×
Ad

ಉನ್ನಾವೊ ಅತ್ಯಾಚಾರ ಪ್ರಕರಣದ ದೋಷಿ ಸೆಂಗಾರ್‌ನ AI ಚಿತ್ರ ಪೋಸ್ಟ್ ಮಾಡಿದ ವಿವಾದ: ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಆಕ್ರೋಶ; ಸಚಿವರಿಂದ ತಿರುಗೇಟು

Update: 2025-12-27 00:22 IST

ಪ್ರಿಯಾಂಕ್‌ ಖರ್ಗೆ

ಬೆಂಗಳೂರು : ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಉನ್ನಾವೊ ಅತ್ಯಾಚಾರ ಪ್ರಕರಣದ ದೋಷಿ ಸೆಂಗಾರ್‌ನ AI-ರಚಿತ ಚಿತ್ರವನ್ನು ಹಂಚಿಕೊಂಡು ನ್ಯಾಯಾಲಯದ ಆದೇಶದ ಕುರಿತು ಸಾರ್ವಜನಿಕರನ್ನು ದಾರಿ ತಪ್ಪಿಸಿದ್ದಾರೆ ಎಂದು ಆರೋಪಿಸಿ, ಬಿಜೆಪಿ ಕರ್ನಾಟಕ ಘಟಕವು ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿ ಕರ್ನಾಟಕ ಘಟಕವು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತನ್ನ ಅಧಿಕೃತ ಖಾತೆಯಲ್ಲಿ ಪ್ರಕಟಿಸಿದ ಪೋಸ್ಟ್‌ ನಲ್ಲಿ, ಪ್ರಿಯಾಂಕ್ ಖರ್ಗೆ ಅವರನ್ನು ‘ಸ್ವಯಂ ಘೋಷಿತ fact checker ’ ಎಂದು ಉಲ್ಲೇಖಿಸಿ, ನಕಲಿ ಸುದ್ದಿ ಹರಡುವಾಗ ಅವರು ಸಿಕ್ಕಿಬಿದ್ದಿದ್ದಾರೆ ಎಂದು ಆರೋಪಿಸಿದೆ.

ಐಟಿ ಮತ್ತು ಬಿಟಿ ಖಾತೆ ಹೊಂದಿರುವ ಸಚಿವರಾಗಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ದಾಳಿ ನಡೆಸುವ ಉದ್ದೇಶದಿಂದ ಹಾಗೂ ನ್ಯಾಯಾಂಗ ಪ್ರಕ್ರಿಯೆಯ ಕುರಿತು ಸಾರ್ವಜನಿಕರನ್ನು ತಪ್ಪು ದಾರಿಗೆಳೆಯಲು ದುರುದ್ದೇಶಪೂರಿತವಾಗಿ AI ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ ಎಂದು ಬಿಜೆಪಿ ಹೇಳಿದೆ.

ಭಾರತದ ಪುತ್ರಿಯರ ಸಬಲೀಕರಣಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಯಾದ ‘ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆಯ ಅರ್ಥವನ್ನು ಸುಳ್ಳುಗಳ ಮೂಲಕ ವ್ಯಂಗ್ಯವಾಡಿ, ಅಗ್ಗದ ರಾಜಕೀಯಕ್ಕೆ ಬಳಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಸೆಂಗಾರ್‌ ಜೀವಾವಧಿ ಶಿಕ್ಷೆ ರದ್ದು ಸರಕಾರದ ನಿರ್ಧಾರವಲ್ಲ; ಅದು ನ್ಯಾಯಾಲಯದ ಆದೇಶವಾಗಿದ್ದು, ಆ ಆದೇಶವನ್ನು ಸಿಬಿಐ ಪ್ರಶ್ನಿಸಲಿದೆ. ಅಲ್ಲದೆ, ಪ್ರಿಯಾಂಕ್ ಖರ್ಗೆ ಹಂಚಿಕೊಂಡಿರುವ ಪೋಸ್ಟ್ ಅವರದೇ ಸರಕಾರ ಜಾರಿಗೆ ತಂದಿರುವ ದ್ವೇಷ ಭಾಷಣ ವಿರೋಧಿ ಮಸೂದೆಯ ಉಲ್ಲಂಘನೆಯಾಗಿದ್ದು, ನ್ಯಾಯಾಂಗ ಪ್ರಕ್ರಿಯೆಯನ್ನು ಅಣಕಿಸುವ ಕೋಮು ದೃಶ್ಯಾವಳಿಗಳನ್ನು ಬಳಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಈ ತಪ್ಪು ಮಾಹಿತಿಗೆ ಸಂಬಂಧಿಸಿ ಪ್ರಿಯಾಂಕ್ ಖರ್ಗೆ ಬೇಷರತ್ತಾಗಿ ಕ್ಷಮೆಯಾಚಿಸಬೇಕು ಮತ್ತು ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಇದಕ್ಕೂ ಮೊದಲು, ಸಚಿವ ಪ್ರಿಯಾಂಕ್ ಖರ್ಗೆ ಹಂಚಿಕೊಂಡಿದ್ದ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ AI ಯಿಂದ ರಚಿಸಲಾಗಿದೆ ಎನ್ನಲಾದ ಚಿತ್ರವಿದ್ದು, ಸರಕಾರದ ‘ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆಯನ್ನು ವ್ಯಂಗ್ಯಾತ್ಮಕವಾಗಿ ಟೀಕಿಸಲಾಗಿತ್ತು.

