ಡೀಸೆಲ್ ಬೆಲೆ ಹೆಚ್ಚಳದ ಬೆನ್ನಲ್ಲೇ ಖಾಸಗಿ ಬಸ್ ಪ್ರಯಾಣ ದರ ಏರಿಕೆ
ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯ ಬೆನ್ನಲ್ಲೇ ರಾಜ್ಯದ ಖಾಸಗಿ ಬಸ್ ಪ್ರಯಾಣ ದರ ಶೇ.20ರಿಂದ 30ರಷ್ಟು ಏರಿಕೆ ಸಾಧ್ಯತೆಗಳಿದ್ದು, ಸಾರ್ವಜನಿಕ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆಗಳಿವೆ.
ಇಂಧನ ವೆಚ್ಚ ಹೆಚ್ಚಳದಿಂದ ಬಸ್ ಕಾರ್ಯಾಚರಣೆ ದುಬಾರಿಯಾಗಿರುವ ಹಿನ್ನೆಲೆಯಲ್ಲಿ, ಖಾಸಗಿ ಬಸ್ ಟಿಕೆಟ್ ದರವನ್ನು ಮೇ 15ರ ಮಧ್ಯರಾತ್ರಿಯಿಂದಲೇ ಶೇ.20ರಿಂದ 30ರಷ್ಟು ಹೆಚ್ಚಿಸಲು ಬಸ್ ಮಾಲಕರು ನಿರ್ಧರಿಸಿದ್ದಾರೆ. ಇದರಿಂದ ಸಾರ್ವಜನಿಕ ಪ್ರಯಾಣಿಕರಿಗೆ ಹೊರೆಯಾಗಲಿದ್ದು, ಬೆಲೆ ಏರಿಕೆಯ ಪರಿಣಾಮ ಜನಸಾಮಾನ್ಯರ ಮೇಲೆ ಬೀಳಲಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಇದೀಗ ಸಾರಿಗೆ ವೆಚ್ಚವೂ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಡೀಸೆಲ್ ದರ ನಿರಂತರ ಏರಿಕೆಯಿಂದ ಖಾಸಗಿ ಬಸ್‍ಗಳ ನಿರ್ವಹಣೆ, ಚಾಲಕರ ಹಾಗೂ ಸಿಬ್ಬಂದಿಗಳ ವೇತನ ಸೇರಿದಂತೆ ವಿವಿಧ ವೆಚ್ಚಗಳು ಹೆಚ್ಚಾಗಿದ್ದು, ಬಸ್ ಟಿಕೆಟ್ ದರ ಏರಿಕೆ ಅನಿವಾರ್ಯ ಎಂದು ಖಾಸಗಿ ಬಸ್ ಮಾಲಕರು ತಿಳಿಸಿದ್ದಾರೆ.