×
Ad

ಆನ್‍ಲೈನ್‍ನಲ್ಲಿ ಔಷಧಿಗಳ ಮಾರಾಟಕ್ಕೆ ಆಕ್ಷೇಪ: ಮೇ 20ಕ್ಕೆ ರಾಜ್ಯಾದ್ಯಂತ ‘ಮೆಡಿಕಲ್ ಶಾಪ್‍ಗಳ ಬಂದ್’!

Update: 2026-05-17 19:45 IST

ಸಾಂದರ್ಭಿಕ ಚಿತ್ರ |  Image by montypeter on Magnific

ಬೆಂಗಳೂರು : ‘ಆ್ಯಪ್’ಗಳ ಮೂಲಕ ಆನ್‍ಲೈನ್‍ನಲ್ಲಿ ಔಷಧಿಗಳ ಮಾರಾಟವನ್ನು ವಿರೋಧಿಸಿ ‘ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ’ದ ನೇತೃತ್ವದಲ್ಲಿ ಮೇ 20ರಂದು ಕರ್ನಾಟಕವು ಸೇರಿದಂತೆ ದೇಶಾದ್ಯಂತ ಔಷಧ ಮಾರಾಟ ಮಳಿಗೆಗಳ ಮಾಲಕರು ಬಂದ್ ಕರೆ ನೀಡಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿರುವ 6,500ಕ್ಕೂ ಅಧಿಕ ಮೆಡಿಕಲ್ ಶಾಪ್‍ಗಳು ಸೇರಿದಂತೆ ರಾಜ್ಯದಲ್ಲಿನ 25 ಸಾವಿರಕ್ಕೂ ಅಧಿಕ ಔಷಧಿ ಮಾರಾಟ ಮಳಿಗೆಗಳು ಬಹುತೇಕ ಬಂದ್ ಆಗುವ ಸಾಧ್ಯತೆಗಳಿದ್ದು, ‘ಜೀವ ರಕ್ಷಕ ಔಷಧ’ಗಳನ್ನೇ ಆಶ್ರಯಿಸಿರುವ ಹಿರಿಯ ನಾಗರಿಕರು ಸೇರಿದಂತೆ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ.

ಡೆಲವರಿ ‘ಆ್ಯಪ್’ ಆಧರಿತ ಆನ್‍ಲೈನ್ ಔಷಧಿ ಮಾರಾಟದಿಂದ ಸಣ್ಣ-ಮಧ್ಯಮ ಮಟ್ಟದ ಔಷಧ ಮಾರಾಟಗಾರರಿಗೆ ಮೇಲೆ ತೀವ್ರ ಸ್ವರೂಪದ ಆರ್ಥಿಕ ಹೊಡೆತ ಬೀಳುತ್ತದೆ ಎಂಬ ಆರೋಪ ಕೇಳಿಬಂದಿದೆ. ಕೋವಿಡ್ ಸಂದರ್ಭದಲ್ಲಿ ಜನ ಸಂಚಾರಕ್ಕೆ ನಿರ್ಬಂಧ ಹೇರಿ ಲಾಕ್‍ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ತಾತ್ಕಾಲಿಕವಾಗಿ ಆನ್‍ಲೈನ್ ಔಷಧ ಮಾರಾಟಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ, ಇದೀಗ ಕೋವಿಡ್ ಪರಿಸ್ಥಿತಿ ಸುಧಾರಣೆಯ ಬಳಿಕವು ಆ ಹಳೆಯ ವ್ಯವಸ್ಥೆ ಮುಂದುವರಿದಿದೆ.

