ʼಟ್ಟೀಟ್ ಮಾಡಿದರೆ ಮಾತ್ರ ವಿಪಕ್ಷ ನಾಯಕ ಎಂಬ ಕಲ್ಪನೆಯಿಂದ ಹೊರಬನ್ನಿʼ : ಆರ್.ಅಶೋಕ್‌ಗೆ ರಾಮಲಿಂಗಾರೆಡ್ಡಿ ತಿರುಗೇಟು
ಆರ್.ಅಶೋಕ್/ರಾಮಲಿಂಗಾರೆಡ್ಡಿ
ಬೆಂಗಳೂರು : ‘ಆರ್.ಅಶೋಕ್ ಅವರು ಟ್ಟೀಟ್ ಮಾಡಿದರೆ ಮಾತ್ರ ವಿರೋಧ ಪಕ್ಷದ ನಾಯಕರು ಎಂದು ಗುರುತಿಸುತ್ತಾರೆಂಬ ಕಲ್ಪನಾ ಲೋಕದಿಂದ ಹೊರ ಬರಬೇಕು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದ್ದಾರೆ.
ಶುಕ್ರವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ವಿಪಕ್ಷ ನಾಯಕ ಆರ್. ಅಶೋಕ್ ಅವರು ಈ ಹಿಂದೆ ಸಾರಿಗೆ ಮಂತ್ರಿಯಾಗಿದ್ದಾಗಲೇ ಮೊದಲ ಬಾರಿಗೆ ವೇತನ ಪರಿಷ್ಕರಣೆಗಾಗಿ ಸಾರಿಗೆ ಸಿಬ್ಬಂದಿಯ ಮುಷ್ಕರ ಹೂಡುವ ಪದ್ಧತಿ ಪ್ರಾರಂಭವಾಗಿದೆ. ಸಾರಿಗೆ ನೌಕರರ ಸಂಘಟನೆಗಳು ಶೇ.35ರಷ್ಟು ವೇತನ ಪರಿಷ್ಕರಣೆಗೆ ಬೇಡಿಕೆ ಇಟ್ಟಿದ್ದವು. ಆಗ ಕೇವಲ ಶೇ.10ರಷ್ಟು ವೇತನ ಪರಿಷ್ಕರಣೆ ಮಾಡಲಾಗಿದೆ ಎಂದಿದ್ದಾರೆ.
ಬಿಜೆಪಿ ಪಕ್ಷದ ಆಡಳಿತ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ 15 ದಿವಸಗಳ ಕಾಲ ಮುಷ್ಕರ ನಡೆದಿದೆ. ಬಿಜೆಪಿ ಪಕ್ಷದ ಅವಧಿಯಲ್ಲಿ ಮುಷ್ಕರದ ಹೆಸರಿನಲ್ಲಿ ಸರಿಸುಮಾರು 3500 ನೌಕರರನ್ನು ಕೆಲಸದಿಂದ ವಜಾ, ಅಮಾನತು ಮಾಡಲಾಗಿದೆ. ಅಲ್ಲದೆ ನೌಕರರ ವಿರುದ್ಧ ಎಫ್‍ಐಆರ್‍ಗಳನ್ನು ದಾಖಲಿಸಲಾಗಿದೆ. ಇಂದಿಗೂ ಅವರು ಕೋರ್ಟ್‍ಗಳಿಗೆ ಅಲೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಸರಕಾರವಿದ್ದಾಗ ಸಾರಿಗೆ ಸಂಸ್ಥೆಗಳ ನೌಕರರ ವೇತನ ಪರಿಷ್ಕರಣೆ ಮಾಡಿ, 38 ತಿಂಗಳ ಹಿಂಬಾಕಿ ವೇತನ ಪಾವತಿ ಬಾಕಿ ಇಡಲಾಗಿದೆ. ಈ ಸಂಬಂಧ ಬಜೆಟ್‍ನಲ್ಲಿ ಯಾವುದೇ ಅನುದಾನವನ್ನು ಮೀಸಲಿಡದೆ ತಪ್ಪಾದ ಸರಕಾರಿ ಆದೇಶ ಹೊರಡಿಸಿ ತೊಡಕು ಉಂಟು ಮಾಡಲಾಗಿದೆ. ಬಿಜೆಪಿ ಆಡಳಿತ ಅವಧಿಯಲ್ಲಿ ನೀಡಬೇಕಾಗಿದ್ದ ನಿವೃತ್ತ ನೌಕರರ ವೇತನ ಪರಿಷ್ಕರಣೆ ಉಪಧನ ಬಾಕಿ 224 ಕೋಟಿ ರೂ.