ಕೇಂದ್ರದ ಮಲತಾಯಿ ಧೋರಣೆ ಬಗ್ಗೆ ಬಿಜೆಪಿಗರು ದಿಲ್ಲಿಗೆ ಹೋಗಲಿ: ಎನ್.ಎಸ್.ಭೋಸರಾಜು
ಬೆಂಗಳೂರು, ಅ.8 : ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಿದ್ದು, ಕೇಂದ್ರ ಸರಕಾರ ಪರಿಹಾರ ಕೊಡದೆ ಮಲತಾಯಿ ಧೋರಣೆ ಮಾಡುತ್ತಿದೆ. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರು ದಿಲ್ಲಿಗೆ ಹೋಗಿ ಮಾತನಾಡಬೇಕು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ವಿಕಾಸಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಹ ಪೀಡಿತ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ಮಾಡಿದರೂ ಬಿಜೆಪಿಯವರು ವಿರೋಧ ಮಾಡುತ್ತಾರೆ. ಪ್ರವಾಹ ಬಂದಾಗ ರಸ್ತೆ ಮೂಲಕ ಸಮೀಕ್ಷೆ ಮಾಡಲು ಆಗುತ್ತದೆಯೇ? ಮೋದಿ ಏನು ರಸ್ತೆ ಮೂಲಕ ನೆರೆ ಸಮೀಕ್ಷೆ ಮಾಡುತ್ತಾನಾ? ಎಂದು ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ಹರಿಹಾಯ್ದರು.
ರಾಜ್ಯಕ್ಕೆ ಪರಿಹಾರ ಕೊಡದೆ ಮಲತಾಯಿ ಧೋರಣೆ ಮಾಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ಬಿಜೆಪಿ ನಾಯಕರು ಬಾಯಿ ಬಿಡುತ್ತಿಲ್ಲ. ಇವರಿಗೆ ಏನಾದರೂ ನೀತಿ ನಿಯಮ ಇದೆಯೇ? ಬಿಜೆಪಿಗರು ಸಿಎಂ ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಾ ರಾಜ್ಯದಲ್ಲಿ ಬೊಗಳುವುದನ್ನು ಬಿಟ್ಟು ದಿಲ್ಲಿಗೆ ಹೋಗಿ ಬೊಗಳಲಿ ಎಂದು ಭೋಸರಾಜು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗೆ ಬಿಜೆಪಿಯವರು ಪೈಪೋಟಿಯ ಮೇಲೆ ಟೀಕೆ ಮಾಡುತ್ತಿದ್ದರೂ ಸಹ ಜನರು ಸಂತೋಷದಿಂದ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬಿಜೆಪಿಯವರದ್ದು ರಾಜಕೀಯ ಟೀಕೆ ಎಂಬುದು ಜನರಿಗೆ ತಿಳಿದಿದೆ ಎಂದು ಭೋಸರಾಜು ತಿಳಿಸಿದರು.
ಕಾಂಗ್ರೆಸ್‍ನಲ್ಲಿ ನವೆಂಬರ್ ಕ್ರಾಂತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಭೋಸರಾಜು, ಸರಕಾರದಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲ ಸೃಷ್ಟಿ ಮಾಡುವವರು ಬಿಜೆಪಿಯವರು. ಸತೀಶ್ ಜಾರಕಿಹೊಳಿಯವರ ಹೇಳಿಕೆ ಅದು ಅವರ ವೈಯಕ್ತಿಕ ಅಭಿಪ್ರಾಯ. ನಮ್ಮಲ್ಲಿ ಹೈಕಮಾಂಡ್ ಏನು ಹೇಳುತ್ತದೆಯೋ ಅದೇ ಆಗುತ್ತದೆ. ಸಿಎಂ, ಡಿಸಿಎಂ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಸಿಎಂ ಬದಲಾವಣೆ ಎಂದು ನೂರು ಸಾರಿ ಬಿಜೆಪಿಯವರು ಹೇಳುತ್ತಾರೆ. ಅವರಿಗೆ ನೀತಿ-ನಿಯಮವಿಲ್ಲ ಎಂದು ಕಿಡಿಕಾರಿದರು.