ಎಂದು ಪ್ರಿಯಾಂಕ್ ಖರ್ಗೆ ಕೇಂದ್ರದ ವಿರುದ್ಧ ಹರಿಹಾಯ್ದರು.

ಮನರೇಗಾ ಯೋಜನೆಯಲ್ಲಿ ನಾವು ಗ್ರಾಮೀಣದ ಆಸ್ತಿಗಳನ್ನು ನಿರ್ಮಾಣ ಮಾಡಬಹುದಾಗಿತ್ತು. ಗ್ರಾಮ ಸಭೆ ನಡೆಸಿ, ಗ್ರಾಮಸ್ಥರಿಗೆ ಏನು ಬೇಕು, ಪಂಚಾಯಿತಿಗಳಿಗೆ ಏನು ಬೇಕು ಎಂದು ನಿರ್ಧಾರ ಮಾಡಬಹುದಿತ್ತು. ಈಗ ಕೇಂದ್ರ ಸರಕಾರದ ಬದಲಾವಣೆಯಿಂದ ಈ ಯೋಜನೆಯಲ್ಲಿ ಗುತ್ತಿಗೆ ಆಧಾರಿತ ಕಾಮಗಾರಿಗಳತ್ತ ಸಾಗುವಂತಾಗಿದೆ. ಸೆಕ್ಷನ್ 21(2)ನಲ್ಲಿ ಗುತ್ತಿಗೆದಾರರನ್ನು ಬಳಸಿಕೊಂಡು ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಮನರೇಗಾ ಯೋಜನೆಯಲ್ಲಿ ಗುತ್ತಿಗೆದಾರ ಎಂಬ ಹೆಸರೇ ಇರಲಿಲ್ಲ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಹಾಗೂ ಮಾಧ್ಯಮ ಕಾರ್ಯದರ್ಶಿ ದೀಪಕ್ ತಿಮಯ್ಯ, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹಾಗೂ ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಐಶ್ವರ್ಯ ಮಹದೇವ್ ಉಪಸ್ಥಿತರಿದ್ದರು.

ಕೇಂದ್ರ ಸರಕಾರ ಮನರೇಗಾ ಯೋಜನೆಯಲ್ಲಿ ಗಾಂಧೀಜಿ ಅವರ ಹೆಸರು ತೆಗೆದಿದೆ ಎಂಬ ವಿಚಾರಕ್ಕೆ ಮಾತ್ರ ನಾವು ಇದನ್ನು ವಿರೋಧ ಮಾಡುತ್ತಿಲ್ಲ. ನಿಮಗೆ ಗಾಂಧೀಜಿ ಮೇಲೆ ದ್ವೇಷ ಇದೆ ಎಂದು ನಮಗೆ ಗೊತ್ತಿದೆ. ಆ ದ್ವೇಷವನ್ನು ನಮ್ಮ ಯುವ ಜನತೆ ಹಾಗೂ ಗ್ರಾಮೀಣ ಭಾಗದ ಜನರ ಮೇಲೆ ತೀರಿಸಿಕೊಳ್ಳುತ್ತಿರುವುದೇಕೆ? ನಿಮಗೆ ನಾಥುರಾಮ್ ಗೋಡ್ಸೆ ಇಷ್ಟವಾದರೆ, ಅವರ ಹೆಸರನ್ನೇ ಇಡಿ. ಜಿ ನಾಥುರಾಮ್ ಜಿ ಅಂತಲೇ ಹೆಸರಿಡಿ. ಆದರೆ, ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಮಾಡಿ, ಪಂಚಾಯಿತಿ ಮಟ್ಟ ಬಲಪಡಿಸಿ, ಗ್ರಾಮಗಳ ಆಸ್ತಿ ಸೃಜನೆ ಮಾಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

‘ಮೋದಿಯವರು ರಾತ್ರಿ ಕನಸು ಕಂಡು, ಬೆಳಗ್ಗೆ ಮಸೂದೆ ತರುತ್ತಾರೆ’

ಕೇಂದ್ರ ಸರಕಾರ ಒಕ್ಕೂಟ ವ್ಯವಸ್ಥೆಯ ನಿಯಮ ಉಲ್ಲಂಘಿಸಿದೆ. ಕೇಂದ್ರ ಸರಕಾರಕ್ಕೆ ಕೇವಲ ಕನ್ನಡಿಗರ ದುಡಿಮೆ ಹಾಗೂ ಬೇವರು, ತೆರಿಗೆ, ಸಾಮರ್ಥ್ಯ, ಪ್ರತಿಭೆ ಮಾತ್ರ ಬೇಕಾಗಿದೆ. ಅವರ ವಿಕಸಿತ ಭಾರತದ ಕನಸನ್ನು ಕನ್ನಡಿಗರು ನನಸು ಮಾಡಬೇಕಿದೆ. ಅವರು ನಮಗೆ ಪ್ರತಿಯಾಗಿ ಕೊಡುವುದು ಚೊಂಬು. ಕೇಂದ್ರ ಸರಕಾರ ಸಂವಿಧಾನದ ವಿಧಿ 280 ಹಾಗೂ 258 ಅನ್ನು ಉಲ್ಲಂಘನೆ ಮಾಡಿದೆ. ಈ ಯೋಜನೆಯಲ್ಲಿ 60:40 ಅನುಪಾತದ ಅನುದಾನ ಹಂಚಿಕೆ ಬಗ್ಗೆ ಕೇಂದ್ರ ಸರಕಾರ ಯಾರ ಜೊತೆಗೂ ಚರ್ಚೆ ನಡೆಸಿಲ್ಲ. ಮೋದಿಯವರು ರಾತ್ರಿ ಕನಸು ಕಂಡು, ಬೆಳಗ್ಗೆ ಮಸೂದೆ ತರುತ್ತಾರೆ. ರಾಜ್ಯ ಸರಕಾರಗಳು ಎಲ್ಲದಕ್ಕೂ ತಲೆ ಅಲ್ಲಾಡಿಸಿಕೊಂಡು ಕೂರಬೇಕೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News