×
Ad

ಜೂ.20ರಿಂದ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ : ಮಹತ್ವದ ಮಾಹಿತಿ ಹಂಚಿಕೊಂಡ ಮುಖ್ಯ ಚುನಾವಣಾಧಿಕಾರಿ

"ಜೂ.30ರಿಂದ ಜು.29ರವರೆಗೆ ಬಿಎಲ್‌ಒಗಳಿಂದ ಮನೆ ಮನೆ ಭೇಟಿ"

Update: 2026-05-15 18:38 IST

ಸಾಂದರ್ಭಿಕ ಚಿತ್ರ (PTI)

ಬೆಂಗಳೂರು : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜೂ.20ರಿಂದ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್)ಯನ್ನು ಕೈಗೊಳ್ಳಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ತಿಳಿಸಿದರು.

ಶುಕ್ರವಾರ ನಗರದ ಶೇಷಾದ್ರಿ ರಸ್ತೆಯಲ್ಲಿರುವ ನಿರ್ವಾಚನ ನಿಲಯ(ಮುಖ್ಯ ಚುನಾವಣಾಧಿಕಾರಿ ಕಚೇರಿ)ದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಅಕ್ಟೋಬರ್ 1 ಅನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಿ ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಕೈಗೊಳ್ಳಲಾಗುವುದು. ಜೂ.20 ರಿಂದ 29ರವರೆಗೆ ಸಿದ್ಧತೆ, ತರಬೇತಿ ಹಾಗೂ ಮುದ್ರಣ ಕಾರ್ಯ, ಜೂ.30ರಿಂದ ಜು.29ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿ(ಬಿಎಲ್‌ಒ)ಗಳಿಂದ ಮನೆ ಮನೆ ಭೇಟಿ, ಜು.29ರೊಳಗೆ ಮತಗಟ್ಟೆಗಳ ತಾರ್ಕಿಕ ಮರು ಹೊಂದಾಣಿಕೆ ಕಾರ್ಯ ನಡೆಯಲಿದೆ ಎಂದು ಹೇಳಿದರು.

ಕರಡು ಮತದಾರರ ಪಟ್ಟಿಯನ್ನು ಆ.5ರಂದು ಪ್ರಕಟಿಸಲಾಗುವುದು, ಆ.5 ರಿಂದ ಸೆ.4ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು, ಆ.5 ರಿಂದ ಅ.3ರವರೆಗೆ ನೋಟಿಸ್ ಹಂತ ಹಾಗೂ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಮಾಡಲಾಗುವುದು. ಅ.7ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅನ್ಬುಕುಮಾರ್ ತಿಳಿಸಿದರು.

ರಾಜ್ಯದಲ್ಲಿ 59,050 ಮತಗಟ್ಟೆ ಮಟ್ಟದ ಅಧಿಕಾರಿಗಳು ಪರಿಷ್ಕರಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಒಟ್ಟು 5,55,74,064 ಮತದಾರರಿದ್ದಾರೆ. ಅದರಲ್ಲಿ 4,80,39,560 ಮತದಾರರನ್ನು ಮ್ಯಾಪಿಂಗ್ ಮಾಡಿದ್ದೇವೆ. ಎಸ್‌ಐಆರ್ ಪ್ರಕ್ರಿಯೆ ವೇಳೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆ(ಎನುಮೆರೇಷನ್ ಫಾರ್ಮ್)ಗಳನ್ನು ವಿತರಣೆ ಹಾಗೂ ಸಂಗ್ರಹಣೆ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ರಾಜಕೀಯ ಪಕ್ಷಗಳಿಂದ ಈಗಾಗಲೆ 25,284 ಬೂತ್ ಮಟ್ಟದ ಏಜೆಂಟ್(ಬಿಎಲ್‌ಎ)ಗಳನ್ನು ನೇಮಕ ಮಾಡಲಾಗಿದೆ. ಪ್ರತಿಯೊಂದು ಮತಗಟ್ಟೆಗೆ ಬೂತ್ ಮಟ್ಟದ ಏಜೆಂಟ್‌ಗಳನ್ನು ನೇಮಕ ಮಾಡುವಂತೆ ರಾಜಕಿಯ ಪಕ್ಷಗಳಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.

