×
Ad

‘ಕೃಷ್ಣ' ಹೆಸರು ಧಾರ್ಮಿಕ ಭಾವನೆಗೆ ಸಂಬಂಧಿಸಿದ್ದಲ್ಲ, ಭಾರತದ ನದಿಯ ಹೆಸರಾಗಿದೆ : ಎನ್‍ಸಿಇಆರ್‌ಟಿ ಸ್ಪಷ್ಟನೆ

Update: 2026-06-25 20:23 IST

Photo Credit : NCERT

ಬೆಂಗಳೂರು : ಎನ್‍ಸಿಇಆರ್‌ಟಿ ಮತ್ತು ಸಿಬಿಎಸ್‍ಇ 6ನೇ ತರಗತಿಯ ಕನ್ನಡ ಪಠ್ಯಪುಸ್ತಕಕ್ಕೆ ‘ಕೃಷ್ಣ' ಎಂದು ಹೆಸರಿಟ್ಟಿದ್ದರ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದ ಹಿನ್ನೆಲೆ, ಈ ಕುರಿತು ಸ್ಪಷ್ಟನೆ ನೀಡಿರುವ ಎನ್‍ಸಿಇಆರ್‌ಟಿ, ‘ಕೃಷ್ಣ' ಎಂಬ ಈ ಹೆಸರು ಯಾವುದೇ ಧಾರ್ಮಿಕ ಭಾವನೆಗೆ ಸಂಬಂಧಿಸಿದ್ದಲ್ಲ. ಬದಲಾಗಿ, ಭಾರತದ ನದಿಗಳನ್ನು ಗೌರವಿಸುವ ಉದ್ದೇಶದಿಂದ ದೇಶದ ಪ್ರಮುಖ ನದಿಗಳ ಹೆಸರನ್ನು ವಿವಿಧ ಪಠ್ಯಗಳಿಗೆ ಇಡಲಾಗಿದೆ ಎಂದು ತಿಳಿಸಿದೆ.

ಹಿಂದಿ ಭಾಷೆಗೆ ‘ಗಂಗಾ’, ಇಂಗ್ಲಿಷ್‌ ಗೆ ‘ಕಾವೇರಿ’, ಉರ್ದುವಿಗೆ ‘ಜಮುನಾ’ ಎಂದು ಹೆಸರಿಸಿರುವಂತೆಯೇ, ಕನ್ನಡ ಪಠ್ಯಕ್ಕೆ ಕರ್ನಾಟಕದ ಜೀವನಾಡಿಯಾದ ‘ಕೃಷ್ಣ’ ನದಿಯ ಗೌರವಾರ್ಥವಾಗಿ ಆ ಹೆಸರು ಇಡಲಾಗಿದೆ ಎಂದು ಎನ್‍ಸಿಇಆರ್‌ ಟಿ ಸ್ಪಷ್ಟನೆ ನೀಡಿದೆ.

ಇದಿಷ್ಟೇ ಅಲ್ಲದೆ, ಈ ಪಠ್ಯದಲ್ಲಿ ನಿರ್ದಿಷ್ಟ ಆಹಾರ ಪದ್ಧತಿಯನ್ನು ಹೇರಲಾಗುತ್ತಿದೆ ಎಂಬ ಆರೋಪವನ್ನು ಎನ್‍ಸಿಇಆರ್‌ ಟಿ ತಳ್ಳಿಹಾಕಿದ್ದು, ‘6ನೇ ತರಗತಿಯ “ಹೆಲ್ತ್ ಈಸ್ ವೆಲ್ತ್” ಅಧ್ಯಾಯವು ಸಂಪೂರ್ಣವಾಗಿ ‘ಸಮತೋಲನ ಆಹಾರ'ದ ಪರಿಕಲ್ಪನೆಯ ಮೇಲೆ ಸಿದ್ಧವಾಗಿದೆ. ಇದರಲ್ಲಿ ಹಾಲು, ಸೊಪ್ಪು, ತರಕಾರಿ ಮತ್ತು ಹಣ್ಣುಗಳಂತಹ ಪೌಷ್ಟಿಕಾಂಶಯುಕ್ತ ಪದಾರ್ಥಗಳ ಬಗ್ಗೆ ಮಾಹಿತಿ ನೀಡಲಾಗಿದೆ’ ಎಂದು ಎನ್‍ಸಿಇಆರ್‌ ಟಿ ಹೇಳಿದೆ.

‘ಮುಖ್ಯವಾಗಿ ಪಠ್ಯದ 63ನೇ ಪುಟದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನೂ ಒಳಗೊಂಡಿರುವ ಚಿತ್ರಗಳಿವೆ. ನಾವು ಯಾವುದೇ ಒಂದು ಆಹಾರ ಪದ್ಧತಿಯನ್ನು ಸಮರ್ಥಿಸಿಲ್ಲ ಅಥವಾ ಇನ್ನೊಂದನ್ನು ವಿರೋಧಿಸಿಲ್ಲ. ವಿದ್ಯಾರ್ಥಿಗಳಲ್ಲಿ ಆರೋಗ್ಯದ ಅರಿವು ಮೂಡಿಸುವುದಷ್ಟೇ ನಮ್ಮ ಉದ್ದೇಶ’ ಎಂದು ಎನ್‍ಸಿಇಆರ್‌ ಟಿ ತಿಳಿಸಿದೆ.

ಎನ್‍ಸಿಇಆರ್‌ಟಿ ಮತ್ತು ಸಿಬಿಎಸ್‍ಇ ಪಠ್ಯಪುಸ್ತಕಗಳಲ್ಲಿನ ವಿಷಯಗಳ ಕುರಿತಾಗಿ ಇತ್ತೀಚೆಗೆ ವ್ಯಾಪಕ ಚರ್ಚೆ ಮತ್ತು ಆರೋಪಗಳು ಕೇಳಿಬಂದಿದ್ದವು. ಪಠ್ಯಪುಸ್ತಕಗಳ ಮೂಲಕ ಸೈದ್ಧಾಂತಿಕ ಹೇರಿಕೆ ಮತ್ತು ಕೇಸರೀಕರಣಕ್ಕೆ ಯತ್ನಿಸಲಾಗುತ್ತಿದೆ ಎಂದು ಸಾರ್ವಜನಿಕ ವಲಯಗಳಿಂದ ಆಕ್ಷೇಪ ವ್ಯಕ್ತವಾಗಿತ್ತು. ಇದೀಗ ಎನ್‍ಸಿಇಆರ್‌ ಟಿ ಅಧಿಕೃತವಾಗಿ ಸ್ಪಷ್ಟನೆ ಕೊಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News