×
Ad

‘ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಎಚ್ಚರಿಕೆ ವಹಿಸಿ’; ಜಿಲ್ಲಾ ಪಂಚಾಯತ್ ಸಿಇಒಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ

Update: 2025-07-07 21:10 IST

ಬೆಂಗಳೂರು : ಜಿಲ್ಲೆಗಳಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಆದ್ಯತೆಯ ಮೇರೆಗೆ ಆಸಕ್ತಿ ವಹಿಸಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.

ಸೋಮವಾರ ನಗರದಲ್ಲಿರುವ ರಾಜ್ಯ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ಸಂಸ್ಥೆ (ಕೆ.ಆರ್.ಐ.ಡಿ.ಎಲ್) ಕಚೇರಿಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಅವರು ಐದು ಗಂಟೆಗಳಿಗೂ ಹೆಚ್ಚು ಕಾಲ ವಿಡಿಯೋ ಕಾನ್ಫರೆನ್ಸ್ ನಡೆಸಿ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.

ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಗ್ರಾಮೀಣ ನೀರು ಸರಬರಾಜು ಇಲಾಖೆ ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಲಭ್ಯ ಅಭಿವೃದ್ಧಿ ಸಂಸ್ಥೆಯ ಮೂಲಕ ನಡೆಯುತ್ತಿರುವ ಕಾಮಗಾರಿಗಳನ್ನು ನಿಯಮಿತವಾಗಿ ಪರಿಶೀಲನೆ ಮಾಡುವ ಹೊಣೆಗಾರಿಕೆಯನ್ನು ಅಧಿಕಾರಿಗಳು ಆದ್ಯತೆಯ ಮೇಲೆ ತೆಗೆದುಕೊಳ್ಳಬೇಕೆಂದು ಅವರು ಸಲಹೆ ನೀಡಿದರು.

ಈ ತಿಂಗಳ 15 ರಿಂದ 31ರವರೆಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ತಮ್ಮ ಜಿಲ್ಲೆಗಳಲ್ಲಿ ತೀವ್ರ ಪ್ರವಾಸ ಮಾಡಿ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಬೇಕಲ್ಲದೆ, ಕೆಲವಾರು ಕಡೆ ಕಾಮಗಾರಿಗಳು ಕುಂಠಿತಗೊಂಡಿದ್ದು ಅವುಗಳಿಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಬೇಕು ಹಾಗೂ ಈ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಕುರಿತು ಪೂರ್ಣ ವಿವರಗಳನ್ನು ಒಳಗೊಂಡ ವರದಿಯನ್ನು ಆಗಸ್ಟ್ ಮೊದಲ ವಾರದಲ್ಲಿ ಸರಕಾರಕ್ಕೆ ರವಾನಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಆದೇಶ ನೀಡಿದರು.

ಹಸಿರುಪಥ: ರಸ್ತೆ ಬದಿ ಗಿಡ ನೆಡುವ ‘ಹಸಿರು ಪಥ’ ಕಾರ್ಯಕ್ರಮಕ್ಕೆ ಕಲಬುರಗಿಯಲ್ಲಿ ಚಾಲನೆ ನೀಡಲಾಗಿದೆ, ಮಳೆಗಾಲ ಮುಗಿಯುವುದರೊಳಗೆ ಗಿಡಗಳನ್ನು ನೆಡಲು ನರೇಗಾ ಮೂಲಕ ವ್ಯಾಪಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ಜಿಲ್ಲೆಗಳಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ಅಧಿಕಾರಿಗಳೊಂದಿಗೆ ಚರ್ಚಿಸಿ ಸಸಿಗಳನ್ನು ನೆಡಬೇಕಾದ ಗ್ರಾಮೀಣ ರಸ್ತೆಗಳನ್ನು ನಿರ್ಣಯಿಸಬೇಕೆಂದು ಅವರು ಸೂಚಿಸಿದರು.

ಮಳೆಗಾಲ ಆರಂಭಗೊಂಡಿದ್ದು ಕೆಲವೆಡೆ ವ್ಯಾಪಕ ಮಳೆ ಆಗುತ್ತಿದೆ, ಮುಂದಿನ ಕೆಲವು ತಿಂಗಳು ಮಳೆ ಆಗುವ ಮುನ್ಸೂಚನೆಯಿದ್ದು, ಕುಡಿಯುವ ನೀರು ಕಲುಷಿತಗೊಳ್ಳುವ ಸಾಧ್ಯತೆಗಳಿರುವುದರಿಂದ ರಾಜ್ಯದಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಜಲಮೂಲಗಳ ಬಳಿ ಪರಿಸರವನ್ನು ಶುಚಿಯಾಗಿರಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದ ಪ್ರಿಯಾಂಕ್ ಖರ್ಗೆ, ನೀರು ಕಲುಷಿತಗೊಂಡು ಯಾವುದೇ ದುಷ್ಪರಿಣಾಮಗಳಾದಲ್ಲಿ ಇಂಜನಿಯರ್‍ಗಳು, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳನ್ನು ಹೊಣೆಯಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಘನತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಬರತ್ತಿವೆ, ಜಿಲ್ಲಾ ಮಟ್ಟದಲ್ಲಿ ಆ ಪ್ರದೇಶಗಳಿಗೆ ಅನುಗುಣವಾಗಿ ತ್ಯಾಜ್ಯ ನಿರ್ವಹಣೆಗೆ ಮಾರ್ಗೋಪಾಯಗಳನ್ನು ಕಂಡು ಹಿಡಿದು ಸರಕಾರಕ್ಕೆ ವರದಿ ಸಲ್ಲಿಸಬೇಕೆಂದು ಪ್ರಿಯಾಂಕ್ ಖರ್ಗೆ ನೀಡಿದರು.

ಸಾರ್ವಜನಿಕರು ನೀಡುವ ದೂರು, ಮನವಿಗಳನ್ನು ಆದ್ಯತೆಯ ಮೇಲೆ ಪರಿಹರಿಸಬೇಕೆಂದು ಇದೇ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಸಮೀರ್ ಶುಕ್ಲ, ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್, ಗ್ರಾಮೀಣ ನೀರು ಸರಬರಾಜು ಇಲಾಖೆಯ ನಿರ್ದೇಶಕ ಕೆ.ನಾಗೇಂದ್ರ ಪ್ರಸಾದ್ ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News