ಪರಿಷ್ಕರಣೆಯ ಪ್ರಕ್ರಿಯೆ, ನಮೂನೆಗಳು ಹಾಗೂ ವೇಳಾಪಟ್ಟಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳ ಅಧಿಕೃತ ಜಾಲತಾಣಗಳು, ಮುಖ್ಯ ಚುನಾವಣಾಧಿಕಾರಿ ಹಾಗೂ ಭಾರತದ ಚುನಾವಣಾ ಆಯೋಗದ ಅಧಿಕೃತ ಜಾಲತಾಣಗಳಲ್ಲಿ ಪ್ರಕಟಿಸಲಾಗುವುದು ಎಂದು ಅನ್ಬುಕುಮಾರ್ ಮಾಹಿತಿ ನೀಡಿದರು.

ಎನುಮೆರೇಷನ್ ಫಾರ್ಮ್: ಎಸ್‌ಐಆರ್ ಪ್ರಕ್ರಿಯೆಯಲ್ಲಿ ಗಣತಿ ನಮೂನೆ(ಎನುಮೆರೇಷನ್ ಫಾರ್ಮ್)ಗಳನ್ನು ಪ್ರತಿಯೊಬ್ಬ ಮತದಾರರಿಗೂ ದ್ವಿಪತ್ರಿಯಲ್ಲಿ ಬಿಎಲ್‌ಒಗಳು ಮನೆ ಮನೆಗೆ ತಲುಪಿಸಲಿದ್ದಾರೆ. ಬಿಎಲ್‌ಒ ಹಸ್ತಾಕ್ಷರ ಇರುವಂತಹ ಒಂದು ಪ್ರತಿಯನ್ನು ಮತದಾರರು ತಮ್ಮ ಬಳಿ ಇಟ್ಟುಕೊಂಡು, ಮತ್ತೊಂದು ಪ್ರತಿಯಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಬಿಎಲ್‌ಒಗಳಿಗೆ ಹಸ್ತಾಂತರಿಸಬೇಕು ಎಂದು ಅವರು ತಿಳಿಸಿದರು.

ಮತದಾರರ ಪಟ್ಟಿಯಲ್ಲಿರುವಂತೆ ಭಾವಚಿತ್ರ, ಹೆಸರು, ಮತಗಟ್ಟೆ ಸಂಖ್ಯೆ, ವಿಧಾನಸಭಾ ಕ್ಷೇತ್ರದ ಹೆಸರು ಆ ಅರ್ಜಿಯಲ್ಲಿ ಮುದ್ರಣವಾಗಿರುತ್ತದೆ. ಪ್ರತಿಯೊಬ್ಬ ಮತದಾರರಿಗೂ ನೀಡುವಂತಹ ಅರ್ಜಿಯಲ್ಲಿ ಕ್ಯೂರ್ ಕೋಡ್ ವಿಭಿನ್ನವಾಗಿರುತ್ತದೆ. ಬಿಎಲ್‌ಒ ಆ್ಯಪ್ ಮೂಲಕ ಕ್ಯೂರ್ ಕೋಡ್ ಸ್ಕ್ಯಾನ್‌ ಮಾಡಿದರೆ ಮತದಾರನ ಮಾಹಿತಿ ಲಭ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಒಂದು ವೇಳೆ ಮತದಾರರ ಭಾವಚಿತ್ರ ಹಳೆಯದಾಗಿದ್ದರೆ ಎನುಮರೇಷನ್ ಅರ್ಜಿಯೊಂದಿಗೆ ಹೊಸ ಭಾವಚಿತ್ರ ನೀಡಬಹುದು. ಇಲ್ಲದಿದ್ದರೆ ಬಿಎಲ್‌ಒಗಳೆ ಆ್ಯಪ್ ಮೂಲಕ ಭಾವಚಿತ್ರ ಪಡೆದುಕೊಳ್ಳುತ್ತಾರೆ. 2002ರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದ್ದರೆ ಅದರ ವಿವರವನ್ನು ನೀಡಬೇಕು. ಇಲ್ಲದಿದ್ದರೆ ತಮ್ಮ ಸಂಬಂಧಿ(ತಂದೆ, ತಾತ ಇತ್ಯಾದಿ)ಯ ಮಾಹಿತಿ ಒದಗಿಸಬೇಕು ಎಂದು ಅನ್ಬುಕುಮಾರ್ ಹೇಳಿದರು.

