ಪ್ರದೂಷ್ ಮಾಫಿ ಸಾಕ್ಷಿಯಾಗಿ ಪರಿಗಣಿಸಿ ಹೊಸದಾಗಿ ಆದೇಶ ಹೊರಡಿಸಿದ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ; ದರ್ಶನ್ ಮನವಿ ತಿರಸ್ಕೃತ
ನಟ ದರ್ಶನ್
ಬೆಂಗಳೂರು : ನಟ ದರ್ಶನ್ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೂಷ್ ರಾವ್‌ಗೆ ಕ್ಷಮಾದಾನ ನೀಡಿ, ಆತನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಮತ್ತೆ ಹೊಸದಾಗಿ ಆದೇಶ ಮಾಡಿದೆ.
ಪ್ರಕರಣದಲ್ಲಿ ಕ್ಷಮಾದಾನ ನೀಡಬೇಕು ಹಾಗೂ ನನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಕೋರಿ 14ನೇ ಆರೋಪಿಯೂ ಆದ ದರ್ಶನ್ ಆಪ್ತ ಸ್ನೇಹಿತ ಪ್ರದೂಷ್ ರಾವ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಧೀಶೆ ಸುಜಾತಾ ಸಾಂಬ್ರಾಣಿ ಅವರು ಈ ಷರತ್ತುಬದ್ಧ ಆದೇಶ ಮಾಡಿದ್ದಾರೆ.
ಇದೇ ವೇಳೆ ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಪ್ರದೂಷ್ ಕೋರಿರುವ ಅರ್ಜಿಯ ತೀರ್ಪು ಪ್ರಕಟವನ್ನು ತಡೆಹಿಡಿಯಬೇಕು ಎಂದು ಕೋರಿ ದರ್ಶನ್ ಸಲ್ಲಿಸಿದ್ದ ಮೊಮೊ ಅನ್ನು ನ್ಯಾಯಾಲಯ ತಿರಸ್ಕರಿಸಿದೆ.
ಆದೇಶ ಪ್ರಕಟಿಸಿದ ನಂತರವೂ ಈ ಷರತ್ತುಬದ್ಧ ಕ್ಷಮಾದಾನ ಆದೇಶವನ್ನು ಒಪ್ಪುತ್ತೀರಾ? ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಜೈಲಿನಿಂದ ಹಾಜರಾಗಿದ್ದ ಪ್ರದೂಷ್ ಅವರನ್ನು ನ್ಯಾಯಾಲಯವು ವಿಚಾರಿಸಿತು. ಅದಕ್ಕೆ ಒಪ್ಪುತ್ತೇನೆ ಎಂದು ಪ್ರದೂಷ್ ಉತ್ತರಿಸಿದರು. ಆ ಉತ್ತರ ದಾಖಲಿಸಿಕೊಂಡ ನ್ಯಾಯಾಲಯ ಆದೇಶ ಪ್ರತಿಯನ್ನು ಇ-ಮೇಲ್ ಮತ್ತು ಅಂಚೆ ಮೂಲಕ ಪ್ರದೂಷ್‌ಗೆ ತಲುಪಿಸುವಂತೆ ರಿಜಿಸ್ಟ್ರಿಗೆ ಹಾಗೂ ಜೈಲು ಅಧಿಕಾರಿಗಳಿಗೆ ಸೂಚಿಸಿತು. ಈ ಮೂಲಕ ಎರಡನೇ ಬಾರಿಗೆ ಪ್ರದೂಷ್‌ನನ್ನು ಮಾಫಿ ಸಾಕ್ಷಿಯಾಗಿ ನ್ಯಾಯಾಲಯ ಪರಿಗಣಿಸಿದಂತಾಗಿದೆ.
ದರ್ಶನ್ ಮೆಮೊ ತಿರಸ್ಕರಿಸಿದ ಕೋರ್ಟ್:
ಪ್ರದೂಷ್ ಜೈಲಿನಲ್ಲಿ ಬೇರೊಬ್ಬ ಕೈದಿಯ ಹೆಸರಿನಲ್ಲಿ ನೋಂದಾಯಿಸಿಕೊಂಡಿದ್ದ ಮೊಬೈಲ್ ಸಂಖ್ಯೆ ಬಳಸಿ ಮಾತನಾಡಿದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ (ಗಂಭೀರವಲ್ಲದ ಅಪರಾಧ ಪ್ರಕರಣ) ದಾಖಲಾಗಿದೆ. ಜೈಲಿನಲ್ಲಿ ಆತ ರಹಸ್ಯವಾಗಿ ಮೊಬೈಲ್ ಫೋನ್ ಬಳಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ದರ್ಶನ್ ಬಗ್ಗೆ ಅನೇಕ ವ್ಯಕ್ತಿಗಳು ಅತಿಯಾದ ಆಕ್ರೋಶ, ದ್ವೇಷ ಹೊಂದಿದ್ದಾರೆ. ಪ್ರತಿಸ್ಪರ್ಧಿಗಳು-ವಿರೋಧಿಗಳು ಸೇರಿ ಅನೇಕರು ದರ್ಶನ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ. ಇದರಿಂದ ಪ್ರದೂಷ್ ಯಾರ ಸಂಪರ್ಕದಲ್ಲಿದ್ದರು ಹಾಗೂ ಆತ ಯಾವ ಪ್ರಭಾವಕ್ಕೆ ಒಳಗಾಗಿದ್ದಾರೆ. ಪತ್ನಿಯ ಜೊತೆ ಮಾತಾಡಿದ್ದರೂ ಪ್ರದೂಷ್ ತಿಳಿಸಿದ್ದರೂ, ಆಕೆಗೆ ಯಾರು ಪ್ರಭಾವ ಬೀರಿದ್ದಾರೆ ಎನ್ನುವ ವಿಷಯ ಮುಖ್ಯ. ಆದ್ದರಿಂದ, ಎನ್‌ಸಿಆರ್‌ಗೆ ಸಂಬಂಧಿಸಿದ ತನಿಖೆ ಪೂರ್ಣಗೊಳ್ಳುವರೆಗೆ ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಪ್ರದೂಷ್ ಕೋರಿರುವ ಅರ್ಜಿ ತೀರ್ಪು ಪ್ರಕಟ ತಡೆಹಿಡಿಯಬೇಕು. ಇಲ್ಲದಿದ್ದರೆ ತನಗೆ ಗಂಭೀರ ಅನ್ಯಾಯವಾಗುತ್ತದೆ ಎಂದು ಕೋರಿ ದರ್ಶನ್ ಮೊಮೊ ಸಲ್ಲಿಸಿದ್ದರು. ಅದನ್ನು ತಿರಸ್ಕರಿಸಿ ನ್ಯಾಯಾಲಯ ಆದೇಶಿಸಿತು.
