ಸಚಿವ ಪ್ರಿಯಾಂಕ್ ಖರ್ಗೆ ಕಂಡರೆ ಬಿಜೆಪಿಯವರಿಗೆ ಭಯ : ಪ್ರದೀಪ್ ಈಶ್ವರ್
ಪ್ರದೀಪ್ ಈಶ್ವರ್
ಬೆಂಗಳೂರು : ‘ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕಾಂಗ್ರೆಸ್ ಪಕ್ಷದ ಫೈರ್ ಬ್ರಾಂಡ್. ಮುಂದಿನ ದಿನಗಳಲ್ಲಿ ಅವರು ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ. ಹೀಗಾಗಿ ಅವರನ್ನು ಕಂಡರೆ ಬಿಜೆಪಿಗೆ ಭಯ’ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಬಿಜೆಪಿಯವರ ಬೆದರಿಕೆಗಳಿಗೆ ಹೆದರುವವರಲ್ಲ. ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಕ್ಕೆ ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿಯೇ ಛಲವಾದಿ ನಾರಾಯಣಸ್ವಾಮಿ ಮೂಲಕ ಸುಖಾ ಸುಮ್ಮನೆ ಆರೋಪ ಮಾಡಿಸುತ್ತಿದ್ದಾರೆ ಎಂದು ಟೀಕಿಸಿದರು.
ಛಲವಾದಿ ನಾರಾಯಣಸ್ವಾಮಿ ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳಲು ಖರ್ಗೆಯವರನ್ನ ಪ್ರತಿನಿತ್ಯ ಬೈಯುವ ಕೆಲಸಕ್ಕೆ ನಿಂತಿದ್ದಾರೆ. 40 ವರ್ಷಗಳಿಂದ ನಾರಾಯಣಸ್ವಾಮಿ ಚೇಲಾಗಿರಿ ಮಾಡಿಕೊಂಡೇ ಬರುತ್ತಿದ್ದಾರೆ. ವೈಯಕ್ತಿಕ ನಿಂದನೆ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ. ಹೀಗಾಗಿ ನಾನು ನಾರಾಯಣಸ್ವಾಮಿ ಅವರನ್ನು ನಿಂದನೆ ಮಾಡುವುದಿಲ್ಲ, ಅವರ ಬಗ್ಗೆ ನನಗೆ ಗೌರವವಿದೆ ಎಂದು ಪ್ರದೀಪ್ ಈಶ್ವರ್ ನುಡಿದರು.
ಪರಮೇಶ್ವರ್ ಪ್ರಾಮಾಣಿಕರು: ಕೇಂದ್ರದ ಮೋದಿ ಸರಕಾರಕ್ಕೆ ದಲಿತ ಸಮುದಾಯದವರ ಏಳ್ಗೆ ಬೇಕಾಗಿಲ್ಲ. ಹೀಗಾಗಿಯೇ ದಲಿತರ ಮೇಲೆಯೇ ಯಾಕೆ ಈ.ಡಿ ದಾಳಿಯಾಗುತ್ತಿದೆ. ಡಾ.ಪರಮೇಶ್ವರ್ ಒಬ್ಬ ದಲಿತ ನಾಯಕರು, ಪ್ರಾಮಾಣಿಕ ರಾಜಕಾರಣಿ. ಹೀಗಾಗಿ ಮೋದಿ ಸರಕಾರ ಅವರನ್ನು ಗುರಿಯನ್ನಾಗಿಸಿಕೊಂಡು ಈಡಿ ದಾಳಿ ನಡೆಸಿದೆ ಎಂದು ಅವರು ದೂರಿದರು.
‘ಬಿಜೆಪಿಯವರಿಗೆ ಗಾನ ಬಝಾನಾ ಮಾಡುವವರು ಮಾತ್ರ ಬೇಕು?. ಬಿಜೆಪಿಯಲ್ಲಿ ಯಾರು ಹಣ ಮಾಡಿಲ್ವೇ? ಆರ್.ಅಶೋಕ್ ಏನು ಸತ್ಯಹರಿಶ್ಚಂದ್ರರೇ?. ವಿಜಯೇಂದ್ರ ಯಾರಿಗೂ ಹಣವನ್ನೇ ವರ್ಗಾಯಿಸಿಲ್ವೇ? ಯಾಕೆ ದಲಿತರ ಮೇಲೆಯೇ ದಾಳಿ ನಡೆಯುತ್ತೆ? ಬಿಜೆಪಿಯವರಿಗೆ ದಲಿತರನ್ನು ಕಂಡರೆ ಆಗಲ್ವಾ?’ ಎಂದು ಪ್ರದೀಪ್ ಈಶ್ವರ್ ಆಕ್ರೋಶ ವ್ಯಕ್ತಪಡಿಸಿದರು.
ದಾಳಿ ಮಾಡಿಸಿ: ಬಿಜೆಪಿಯವರಿಗೆ ತಾಕತ್ತಿದ್ದರೆ ನಮ್ಮ ಮೇಲೆ ದಾಳಿ ಮಾಡಿಸಿ. ನಾವೇನು ನಿಮ್ಮ ದಾಳಿಗೆ ಹೆದರಿ ಬಿಡುವುದಿಲ್ಲ. ಈಡಿ ಕಾರ್ಯವೈಖರಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ನಾವೇನು ಸುಮ್ಮನೇ ಕೂರುವುದಿಲ್ಲ. ಕಾನೂನು ಹೋರಾಟ ಮಾಡುತ್ತೇವೆ. 2028ಕ್ಕೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ರಾಹುಲ್ ಗಾಂಧಿ ಪ್ರಧಾನಿ ಆಗುವುದು ನಿಶ್ಚಿತ ಎಂದು ಪ್ರದೀಪ್ ಈಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.