ಇದೀಗ ಕಾರ್ಪೋರೇಟ್ ಕಂಪೆನಿಗಳು ‘ಆ್ಯಪ್’ ಆಧರಿತ ಆನ್‍ಲೈನ್ ವೇದಿಕೆ ಮೂಲಕ ಗ್ರಾಹಕರಿಗೆ ಭಾರಿ ಮೊತ್ತದ ರಿಯಾಯಿತಿ ಹಾಗೂ ಹತ್ತೇ ನಿಮಿಷದ ಡೆಲಿವರಿ ಸೇವೆ ಸಹಿತ ಇನ್ನಿತರ ‘ಸುಳ್ಳು ಭರವಸೆ’ಗಳ ಮೂಲಕ ಸ್ಥಳೀಯ ಔಷಧ ವ್ಯಾಪಾರಿಗಳಿಗೆ ತೀವ್ರ ಪೈಪೋಟಿ ನೀಡುತ್ತಿವೆ. ಮಾತ್ರವಲ್ಲ, ಸಣ್ಣ-ಮಧ್ಯಮ ಮಟ್ಟದ ಔಷಧ ವ್ಯಾಪಾರಿಗಳ ಬದುಕನ್ನೇ ಕಸಿದುಕೊಳ್ಳಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.

ಬಂದ್ ತೀರ್ಮಾನ: ‘ಡೆಲವರಿ ‘ಆ್ಯಪ್’ ಆಧರಿತ ಆನ್‍ಲೈನ್ ಕಂಪೆನಿಗಳ ಅನಿಯಂತ್ರಿತ ವ್ಯವಹಾರದಿಂದ ಸ್ಥಳೀಯ ಮೆಡಿಕಲ್ ಶಾಪ್‍ಗಳು ಸಂಕಷ್ಟಕ್ಕೆ ಸಿಲುಕಿದ್ದು, ಆನ್‍ಲೈನ್ ಔಷಧಿಗಳ ಮಾರಾಟ ವಿರೋಧಿಸಿ ಮೇ 20ರಂದು ರಾಜ್ಯಾದ್ಯಂತ ಎಲ್ಲ ಮೆಡಿಕಲ್ ಶಾಪ್‍ಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ’ ಎಂದು ಕರ್ನಾಟಕ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್ ತಿಳಿಸಿದೆ.

‘ಔಷಧ ಕೇವಲ ಮಾರಾಟದ ಸರಕು(ವಸ್ತು) ಅಲ್ಲ, ಜೀವ ರಕ್ಷಕವೂ ಆಗಿದೆ. ಹೀಗಾಗಿ ರೋಗಿಗಳಿಗೆ ಯಾವುದೇ ತೊಂದರೆ ಆಗಬಾರದೆಂಬ ಕಾರಣಕ್ಕೆ ಆಸ್ಪತ್ರೆಗಳ ಬಳಿಯ ಕೆಲವು ಮೆಡಿಕಲ್ ಶಾಪ್‍ಗಳಿಗೆ ಮಾತ್ರ ವಿನಾಯಿತಿ ನೀಡಿದ್ದು, ಉಳಿದಂತೆ ಬಹುತಕ ಮೆಡಿಕಲ್ ಶಾಪ್‍ಗಳನ್ನು ಒಂದು ದಿನದ ಮಟ್ಟಿಗೆ ಬಂದ್ ಮಾಡಲಾಗುವುದು ಎಂದು ಅಸೋಸಿಯೇಷನ್ ಹೇಳಿದೆ.

ಅನಧಿಕೃತವಾಗಿ ಕಾರ್ಪೋರೆಟ್ ಕಂಪೆನಿಗಳು ಡೆಲವರಿ ‘ಆ್ಯಪ್’ ಆಧರಿತ ಆನ್‍ಲೈನ್ ಔಷಧ ಮಾರಾಟ ಮಾಡುತ್ತಿವೆ. ಅಲ್ಲದೆ, ಕ್ವಿಕ್ ಕಾಮರ್ಸ್ ಔಷಧ ಡೆಲಿವರಿ ‘ಆ್ಯಪ್’ಗಳು ಡ್ರಗ್ಸ್ ಆಂಡ್ ಕಾಸ್ಮೆಟಿಕ್ಸ್ ಕಾಯ್ದೆ ಉಲ್ಲಂಘಿಸುತ್ತಿವೆ. ಅಲ್ಲದೆ, ಅಗ್ಗದ ಬೆಲೆ ಹಾಗೂ ಅಸಹಜ ರಿಯಾಯಿತಿ ನೆಪದಲ್ಲಿ ಸಣ್ಣ ಮತ್ತು ಮಧ್ಯಮ ಮಟ್ಟದ ವ್ಯಾಪಾರಿಗಳನ್ನು ಬೀದಿಗೆ ತಳ್ಳಲು ಮುಂದಾಗಿವೆ ಎಂದು ಆರೋಪ ಮಾಡಲಾಗಿದೆ.

