ರಾಜ್ಯಸಭೆ ಸ್ಥಾನ ಪಡೆಯಲು ಮೋಹನ್ ದಾಸ್ ಪೈಯಿಂದ ರಾಜ್ಯ ಸರಕಾರದ ಟೀಕೆ : ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
ಬೆಂಗಳೂರು : ರಾಜ್ಯಸಭೆ ಸದಸ್ಯ ಸ್ಥಾನ ಪಡೆಯಲು ಉದ್ಯಮಿ ಮೋಹನ್ ದಾಸ್ ಪೈ ಸುಮ್ಮನೆ ರಾಜ್ಯ ಸರಕಾರವನ್ನು ಟೀಕಿಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಮೋಹನ್ ದಾಸ್ ಪೈ ಅವರಿಗೆ ಉನ್ನತ ಹುದ್ದೆ ಬೇಕಾಗಿರಬೇಕು. ಅದಕ್ಕೆ ಕಾಂಗ್ರೆಸ್ ಸರಕಾರದ ಸಚಿವರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದರು.
ಮೋಹನ್ ದಾಸ್ ಪೈ ಅವರಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ನಾನು ಟಾರ್ಗೆಟ್ ಆಗಿದ್ದೇವೆ. ಅದಕ್ಕೆ ಸೋಷಿಯಲ್ ಮೀಡಿಯಾ ವಾರಿಯರ್ಸ್ ಆಗಿದ್ದಾರೆ. ಆಗ ತಿಂಗಳಿಗೆ ಒಮ್ಮೆ ಮಾತನಾಡುತ್ತಿದ್ದರು. ಈಗ ವಾರವೂ ಮಾತನಾಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಇತ್ತೀಚೆಗೆ ಉದ್ಯಮಿ ಮೋಹನ್ ದಾಸ್ ಪೈ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ‘ಡಿ.ಕೆ.ಶಿವಕುಮಾರ್ ಬೆಂಗಳೂರು ಉಸ್ತುವಾರಿ ಸಚಿವರಾಗಿ ಬಂದು ಎರಡು ವರ್ಷ ಆಯಿತು. ನಗರಕ್ಕೆ ಪ್ರಬಲ ಸಚಿವರು ಸಿಕ್ಕಿದ್ದಾರೆಂದು ನಾವೆಲ್ಲಾ ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದೆವು. ಆದರೆ, ನಮ್ಮ ಜೀವನ ಇನ್ನಷ್ಟು ಕೆಟ್ಟದಾಗಿದೆ. ಬೆಂಗಳೂರು ನಗರಕ್ಕೆ ದೊಡ್ಡ ದೊಡ್ಡ ಯೋಜನೆ ಘೋಷಿಸಲಾಗುತ್ತದೆ. ಆದರೆ, ಸರಕಾರ ಅದನ್ನು ಜಾರಿ ಮಾಡಲು ದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಯಾವುದನ್ನೂ ಸಮಯಕ್ಕೆ ಸರಿಯಾಗಿ ಜಾರಿ ಮಾಡಿಲ್ಲ’ ಎಂದು ಟೀಕಿಸಿದ್ದರು.