ಅರ್ಜಿಯಲ್ಲಿ ಮತದಾರರು ಸಹಿ ಅಥವಾ ಎಡಗೈ ಹೆಬ್ಬೆರಳಿನ ಗುರುತು ಹಾಕಬಹುದು. ಒಂದು ವೇಳೆ ಮತದಾರರು ಆ ಸಂದರ್ಭದಲ್ಲಿ ಲಭ್ಯವಿಲ್ಲದಿದ್ದರೆ ಕುಟುಂಬದಲ್ಲಿನ ವಯಸ್ಕ ಸದಸ್ಯರು ಸಹಿ ಮಾಡಿ ಬಿಎಲ್‌ಒಗಳಿಗೆ ಅರ್ಜಿ ಹಸ್ತಾಂತರಿಸಬಹುದು. 2002ರ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಅಥವಾ ಡೇಟಾ ಹೊಂದಾಣಿಕೆ ಆಗದಿದ್ದರೆ ಚುನಾವನಾಧಿಕಾರಿ ನೋಟಿಸ್ ನೀಡಿ ಅಗತ್ಯ ದಾಖಲೆಗಳನ್ನು ಕೇಳುತ್ತಾರೆ ಎಂದು ಅವರು ನುಡಿದರು.

ದಾಖಲೆಗಳು: ಕೇಂದ್ರ ಅಥವಾ ರಾಜ್ಯ ಸರಕಾರ ನೀಡಿರುವ ಪಿಂಚಣಿಗೆ ಸಂಬಂಧಿಸಿದ ಗುರುತಿನ ಚೀಟಿ, ಬ್ಯಾಂಕ್, ಅಂಚೆ ಕಚೇರಿ, ಎಲ್‌ಐಸಿಯ ದಾಖಲೆಗಳು, ಜನನ ಪ್ರಮಾಣ ಪತ್ರ, ಪಾಸ್‌ಪೋರ್ಟ್, ಶೈಕ್ಷಣಿಕ ದಾಖಲೆಗಳು, ಸರಕಾರ ನೀಡಿರುವ ಖಾಯಂ ನಿವಾಸದ ದಾಖಲೆ, ಅರಣ್ಯ ಹಕ್ಕು ಪ್ರಮಾಣ ಪತ್ರ, ಹಿಂದುಳಿದ, ಎಸ್.ಸಿ, ಎಸ್.ಟಿ ಅಥವಾ ಯಾವುದಾದರೂ ಜಾತಿ ಪ್ರಮಾಣ ಪತ್ರ, ಭೂಮಿ, ಮನೆ ಹಂಚಿಕೆ ಮಾಡಿರುವ ಪ್ರಮಾಣ ಪತ್ರ, ಆಧಾರ್ ಅನ್ನು ಸಲ್ಲಿಸಬಹುದು ಎಂದು ಅವರು ಹೇಳಿದರು.

ಮತದಾರರಿಗೆ ಅನುಕೂಲ ಕಲ್ಪಿಸಲು ಗ್ರಾಮ ಪಂಚಾಯತಿ ಹಾಗೂ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಾರ್ಡ್ ಮಟ್ಟದಲ್ಲಿ ಮತದಾರರ ಸಹಾಯ ಕೇಂದ್ರವನ್ನು ಸ್ಥಾಪನೆ ಮಾಡಲಾಗುವುದು. ಯಾವುದೆ ಅರ್ಹ ಮತದಾರರು ಕೈ ಬಿಟ್ಟು ಹೋಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ನುಡಿದರು.

 

ಏನಿದು ಅರ್ಹತಾ ದಿನಾಂಕ?