ಗಳಿಗೂ ಯಾವುದೇ ಅನುದಾನವನ್ನು ಮೀಸಲಿಡಲಿಲ್ಲ. ಆದರೆ ನಮ್ಮ ಸರಕಾರವು 2025ರಲ್ಲಿ ಹಣ ಬಿಡುಗಡೆಗೊಳಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಬಿಜಿಪಿ ಆಡಳಿತ ಅವಧಿಯ ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್ ಬಾಕಿ ಹಣ ಪಾವತಿಗಾಗಿ, 2025ರಲ್ಲಿ ನಮ್ಮ ಸರಕಾರವು ಬ್ಯಾಂಕ್‍ನಿಂದ 2 ಸಾವಿರ ಕೋಟಿ ರೂ. ಸಾಲವನ್ನು ಪಡೆಯಲು ಸಾರಿಗೆ ಸಂಸ್ಥೆಗಳಿಗೆ ಅನುಮತಿಸಿದೆ. ಈ ಸಾಲದ ಅಸಲು ಮತ್ತು ಬಡ್ಡಿಯನ್ನು ನಮ್ಮ ಸರಕಾರವು ಪಾವತಿಸುತ್ತಿದೆ. ಹೀಗಾಗಿ ಸಾರಿಗೆ ನೌಕರರ ಬಗ್ಗೆ ಈ ಅನುಕಂಪದ ಮಾತನ್ನು ಆಡಲು ನಿಮಗೆ ಯಾವ ನೈತಿಕತೆ ಇದೆ ಎಂದು ಆರ್. ಅಶೋಕ್ ಅವರನ್ನು ಪ್ರಶ್ನಿಸಿದ್ದಾರೆ.
ಕಾರ್ಮಿಕ ಸಂಘಟನೆಗಳ ಬೇಡಿಕೆಗೆ ಸ್ಪಂದಿಸುವ ನಿಟ್ಟಿನಲ್ಲಿ ಸರಕಾರ 11 ಬಾರಿ ಸಭೆಗಳನ್ನು ನಡೆಸಿದೆ. ಸಾರಿಗೆ ನೌಕರರಿಗೆ ಶೇ.12.5ರಷ್ಟು ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿದೆ. ನಾಲ್ಕು ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳು 72.80 ಕೋಟಿ ರೂ., ಪ್ರತಿ ವರ್ಷ 873.64 ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ಸಾರಿಗೆ ನೌಕರರ ವೇತನ ಪರಿಷ್ಕರಣೆಯ 26 ತಿಂಗಳ ಹಿಂಬಾಕಿ ಮೊತ್ತವಾದ 1271.92 ಕೋಟಿ ರೂ.ಗಳಲ್ಲಿ 450 ಕೋಟಿ ರೂ. ಅನ್ನು ಬಿಡುಗಡೆ ಮಾಡಿದ್ದು, ನೌಕರರ ಖಾತೆಗಳಿಗೆ ಜಮಾ ಮಾಡಲಾಗಿದೆ. ಇನ್ನು ನಾಲ್ಕು ಸಾರಿಗೆ ಸಂಸ್ಥೆಗಳ ಬಾಕಿ ಹೊಣೆಗಾರಿಕೆಯು 7130.80 ಕೋಟಿ ರೂ. ಇದೆ. ಇದರಲ್ಲಿ 2298.20 ಕೋಟಿ ರೂ. ನೌಕರರ ಭವಿಷ್ಯ ನಿಧಿ ಬಾಕಿ ಮತ್ತು 822.26 ಕೋಟಿ ರೂ.ಇಂಧನ ಪಾವತಿ ಬಾಕಿಯಾಗಿದೆ ಎಂದು ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.
ಮಾನ್ಯ ಶ್ರೀ @RAshokaBJP ರವರೇ, ತಾವು ಟ್ಟೀಟ್ ಮಾಡಿದರೆ ಮಾತ್ರ ವಿರೋಧ ಪಕ್ಷದ ನಾಯಕರು ಎಂದು ಗುರುತಿಸುತ್ತಾರೆ ಎಂಬ ಕಲ್ಪನಾ ಲೋಕದಿಂದ ಹೊರ ಬನ್ನಿ..
— Ramalinga Reddy (@RLR_BTM) May 15, 2026
ಕಾರ್ಮಿಕ ಸಂಘಟನೆಗಳ ಬೇಡಿಕೆಗೆ ಸ್ಪಂದಿಸುವ ನಿಟ್ಟಿನಲ್ಲಿ ನಾವು ಅವರೊಡನೆ 11 ಬಾರಿ ಸಭೆಗಳನ್ನು ನಡೆಸಿದ್ದೇವೆ.
🔺 ಸಾರಿಗೆ ನೌಕರರಿಗೆ 12.5 % ವೇತನ ಪರಿಷ್ಕರಣೆ ಮಾಡಿ ಸರ್ಕಾರವು… https://t.co/j6uGYADogp