 

ನೈತಿಕ ಬೆಂಬಲ: ‘ಆನ್‍ಲೈನ್ ಔಷಧ ಮಾರಾಟವನ್ನು ವಿರೋಧಿಸಿ ಮೇ 20ರಂದು ರಾಷ್ಟ್ರ ವ್ಯಾಪಿ ಕರೆ ನೀಡಿರುವ ಬಂದ್‍ನಲ್ಲಿ ‘ಕರ್ನಾಟಕ ಫಾರ್ಮ ರಿಟೈಲರ್ಸ್ ಆಂಡ್ ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಷನ್’ ಪಾಲ್ಗೊಳ್ಳುವುದಿಲ್ಲ. ಆದರೆ, ಕಪ್ಪುಪಟ್ಟಿ ಧರಿಸಿ ಬಂದ್‍ಗೆ ನೈತಿಕ ಬೆಂಬಲವನ್ನಷ್ಟೇ ನೀಡುತ್ತಿದ್ದೇವೆ. ರೋಗಿಗಳು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ನಮ್ಮ ಸಂಘಟನೆ ಈ ತೀರ್ಮಾನ ಕೈಗೊಂಡಿದೆ. ಔಷಧ ಕೇವಲ ವಸ್ತುವಲ್ಲ, ಜೀವದ ಜವಾಬ್ದಾರಿ’

-ಸಿ.ಜಯರಾಮ್ ಅಧ್ಯಕ್ಷ, ಕರ್ನಾಟಕ ಫಾರ್ಮ ರಿಟೈಲರ್ಸ್ ಆಂಡ್ ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಷನ್

 

ಕೇಂದ್ರದ ವಿರುದ್ಧ ಬಂದ್: ‘ಡೆಲವರಿ ‘ಆ್ಯಪ್’ ಆಧರಿತ ಆನ್‍ಲೈನ್ ಔಷಧ ಮಾರಾಟ ನಿಲ್ಲಿಸಬೇಕು. ಈ ಕುರಿತು ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರಕಾರದ ಹೊರಡಿಸಿದ್ದ ಆದೇಶ ಹಿಂಪಡೆಯಬೇಕು. ಕಾರ್ಪೊರಠ್‌ ಕಂಪೆನಿಗಳಿಂದ ನಡೆಯುತ್ತಿರುವ ಅಸಹಜ ವಿನಾಯಿತಿ ವ್ಯಾಪಾರಕ್ಕೆ ಕಡಿವಾಣ ಹಾಕಬೇಕು. ನಕಲಿ ಔಷಧಿಗಳ ಹಾವಳಿ ನಿಲ್ಲಿಸಿ, ಸೂಕ್ತ ಕಾನೂನುಗಳಿಂದ ಔಷಧ ವ್ಯಾಪಾರಿಗಳನ್ನು ರಕ್ಷಿಸಬೇಕು’ ಎಂದು ಆಗ್ರಹಿಸಿ ಔಷಧ ಮಳಿಗೆಗಳ ಬಂದ್‍ಗೆ ಕರೆ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಪ್ರಕಾಶ್ ಸಿ. ರಾಮಜೋಗಿಹಳ್ಳಿ

contributor

Similar News