ಆ ಚಿತ್ರದಲ್ಲಿ ದಿಲ್ಲಿಯ ತಿಹಾರ್ ಜೈಲು ಹೊರಗೆ ಶಿಕ್ಷೆಗೊಳಗಾದ ಅತ್ಯಾಚಾರಿ ಕುಲದೀಪ್ ಸಿಂಗ್ ಸೆಂಗಾರ್ ಗೆ ಜನರು ಹಾರ ಹಾಕುತ್ತಿರುವಂತೆ ತೋರಿಸುವ ಡೀಪ್‌ಫೇಕ್ ದೃಶ್ಯವಿದೆ ಎಂದು ಬಿಜೆಪಿ ಹೇಳಿದೆ.

ಈ ಕುರಿತು ಬಿಜೆಪಿ ಸ್ಪಷ್ಟಪಡಿಸಿದ್ದು, ಸೆಂಗಾರ್‌ಗೆ ಒಂದೇ ಪ್ರಕರಣದಲ್ಲಿ ಜಾಮೀನು ದೊರೆತಿದ್ದು, ಆ ಜಾಮೀನನ್ನು ಸಿಬಿಐ ಪ್ರಶ್ನಿಸಿದೆ. ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿ ಸೆಂಗಾರ್ ಇನ್ನೂ ಜೈಲಿನಲ್ಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

ಆ ಬಳಿಕ ಮತ್ತೊಂದು ಪೋಸ್ಟ್ ಮೂಲಕ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ತಾವು ಹಂಚಿಕೊಂಡಿದ್ದ ಚಿತ್ರವು AI ಯಿಂದ ರಚಿಸಲ್ಪಟ್ಟಿರಬಹುದು ಹಾಗೂ ಅದು ಕಣ್ತಪ್ಪಿ ಪೋಸ್ಟ್ ಆಗಿರಬಹುದೆಂದು ಒಪ್ಪಿಕೊಂಡಿದ್ದಾರೆ.

ಬಿಜೆಪಿ ಕರ್ನಾಟಕ ಘಟಕದ ಆರೋಪಗಳಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, “ಹಿಂದಿನ ಪೋಸ್ಟ್‌ನಲ್ಲಿರುವ ಚಿತ್ರವು AI ರಚಿತವಾಗಿರಬಹುದು ಹಾಗೂ ಹಂಚಿಕೊಂಡಿರಬಹುದು. ಆದರೆ ನಿಮ್ಮ ಖ್ಯಾತಿಯು ನಿಮ್ಮ ಮುಂದೆಯೇ ಇದೆ” ಎಂದು ಗುಜರಾತ್‌ನ ಬಿಲ್ಕೀಸ್‌ ಬಾನೊ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಹೂವಿನ ಹಾರ ಹಾಕಿ ಸನ್ಮಾನಿಸಿದ ಸಂದರ್ಭದ ಚಿತ್ರವನ್ನು ಲಗತ್ತಿಸಿದ್ದಾರೆ.

ಅದೇ ವೇಳೆ ಅವರು, “ಮುಖ್ಯ ಪ್ರಶ್ನೆ ಇನ್ನೂ ಉಳಿದಿದೆ. ಬಿಜೆಪಿ ಅಪರಾಧಿಗಳನ್ನು ಗೌರವಿಸುವುದನ್ನೂ ರಕ್ಷಿಸುವುದನ್ನೂ ಮುಂದುವರಿಸಿದೆ. ಕರ್ನಾಟಕದಲ್ಲಿ POCSO ಆರೋಪಿಗಳ ವಿರುದ್ಧ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ? ಮತ್ತು ಈ ನಾಯಕನನ್ನು ಇನ್ನೂ ನಿಮ್ಮ ಪಕ್ಷದ ‘ಮಾರ್ಗದರ್ಶಕ’ ಹಾಗೂ ‘ಮಾರ್ಗದರ್ಶಿ ಬೆಳಕು’ ಎಂದು ಏಕೆ ಬಿಂಬಿಸಲಾಗುತ್ತಿದೆಯಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

“ನಾನು ಇದನ್ನು ನಿಮಗಾಗಿ Fact check ಮಾಡಿ ಪರಿಶೀಲಿಸಬೇಕೆಂದು ನೀವು ಬಯಸುತ್ತೀರಾ?” ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News