ಪ್ರದೂಷ್ ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ 2026ರ ಆಗಸ್ಟ್ 25ರಂದು ಇದೇ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ದರ್ಶನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು, ಪ್ರದೂಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಮುನ್ನ ಪ್ರೊಬೆಷನ್ ಅಧಿಕಾರಿಯಿಂದ ವರದಿ ಪಡೆದ ಸೆಷನ್ಸ್ ನ್ಯಾಯಾಲಯದ ಕ್ರಮ ಸರಿಯಿಲ್ಲ. ಇದು ಪ್ರಕ್ರಿಯಾತ್ಮಕ ಲೋಪವಾಗಿದೆ. ಆದ್ದರಿಂದ, ಪ್ರೊಬೆಷನ್ ಅಧಿಕಾರಿಯಿಂದ ವರದಿ ಪಡೆದಿರುವುದಕ್ಕೆ ಸೀಮಿತವಾಗಿ ಪ್ರದೂಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿದ ಆದೇಶವನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದ ಹೈಕೋರ್ಟ್, ಪ್ರಕರಣ ಸಂಬಂಧ ಹೊಸದಾಗಿ ಆದೇಶ ಮಾಡಬೇಕು. ಆದರೆ, ಮತ್ತೆ ವಿಚಾರಣೆ ನಡೆಸಬಾರದು ಎಂದು 2026ರ ಸೆಪ್ಟೆಂಬರ್ 8ರಂದು ಸೆಷನ್ಸ್ ನ್ಯಾಯಾಲಯಕ್ಕೆ ಸೂಚಿಸಿತ್ತು.
ಅದರಂತೆ ಬುಧವಾರ ಹೊಸದಾಗಿ ಆದೇಶ ಮಾಡಿದ ಸೆಷನ್ಸ್ ನ್ಯಾಯಾಲಯವು ಪ್ರದೂಷ್ ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿದೆ.
ಇದೇ ವೇಳೆ ಪ್ರಕರಣ ಸಂಬಂಧ ಜಾಮೀನು ಕೋರಿ ಮೊದಲನೆ ಆರೋಪಿಯಾದ ಪವಿತ್ರಾ ಗೌಡ, 6 ಮತ್ತು 7ನೇ ಆರೋಪಿಗಳಾದ ಜಗದೀಶ್ ಮತ್ತು ಅನುಕುಮಾರ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ತಿಳಿಸಿದ ಸರ್ಕಾರಿ ಅಭಿಯೋಜಕರು, ಈ ಅರ್ಜಿಗಳನ್ನು ಮುಂದಿನ ವಾರ ವಿಚಾರಣೆಗೆ ತೆಗೆದುಕೊಳ್ಳಬೇಕು ಎಂದು ಕೋರಿದರು. ಆ ಮನವಿ ಪರಿಗಣಿಸಿದ ನ್ಯಾಯಾಲಯ ವಿಚಾರಣೆಯನ್ನು ಸೆಪ್ಟೆಂಬರ್ 21ಕ್ಕೆ ಮುಂದೂಡಿತು.
ಜತೆಗೆ, ಪ್ರಕರಣದ 234, 235, 236 ಮತ್ತು 246ನೇ ಸಾಕ್ಷಿಗಳಿಗೆ ಸಾಕ್ಷ್ಯ ನುಡಿಯಲು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತು. ಅನಾರೋಗ್ಯ ತುತ್ತಾಗಿರುವ 12ನೇ ಆರೋಪಿ ಲಕ್ಷ್ಮಣ್‌ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಕೆಲವೊಂದು ಪರೀಕ್ಷೆಗಳನ್ನು ನಡೆಸಲಾಗಿದೆ. ಆ ಕುರಿತ ವರದಿ ಬರಬೇಕಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಯಿತು.