×
Ad

ಮುಡಾ ಪ್ರಕರಣ; ಲೋಕಾಯುಕ್ತ ತನಿಖಾಧಿಕಾರಿ ಬದಲಾವಣೆಗೆ ಕೋರಿದ್ದ ಮಧ್ಯಂತರ ಅರ್ಜಿ ವಜಾ

Update: 2025-10-09 17:05 IST

ಬೆಂಗಳೂರು : ಮುಡಾ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿರುವ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಉದೇಶ್‌ ಅವರ ಬದಲಾವಣೆ ಕೋರಿ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.

ಜತೆಗೆ, ಮುಡಾ ಪ್ರಕರಣದಲ್ಲಿ ತನಿಖೆ ಪೂರ್ಣಗೊಳಿಸಲು ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರು ಮತ್ತೆ 2 ತಿಂಗಳ ಕಾಲಾವಕಾಶ ನೀಡಿದ್ದಾರೆ.

ಆದರೆ, ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ, ಬಾವಮೈದುನ ಬಿ.ಎಂ.ಮಲ್ಲಿಕಾರ್ಜುನ್‌, ವಿವಾದಿತ ಭೂಮಿಯ ಮೂಲ ಮಾಲೀಕ ದೇವರಾಜ್ ವಿರುದ್ಧ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್‌ ಹಾಕಿರುವುದಕ್ಕೆ ಆಕ್ಷೇಪಿಸಿ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಪ್ರತಿಭಟನಾ ಅರ್ಜಿಯ ಸಂಬಂಧ ನ್ಯಾಯಾಲಯವು ಇಂದು ಯಾವುದೇ ಆದೇಶ ಮಾಡಿಲ್ಲ.

ಪಕ್ಷಪಾತ ಧೋರಣೆ ಅನುಸುರಿಸುತ್ತಿರುವ ತನಿಖಾಧಿಕಾರಿ ಉದೇಶ್‌ ವಿರುದ್ಧ ಕ್ರಮಕೈಗೊಳ್ಳಲು ನಿರ್ದೇಶಿಸಬೇಕು ಎಂದು ಕೋರಿರುವ ಮಧ್ಯಂತರ ಅರ್ಜಿ ಹಾಗೂ ಇಡೀ ಮುಡಾ ಹಗರಣದ ಸಂಬಂಧ ಒಂದೇ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಇದಕ್ಕೆ ಬದಲಾಗಿ ಪ್ರತಿ ಸರ್ವೇ ನಂಬರ್‌ಗೆ ಒಂದರಂತೆ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಸ್ನೇಹಮಯಿ ಕೃಷ್ಣ ಕೋರಿದ್ದು, ಅದರ ಸಂಬಂಧವೂ ನ್ಯಾಯಾಲಯ ಇಂದು ಯಾವುದೇ ಆದೇಶ ಹೊರಡಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News