1950ನೆ ಸಾಲಿನ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 14(ಬಿ) ಪ್ರಕಾರ ನಾಲ್ಕು ಅರ್ಹತಾ ದಿನಾಂಕ(ಜನವರಿ 1, ಎಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1)ಗಳಿವೆ. ಕರ್ನಾಟಕದಲ್ಲಿ ಅರ್ಹತಾ ದಿನಾಂಕ ಅಕ್ಟೋಬರ್ 1 ಆಗಿದೆ. ಈ ಅವಧಿಯಲ್ಲಿ ಮತದಾರರ ಪಟ್ಟಿಯ ಸಿದ್ಧತೆ, ಪರಿಷ್ಕರಣೆ ಮಾಡುವುದಾಗಿದೆ. ಈ ದಿನಾಂಕದಂದು 18 ವರ್ಷ ಪೂರ್ಣಗೊಂಡಿರುವವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬಹುದಾಗಿದೆ.

 

‘ರಾಜ್ಯದಲ್ಲಿ ಶೇ.86.46ರಷ್ಟು ಮ್ಯಾಪಿಂಗ್’ :

ರಾಜ್ಯದಲ್ಲಿ ಶೇ.86.46ರಷ್ಟು ಮತದಾರರ ಮ್ಯಾಪಿಂಗ್ ಕಾರ್ಯ ಆಗಿದೆ. ಕೊಡಗು ಜಿಲ್ಲೆ-ಶೇ.96, ಮಂಡ್ಯ-ಶೇ.95.48, ಬಳ್ಳಾರಿ-ಶೇ.95.40, ಬಿಬಿಎಂಪಿ ದಕ್ಷಿಣ-ಶೇ.64, ಬಿಬಿಎಂಪಿ ಕೇಂದ್ರ-64, ಬಿಬಿಎಂಪಿ ಉತ್ತರ- ಶೇ.67, ಬೆಂಗಳೂರು ನಗರ-ಶೇ.75ರಷ್ಟು ಮ್ಯಾಪಿಂಗ್ ಆಗಿದೆ. ಅದೇ ರೀತಿ, ವಿಧಾನಸಭಾ ಕ್ಷೇತ್ರವಾರು ಗಮನಿಸಿದರೆ ಚಿತ್ತಾಪುರ-ಶೇ.99, ನವಲಗುಂದ-ಶೇ.99, ಚಿಂಚೋಳ್ಳಿ-ಶೇ.99, ಕುಂದಗೋಳ-ಶೇ.99ರಷ್ಟು ಮ್ಯಾಪಿಂಗ್ ಆಗಿದೆ. 130 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.90ಕ್ಕಿಂತ ಹೆಚ್ಚು ಮ್ಯಾಪಿಂಗ್ ಆಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಗರಿಷ್ಠ ಪ್ರಮಾಣದಲ್ಲಿ ಮ್ಯಾಪಿಂಗ್ ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಲಾಗುವುದು.

ವಿ.ಅನ್ಬುಕುಮಾರ್, ಮುಖ್ಯ ಚುನಾವಣಾಧಿಕಾರಿ

ಎಸ್‌ಐಆರ್ ಪ್ರಕ್ರಿಯೆಯಲ್ಲಿ 31 ಜಿಲ್ಲಾಧಿಕಾರಿಗಳು, 35 ಸಹಾಯಕ ಜಿಲ್ಲಾ ಚುನಾವಣಾಧಿಕಾರಿಗಳು(ಎಡಿಇಒ), 224 ಚುನಾವಣಾ ನೋಂದಣಿ ಅಧಿಕಾರಿಗಳು(ಇಆರ್‌ಒ), 336 ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳು(ಎಇಆರ್‌ಒ), 5905, ಮತಗಟ್ಟೆ ಮಟ್ಟದ ಅಧಿಕಾರಿಗಳ ಮೇಲ್ವಿಚಾರಕರು(ಬಿಎಲ್‌ಒ ಸೂಪರ್ ವೈಸರ್), 59,050 ಮತಗಟ್ಟೆ ಮಟ್ಟದ ಅಧಿಕಾರಿಗಳು(ಬಿಎಲ್‌ಒ), ಜಿಲ್ಲಾ ಪಂಚಾಯಿತಿ ಸಿಇಒಗಳು ಭಾಗವಹಿಸಲಿದ್ದಾರೆ. ಅಲ್ಲದೆ, ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲಿದ್ದೇವೆ ಎಂದು ಅನ್ಬುಕುಮಾರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News